ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೂ ರೀತಿಯ ಭಾರತ: ಕಮಿಡಿಯನ್ ವೀರ್‌ ದಾಸ್‌ ಹೇಳಿಕೆಗೆ ಕೆಲವರ ಬೆಂಬಲ, ಆಕ್ಷೇಪ

Last Updated 17 ನವೆಂಬರ್ 2021, 22:28 IST
ಅಕ್ಷರ ಗಾತ್ರ

ನವದೆಹಲಿ: ಸ್ಟ್ಯಾಂಡ್‌ಅಪ್ ಕಮಿಡಿಯನ್ (ವಿಡಂಬನಕಾರ) ವೀರ್‌ ದಾಸ್ ಅವರು ‘ಐ ಕಮ್ ಫ್ರಮ್ ಇಂಡಿಯಾ’ ಹೆಸರಿನ 6 ನಿಮಿಷಗಳ ವಿಡಿಯೊವನ್ನು ಯೂಟ್ಯೂಬ್‌ಗೆ ಸೋಮವಾರ ಅಪ್‌ಲೋಡ್ ಮಾಡಿದ್ದರು. ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿರುವ ಜಾನ್‌ ಎಫ್.ಕೆನಡಿ ಸಭಾಂಗಣದಲ್ಲಿ ಇತ್ತೀಚೆಗೆ ಅವರು ನೀಡಿದ್ದ ಕಾರ್ಯಕ್ರಮದ ಆಯ್ದ ಭಾಗ ಈ ವಿಡಿಯೊದಲ್ಲಿದೆ. ರೈತರ ಪ್ರತಿಭಟನೆ, ಕೋವಿಡ್‌ ವಿರುದ್ಧದ ಹೋರಾಟ, ಮಹಿಳೆಯರಿಗೆ ಗೌರವ ನೀಡುವಲ್ಲಿ ಇರುವ ದ್ವಂದ್ವ ಸೇರಿದಂತೆ ಹಲವು ವಿಚಾರಗಳನ್ನು ಅವರು ತಮ್ಮ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರತಿ ಮಾತಿಗೂ ‘ನಾನು ಎರಡೂ ರೀತಿಯ ಭಾರತದಿಂದ ಬಂದಿದ್ದೇನೆ’ ಎಂದು ಅವರು ಹೇಳುತ್ತಾ ಹೋಗುತ್ತಾರೆ. ಇವರ ಮಾತುಗಳಿಗೆ ಭಾರಿ ಪರ–ವಿರೋಧ ವ್ಯಕ್ತವಾಗುತ್ತಿದೆ. ಅವರ ವಿರುದ್ಧ ದೂರು ಸಹ ದಾಖಲಾಗಿದೆ.

ವೀರ್ ದಾಸ್ ಹೇಳಿದ್ದೇನು?

* ನಾನು ಬಂದಿರುವ ಭಾರತದಲ್ಲಿ ಹಗಲಿನ ಹೊತ್ತು ಮಹಿಳೆಯರನ್ನು ಪೂಜಿಸಲಾಗುತ್ತದೆ, ರಾತ್ರಿ ಹೊತ್ತು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ

* ಪ್ರತಿ ಬಾರಿಯೂ ನಮಗೆ ಮಾಹಿತಿ ಸಿಕ್ಕಾಗ, ನಾವು ಪ್ರಧಾನಿ ಬಗ್ಗೆ ಕಾಳಜಿ ತೋರಿಸುತ್ತೇವೆ, ಆದರೆ ಪಿಎಂ ಕೇರ್ಸ್‌ ಕುರಿತು ನಮಗೆ ಯಾವುದೇ ಮಾಹಿತಿ ಸಿಗುವುದಿಲ್ಲ

* ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಸಿಖ್ ಸಮುದಾಯಗಳಿಂದ ಕೂಡಿರುವ ಭಾರತದಿಂದ ನಾನು ಬಂದಿದ್ದೇನೆ. ಮುಗಿಲಿನತ್ತ ನೋಡಿದಾಗ ನಮಗೆಲ್ಲರಿಗೂ ಕಾಣುವ ಒಂದು ಸಾಮಾನ್ಯ ಅಂಶವೆಂದರೆ, ಗಗನಮುಖಿಯಾಗಿರುವ ಪೆಟ್ರೋಲ್ ದರ

* ಪಾಕಿಸ್ತಾನಕ್ಕೆ ಹೋಗಿ ಎಂದು ಪ್ರತಿದಿನ ನಿರ್ದೇಶಿಸುವ ಭಾರತವು, ಕ್ರಿಕೆಟ್ ಮೈದಾನದಲ್ಲಿ ಎದುರುಗೊಳ್ಳುವಂತೆ ಪಾಕಿಸ್ತಾನೀಯರಿಗೆ ಆಹ್ವಾನ ನೀಡುತ್ತದೆ

* ಮಾಸ್ಕ್ ಧರಿಸಿರುವ ಮಕ್ಕಳು ಪರಸ್ಪರರ ಕೈಹಿಡಿದು ನಡೆಯುತ್ತಾರೆ, ಇದೇ ದೇಶದಲ್ಲಿ ಮಾಸ್ಕ್ ಧರಿಸದ ನಾಯಕರು ಪರಸ್ಪರ ಆಲಂಗಿಸುತ್ತಾರೆ

* ನಾವು ಸಸ್ಯಾಹಾರಿಗಳು ಎಂದು ಹೆಮ್ಮೆಪಡುತ್ತೇವೆ, ಆದರೆ ತರಕಾರಿಗಳನ್ನು ಬೆಳೆಯುವ ರೈತರನ್ನು ಓಡಿಸುತ್ತೇವೆ

* ನಾವು ದೇಶದ ಸೈನಿಕರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ, ಅದು ಅವರ ಪಿಂಚಣಿ ವಿಷಯ ಚರ್ಚೆಗೆ ಬರುವವರೆಗೆ ಮಾತ್ರ

* 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರೇ ಹೆಚ್ಚು ಇರುವ ಅತಿದೊಡ್ಡ ದೇಶ ನಮ್ಮದು. ಆದರೆ, ಈಗಲೂ 75 ವರ್ಷ ಮೀರಿದ ನಾಯಕರ 150 ವರ್ಷ ಹಳೆಯ ಚಿಂತನೆಗಳನ್ನು ಕೇಳಿಸಿಕೊಳ್ಳಬೇಕಿದೆ

* ನಾವು ಬ್ರಿಟಿಷರನ್ನು ಹೊಡೆದೋಡಿಸಿದ್ದೇವೆ, ಆದರೆ ಸರ್ಕಾರವನ್ನು ಆಳುವ ಪಕ್ಷ ಎಂದು ಕರೆಯುತ್ತೇವೆ

* ಕೆಲಸದವರು, ವಾಹನ ಚಾಲಕರನ್ನು ನೇಮಿಸಿಕೊಂಡಿರುವ ನಾವು, ಕೆಲಸಕ್ಕಾಗಿ ಅಮೆರಿಕಕ್ಕೆ ಪ್ರಯಾಣಿಸುತ್ತೇವೆ.

ದಾಸ್ ವಿರುದ್ಧ ದೂರು ದಾಖಲು

ವೀರ್ ದಾಸ್ ವಿರುದ್ಧ ಮುಂಬೈ ಹಾಗೂ ದೆಹಲಿಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷ ಆದಿತ್ಯ ಝಾ ಹಾಗೂ ಮುಂಬೈ ವಕೀಲ ಅಶುತೋಷ್ ಜೆ ದುಬೆ ಅವರು ದೂರು ದಾಖಲಿಸಿದ್ದಾರೆ. ದಾಸ್ ಅವರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಹೀಯಾಳಿಸುವ ಹೇಳಿಕೆ ನೀಡುವ ಮೂಲಕ ದೇಶದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂದು ಝಾ ಆರೋಪಿಸಿದ್ದಾರೆ.

ಸಿಬಲ್, ತರೂರ್‌, ಮೊಯಿತ್ರಾ ಬೆಂಬಲ

ಕಾಂಗ್ರೆಸ್ ಮುಖಂಡರಾದ ಕಪಿಲ್ ಸಿಬಲ್, ಶಶಿ ತರೂರ್, ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಅವರೂ ದಾಸ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಎರಡು ರೀತಿಯ ಭಾರತವಿದೆ ಎಂಬುದರಲ್ಲಿ ಅನುಮಾನವಿಲ್ಲ.ಒಬ್ಬ ಭಾರತೀಯನು ಇದರ ಬಗ್ಗೆ ಜಗತ್ತಿನ ಮುಂದೆ ಹೇಳುವುದುನ್ನು ನಾವು ಇಷ್ಟಪಡುವುದಿಲ್ಲ. ನಾವು ಅಸಹಿಷ್ಣುಗಳು ಮತ್ತು ಕಪಟಿಗಳು’ ಎಂದು ಎಂದು ಸಿಬಲ್ ಟ್ವೀಟ್ ಮಾಡಿದ್ದಾರೆ.

ಲಕ್ಷಾಂತರ ಜನರ ಪರವಾಗಿ ವೀರ್ ದಾಸ್ ಮಾತನಾಡಿದ್ದಾರೆ ಎಂದು ಶಶಿ ತರೂರ್ ಹೇಳಿದ್ದಾರೆ.‘ಸ್ಟ್ಯಾಂಡ್‌ಅಪ್ ಎಂಬುದರ ನೈಜ ಅರ್ಥವನ್ನು ದಾಸ್ ತಿಳಿದುಕೊಂಡಿದ್ದಾರೆ.ಸ್ಟ್ಯಾಂಡ್‌ಅಪ್ ಎಂಬುದು ಕೇವಲ ದೈಹಿಕವಲ್ಲ, ಅದು ನೈತಿಕ’ ಎಂದಿದ್ದಾರೆ.

‘ಎರಡು ರೀತಿಯ ಭಾರತ’ದ ಬಗ್ಗೆ ಸತ್ಯ ಮಾತನಾಡಲು ಧೈರ್ಯ ತೋರಿದ ದಾಸ್‌ ಅವರನ್ನು ಮೊಹುವಾ ಮೊಯಿತ್ರಾ ಶ್ಲಾಘಿಸಿದ್ದಾರೆ. ‘ಒಬ್ಬರು ನಗಿಸುತ್ತಿದ್ದರೆ, ಉಳಿದವರು ಪೊಲೀಸರಿಗೆ ದೂರು ನೀಡುತ್ತಿದ್ದಾರೆ’ ಎಂದು ‘ಎರಡು ರೀತಿಯ ಭಾರತ’ ಎಂಬ ಪದ ಪ್ರಯೋಗದ ಜೊತೆ ಹೋಲಿಸಿದ್ದಾರೆ.

ಹಿಂದಿ ಚಿತ್ರರಂಗದ ಹನ್ಸಲ್ ಮೆಹ್ತಾ, ಪೂಜಾ ಭಟ್ ಮೊದಲಾದವರೂ ಸಹ ವೀರ್ ಅವರ ಧೈರ್ಯವನ್ನು ಕೊಂಡಾಡಿದ್ದಾರೆ.

ಸಿಂಘ್ವಿ, ಕಂಗನಾ ವಿರೋಧ

ಕಾಂಗ್ರೆಸ್ ನಾಯಕ ಸಿಂಘ್ವಿ ಅವರು ವೀರ್ ದಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಕೆಲವು ವ್ಯಕ್ತಿಗಳ ದುಷ್ಕೃತ್ಯಗಳನ್ನು ಸಾಮಾನ್ಯೀಕರಿಸುವುದು ಮತ್ತು ಇಡೀ ರಾಷ್ಟ್ರವನ್ನು ಪ್ರಪಂಚದ ಮುಂದೆ ನಿಂದಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ. ‘ಹಾವಾಡಿಗರ ದೇಶ ಎಂದು ಪಾಶ್ಚಿಮಾತ್ಯ ದೇಶಗಳ ಎದುರು ವ್ಯಂಗ್ಯ ಮಾಡಿದವರು ಈಗಿಲ್ಲ’ ಎಂದಿದ್ದಾರೆ.

‘ದಾಸ್ ಮಾತು ಮೆದು ಭಯೋತ್ಪಾದನೆ‘ ಎಂದು ಆರೋಪಿಸಿರುವ ಬಾಲಿವುಡ್ ನಟಿಕಂಗನಾ ರನೌತ್, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ‘ನೀವು ಎಲ್ಲಾ ಭಾರತೀಯ ಪುರುಷರನ್ನು ಸಾಮೂಹಿಕ ಅತ್ಯಾಚಾರಿಗಳು ಎಂದು ಸಾಮಾನ್ಯೀಕರಿಸಿದಾಗ ಅದು ಜನಾಂಗೀಯತೆಗೆ ಮತ್ತು ಪ್ರಪಂಚದಾದ್ಯಂತ ಭಾರತೀಯರನ್ನು ಬೆದರಿಸಲು ಉತ್ತೇಜನ ನೀಡುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT