ಮಂಗಳವಾರ, ಜುಲೈ 27, 2021
25 °C

ಕೊರೊನಾ ಲಾಕ್‌ಡೌನ್‌: ಸಂಬಳ, ಕೆಲಸ ಕಳೆದುಕೊಂಡವರಲ್ಲಿ ಮಹಿಳೆಯರೇ ಹೆಚ್ಚು

ಏಜೆನ್ಸಿ Updated:

ಅಕ್ಷರ ಗಾತ್ರ : | |

PTI Photo

ಕೊರೊನಾ ವೈರಸ್‌ 2ನೇ ಅಲೆ ರಾಷ್ಟ್ರದೆಲ್ಲೆಡೆ ಭಾರಿ ಪ್ರಮಾಣದ ಸಾವು-ನೋವಿಗೆ ಕಾರಣವಾಗಿದ್ದು, ಸೋಂಕು ತಡೆಗೆ ಹರಸಾಹಸ ಮಾಡುತ್ತಿರುವ ಸರ್ಕಾರಗಳು ಲಾಕ್‌ಡೌನ್‌ ಮೊರೆ ಹೋಗಿವೆ. ಆದರೆ ಇದರ ಪರಿಣಾಮ ಈ ವರ್ಷವೂ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ನಷ್ಟ ಉಂಟುಮಾಡಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೊರೊನಾ ವೈರಸ್‌ ಮತ್ತು ಲಾಕ್‌ಡೌನ್‌ನಿಂದ ವಿಶ್ವದಲ್ಲೇ ಅತಿಹೆಚ್ಚು ಪ್ರಮಾಣದ ನಷ್ಟ ಭಾರತದ ಮಹಿಳೆಯರಿಗೆ ಆಗಿದೆ. ಕಳೆದ ವರ್ಷಕ್ಕಿಂತ ಅಧಿಕ ಪ್ರಮಾಣದ ನಷ್ಟ ಮಹಿಳೆಯರಿಗೆ ಸಂಭವಿಸಿದೆ. ಉದ್ಯೋಗ ಕಳೆದುಕೊಂಡವರು ಮತ್ತು ಸಂಬಳ ಕಡಿತಕ್ಕೆ ಒಳಗಾದವರ ಪೈಕಿ ಮಹಿಳೆಯರೇ ಅಧಿಕ ಎಂದು 'ಬ್ಲೂಮ್‌ಬರ್ಗ್‌ ನ್ಯೂಸ್‌ ಶೋ' ಸಂಗ್ರಹಿಸಿದ ಮಾಹಿತಿಯಲ್ಲಿ ತಿಳಿಸಿದೆ.

ಲಾಕ್‌ಡೌನ್‌ಗಿಂತ ಮೊದಲು ಒಂದು ವಾರಕ್ಕೆ ₹769 ವರೆಗೆ ದುಡಿಯುತ್ತಿದ್ದ ಮಹಿಳೆಯರು ಲಾಕ್‌ಡೌನ್‌ ನಂತರ ಹೆಚ್ಚೆಂದರೆ ವಾರಕ್ಕೆ ₹180 ದುಡಿಯುತ್ತಿದ್ದಾರೆ. ಏಪ್ರಿಲ್‌ ತಿಂಗಳಿನಲ್ಲಿ ಅತಿಹೆಚ್ಚು ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಕಳೆದ ಜನವರಿಯಿಂದಲೂ ಪುರುಷರಿಗೆ ಹೋಲಿಸಿದರೆ ಕೆಲಸ ಕಳೆದುಕೊಳ್ಳುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚು. ಇದರಿಂದ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಪುನಃಶ್ಚೇತನಗೊಳ್ಳಲು ಕಠಿಣವಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.

ಸಂಬಳ ಕಡಿತದಿಂದ ಉದ್ಯೋಗ ನಷ್ಟದ ವರೆಗೆ ಮತ್ತು ಲಸಿಕೆ ಹಾಕುವ ಪ್ರಕ್ರಿಯೆ ನಿಧಾನಗತಿಯಿಂದ ಸಾಯುತ್ತಿರುವವರ ಸಂಖ್ಯೆ ಪುರುಷರಿಗಿಂತ ಮಹಿಳೆಯರದ್ದೇ ಹೆಚ್ಚು. ವಿಶ್ವಕ್ಕೆ ಹೋಲಿಸಿದರೆ ಭಾರತೀಯ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೂ ಹೆಚ್ಚು ಪರಿಣಾಮ ಬೀರಿದೆ ಎಂದು ವಿವರಿಸಲಾಗಿದೆ.

ಭಾರತದಲ್ಲಿ ಮಹಿಳೆಯ ಮೇಲೆ ಕೊರೊನಾ ವೈರಸ್‌ ಬೀರಿದ ಪರಿಣಾಮ:

 

ಪುರಷರಿಗಿಂತ 2 ಪಟ್ಟು ಹೆಚ್ಚು ಉದ್ಯೋಗ ನಷ್ಟ:
ಅತ್ಯಂತ ವೇಗವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್‌ ತಡೆಗೆ ರಾಜ್ಯ ಸರ್ಕಾರಗಳು ಹೇರಿರುವ ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ತಿಂಗಳಲ್ಲಿ 1.7 ಕೋಟಿ ಉದ್ಯೋಗ ನಷ್ಟ ಸಂಭವಿಸಿದೆ. ಮಹಿಳೆಯರ ಮೇಲೆ ಹೆಚ್ಚು ಕೆಟ್ಟ ಪರಿಣಾಮ ಬೀರಿದೆ. ಮಹಿಳೆಯರ ನಿರುದ್ಯೋಗ ಪ್ರಮಾಣ ಶೇ.17ಕ್ಕೆ ಏರಿಕೆಯಾಗಿದೆ. ಪುರುಷರಿಗೆ ಹೋಲಿಸಿದರೆ ಎರಡು ಪಟ್ಟು ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ ಸಂಸ್ಥೆ(ಸಿಎಂಐಯು) ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.

ಹೊಸ ಉದ್ಯೋಗದತ್ತ ನಿರುತ್ಸಾಹ:
ಉದ್ಯೋಗ ಕಳೆದುಕೊಂಡ ಮಹಿಳೆಯರು ಹೊಸ ಉದ್ಯೋಗವನ್ನು ಹುಡುಕುತ್ತಿಲ್ಲ. ಯುವ ಜನತೆ ಮತ್ತು ಮಹಿಳೆಯರು ಹೆಚ್ಚು ಆರ್ಥಿಕ ಆಘಾತಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಉದ್ಯೋಗವನ್ನು ನಿಭಾಯಿಸುವುದು ಕಷ್ಟ. ಸಂಚಾರ ವ್ಯವಸ್ಥೆ ಇಲ್ಲದೆ ಹೊರಗೆ ಓಡಾಡುವುದು ಕಷ್ಟ. ಸುರಕ್ಷಿತವಾಗಿ ಕಚೇರಿಗೆ ಹೋಗಿ ಬರುವಂತಹ ಸ್ಥಿತಿ ಈಗ ಇಲ್ಲ ಎಂಬುದು ಹೆಚ್ಚಿನ ಮಹಿಳೆಯರ ಅಭಿಪ್ರಾಯವಾಗಿದೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಮಹೇಶ್‌ ವ್ಯಾಸ್‌ ತಿಳಿಸಿದ್ದಾರೆ.

ಮಹಿಳೆಯರ ವಾರದ ಆದಾಯ, ಲಾಕ್‌ಡೌನ್‌ಗೂ ಮೊದಲು ಮತ್ತು ನಂತರ:

ಹೆಚ್ಚಿದ ಲಿಂಗ ಸಮಾನತೆಯ ಅಂತರ:
ಲಾಕ್‌ಡೌನ್‌ನಿಂದಾಗಿ ಮಹಿಳೆಯರ ವಾರದ ಆದಾಯ ಶೇ.76ರಷ್ಟು ಇಳಿಕೆಯಾಗಿದೆ. ಆರೋಗ್ಯ ಮತ್ತು ಆಹಾರಕ್ಕಾಗಿ ಉಳಿತಾಯ ಮಾಡಿಕೊಂಡಿದ್ದ ದುಡ್ಡಿನ ಮೇಲೆ ಅವಲಂಬಿತರಾಗಿದ್ದಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಕುಗ್ಗಿದ್ದಾರೆ. ವಿಶ್ವಕ್ಕೆ ಹೋಲಿಸಿದರೆ ಭಾರತೀಯ ಮಹಿಳೆಯರಿಗೆ ಹೆಚ್ಚು ಪರಿಣಾಮ ಬೀರಿದೆ ಎಂದು ಇತ್ತೀಚಿನ ಡೆಲಾಯ್ಟೆ ಅಧ್ಯಯನ ವರದಿ ಹೇಳಿತ್ತು. ಇದು ಪುರುಷ ಮತ್ತು ಮಹಿಳೆಯರ ನಡುವಣ ಸಮಾನತೆಯ ಅಂತರವನ್ನು ಹೆಚ್ಚಿಸಲಿದೆ. ವಿಶ್ವದಲ್ಲೇ ಅತಿಹೆಚ್ಚು ಅಂತರವೆನಿಸಲಿದೆ. ಪುರಷರಿಗಿಂತ ಮಹಿಳೆಯರ ಆದಾಯ ಶೇ.35ಕ್ಕೆ ಕುಸಿಯಲಿದೆ ಎಂದು ವರದಿ ಹೇಳಿದೆ.

ಲಸಿಕೆ ಪಡೆಯುವಲ್ಲೂ ಮಹಿಳೆಯರು ಹಿಂದೆ:
ಶೇ.85ರಷ್ಟು ಮಹಿಳೆಯರಿಗೆ ಕೋವಿಡ್‌ ಲಸಿಕೆ ಬಗ್ಗೆ ಅರಿವಿದೆ. ಆದರೆ ಶೇ.39ರಷ್ಟು ಮಹಿಳೆಯರು ಮಾತ್ರ ಕೋವಿಡ್‌ ಲಸಿಕೆ ಪಡೆಯಲು ಮುಂದೆ ಬಂದಿದ್ದಾರೆ. ಹೆಚ್ಚು ಸಂಖ್ಯೆಯ ಮಹಿಳೆಯರು ಹಿಂದುಳಿಯಲು ಹಲವು ಕಾರಣಗಳಿವೆ. ಪ್ರಮುಖವಾಗಿ ಮೊದಲು ಮನೆ ಮಂದಿಗೆಲ್ಲ ಲಸಿಕೆ ಸಿಗಲಿ, ಕೊನೆಗೆ ತೆಗೆದುಕೊಳ್ಳುವ ತಾಯಿ ಹೃದಯ. ಪುರುಷ ಪ್ರಧಾನ ಸಮಾಜಕ್ಕೆ ಒಗ್ಗಿಕೊಂಡಿರುವುದರಿಂದ ಸಹಜವಾಗಿ ಪುರುಷರು ಏನು ಹೇಳುತ್ತಾರೆ ಎಂಬುದರ ಮೇಲೆ ಮಹಿಳೆಯರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಟಪ್ಟ್‌ ವಿಶ್ವವಿದ್ಯಾಲಯದ ಫ್ಲೆಚರ್‌ ಸ್ಕೂಲ್‌ನ ಗ್ಲೋಬಲ್‌ ಬ್ಯುಸಿನೆಸ್‌ನ ಮುಖ್ಯಸ್ಥ ಭಾಸ್ಕರ್‌ ಚಕ್ರವರ್ತಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು