ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಉಗ್ರರ ಡ್ರೋನ್‌ ಕಾಟ

ದಾಳಿ ನಡೆಸಲು, ಶಸ್ತ್ರಾಸ್ತ್ರ, ಬಾಂಬ್‌ ರವಾನೆಗೆ ಡ್ರೋನ್‌ ಬಳಕೆ: ಜಮ್ಮು–ಕಾಶ್ಮೀರ ಪೊಲೀಸ್‌
Last Updated 2 ಜುಲೈ 2021, 20:01 IST
ಅಕ್ಷರ ಗಾತ್ರ

ಜಮ್ಮು: ಪಾಕಿಸ್ತಾನ ಕೇಂದ್ರಿತ ಉಗ್ರಗಾಮಿ ಸಂಘಟನೆಗಳು ಭಾರತ ವಿರುದ್ಧದ ಹೋರಾಟದಲ್ಲಿ ಡ್ರೋನ್‌ಗಳನ್ನು ಬಳಸುತ್ತಿವೆ ಎಂಬುದಕ್ಕೆ ಮತ್ತೆ ಮತ್ತೆ ಪುಷ್ಟಿ ದೊರೆಯುತ್ತಿದೆ. ಲಷ್ಕರ್‌ ಎ ತಯಬಾ (ಎಲ್‌ಇಟಿ) ಮತ್ತು ಜೈಷ್‌ ಎ ಮೊಹಮ್ಮದ್‌ ಸಂಘಟನೆಗಳು ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ, ಕಚ್ಚಾಬಾಂಬ್‌ ಮತ್ತು ಮಾದಕ ಪದಾರ್ಥಗಳನ್ನು ಜಮ್ಮು–ಕಾಶ್ಮೀರಕ್ಕೆ ರವಾನಿಸುತ್ತಿವೆ ಎಂದು ಅಲ್ಲಿನ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ.

ಡ್ರೋನ್‌ಗಳು ಒಡ್ಡಿರುವ ಸವಾಲು ಎದುರಿಸಲು ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆ ನೆಲೆಯ ಮೇಲೆ ಜೂನ್‌ 27ರಂದು ಡ್ರೋನ್‌ ಮೂಲಕ ದಾಳಿ ನಡೆದ ಬಳಿಕ ಇನ್ನೂ ಹೆಚ್ಚಿನ ಎಚ್ಚರ ವಹಿಸಲಾಗಿದೆ ಎಂದು ದಿಲ್‌ಬಾಗ್‌ ಸಿಂಗ್‌ ತಿಳಿಸಿದ್ದಾರೆ.

ವಾಯುನೆಲೆಯ ಮೇಲೆ ನಡೆದ ಎರಡು ಡ್ರೋನ್‌ ದಾಳಿಗಳ ಹಿಂದೆ ಎಲ್‌ಇಟಿ ಕೈವಾಡ ಇದೆ ಎಂಬ ಶಂಕೆ ಇದೆ. ಆ ದಿಸೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಈ ದಾಳಿಗೂ ಮುನ್ನ ಜಮ್ಮುವಿನಲ್ಲಿ ಡ್ರೋನ್‌ ಮೂಲಕ ಶಸ್ತ್ರಾಸ್ತ್ರ ಇಳಿಸಿದ 10–12 ಪ್ರಕರಣಗಳು ಪತ್ತೆಯಾಗಿದ್ದವು. ಹೀಗೆ ಪತ್ತೆಯಾದ ಕಚ್ಚಾಬಾಂಬ್‌ಗಳಲ್ಲಿ ಆರ್‌ಡಿಎಕ್ಸ್‌ ಇತ್ತು. ಡ್ರೋನ್‌ ಮೂಲಕ ಸಾಗಿಸಲು ಸಾಧ್ಯವಾಗುವ ರೀತಿಯಲ್ಲಿಯೇ ಈ ಬಾಂಬ್‌ಗಳನ್ನು ತಯಾರಿಸಲಾಗಿತ್ತು. ದೇಶವಿರೋಧಿ ಶಕ್ತಿಗಳು ಡ್ರೋನ್‌ ಬಳಸುತ್ತಿರುವುದು ದೇಶದ ಭದ್ರತೆಗೆ ಬಹುದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದೆ ಎಂದು ದಿಲ್‌ಬಾಗ್‌ ತಿಳಿಸಿದ್ದಾರೆ.

ಹೈಕಮಿಷನ್‌ ಕಚೇರಿ ಮೇಲೆ ಹಾರಾಟ
ನವದೆಹಲಿ
: ‘ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಆವರಣದಲ್ಲಿ ಕಳೆದ ವಾರ ಡ್ರೋನ್‌ ಹಾರಾಟ ನಡೆದಿದೆ. ಈ ಸಂಬಂಧ ಭಾರತೀಯ ಹೈಕಮಿಷನ್ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಜಮ್ಮುವಿನಲ್ಲಿ ಜೂನ್‌ 27ರಂದು ವಾಯುಪಡೆ ಠಾಣೆಯ ಮೇಲೆ ಡ್ರೋನ್‌ ದಾಳಿ ನಡೆದ ನಂತರ, ಈ ಘಟನೆ ವರದಿಯಾಗಿದೆ. ‘ನಮ್ಮ ಹೈಕಮಿಷನ್ ಕಚೇರಿ ಸಂಕೀರ್ಣದ ಮೇಲೆ ಮತ್ತು ಆವರಣದಲ್ಲಿ ಅನಧಿಕೃತವಾಗಿ ಡ್ರೋನ್ ಹಾರಾಟ ನಡೆಸಿರುವುದು ಭದ್ರತಾ ಲೋಪ ಎಂದು ಪರಿಗಣಿಸಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪಾಕಿಸ್ತಾನದ ಸಂಬಂಧಿತ ಪ್ರಾಧಿಕಾರಕ್ಕೆ ಭಾರತೀಯ ಹೈಕಮಿಷನ್ ಪತ್ರ ಬರೆದಿದೆ. ಆ ಮೂಲಕ ಪ್ರತಿಭಟನೆ ದಾಖಲಿಸಿದೆ ಎಂದು ಮೂಲಗಳು ಹೇಳಿವೆ.

ಗಡಿ ದಾಟಲು ಯತ್ನಿಸಿದ ಡ್ರೋನ್‌
ಗೂಢಚರ್ಯೆ ಉದ್ದೇಶದ ಡ್ರೋನ್‌ ಒಂದುಪಾಕಿಸ್ತಾನದ ಕಡೆಯಿಂದ ಭಾರತದ ಗಡಿ ಪ್ರವೇಶಿಸಲು ಶುಕ್ರವಾರ ಬೆಳಗ್ಗಿನ ಜಾವ ಯತ್ನಿಸಿದೆ. ಡ್ರೋನ್‌ ಅನ್ನು ಹೊಡೆದುರುಳಿಸಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಯತ್ನಿಸಿದಾಗ ಅದು ಹಿಂತಿರುಗಿದೆ ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ.

‘ಜಮ್ಮುವಿನ ಹೊರಭಾಗದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಣ ಅಂತರರಾಷ್ಟ್ರೀಯ ಗಡಿಯ ಅರ್ನಿಯಾ ವಲಯದಲ್ಲಿ ಶುಕ್ರವಾರ ಬೆಳಿಗ್ಗೆ 4.25ಕ್ಕೆ ಡ್ರೋನ್‌ ಕಾಣಿಸಿಕೊಂಡಿದೆ. ಪಾಕಿಸ್ತಾನದ ಕಡೆಯಿಂದ ಗಡಿಯನ್ನು ದಾಟಿ ಡ್ರೋನ್‌ ಭಾರತದ ಗಡಿಯನ್ನು ಪ್ರವೇಶಿಸಿತ್ತು. ಬಿಎಸ್ಎ‌ಫ್ ಸಿಬ್ಬಂದಿ ಅದನ್ನು ಹೊಡೆದುರುಳಿಸಲು ಆರು ಸುತ್ತು ಗುಂಡು ಹಾರಿಸಿದರು. ಅಷ್ಟರಲ್ಲೇ ಅದು ಪಾಕಿಸ್ತಾನದ ಕಡೆಗೆ ವಾಪಸಾಯಿತು’ ಎಂದು ಬಿಎಸ್‌ಎಫ್ ಹೇಳಿದೆ. ಜೂನ್ 27ರ ಭಾನುವಾರ ಡ್ರೋನ್‌ ಮೂಲಕ ಬಾಂಬ್‌ ದಾಳಿ ನಡೆದ ನಂತರ ಕಟ್ಟೆಚ್ಚರ ವಹಿಸಲಾಗಿದೆ. ಇದರ ಮಧ್ಯೆಯೇ ಸೋಮವಾರ, ಮಂಗಳವಾರ ಮತ್ತು ಬುಧವಾರ ಜಮ್ಮುವಿನ ಹಲವೆಡೆ ಶಂಕಾಸ್ಪದ ಡ್ರೋನ್‌ಗಳ ಹಾರಾಟವನ್ನು ಪತ್ತೆ ಮಾಡಲಾಗಿದೆ ಎಂದು ಭದ್ರತಾ ಪಡೆಗಳು ಹೇಳಿವೆ.

ಈಗ ಜಮ್ಮುವಿನಲ್ಲಿ ಸಾರ್ವಜನಿಕರು ಯಾವುದೇ ರೀತಿಯ ಡ್ರೋನ್ ಹಾರಾಟ ನಡೆಸದಂತೆ ಸೂಚನೆ ನೀಡಲಾಗಿದೆ.

ಕೇರಳದಲ್ಲಿ ಡ್ರೋನ್‌ ಲ್ಯಾಬ್‌
‘ಡ್ರೋನ್‌ಗಳು ತಂದೊಡ್ಡಿರುವ ಅಪಾಯ ಮತ್ತು ಸವಾಲುಗಳನ್ನು ಎದುರಿಸುವ ಸಲುವಾಗಿ ಕೇರಳದಲ್ಲಿ ಡ್ರೋನ್‌ ಸಂಶೋಧನಾ ಪ್ರಯೋಗಾಲಯವನ್ನು ಆರಂಭಿಸಲಾಗುತ್ತದೆ. ಕೇರಳ ಪೊಲೀಸ್‌ ಇಲಾಖೆ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಇದು ಆರಂಭವಾಗಲಿದೆ’ ಎಂದು ಕೇರಳ ಪೊಲೀಸ್ ಮಹಾನಿರ್ದೇಶಕ ಅನಿಲ್‌ ಕಾಂತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT