ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ಧತೆ ಇಲ್ಲದೆ ಫಲಿತಾಂಶ ನಿರ್ಣಯಿಸಿದ ಸಿಬಿಎಸ್‌ಇ’

10ನೇ ತರಗತಿ ಫಲಿತಾಂಶ ಮಾನದಂಡ: ಪ್ರಾಂಶುಪಾಲರು, ವಿದ್ಯಾರ್ಥಿಗಳ ಅಸಮಾಧಾನ
Last Updated 2 ಜುಲೈ 2021, 20:13 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಈ ಬಾರಿ ಹತ್ತನೇ ತರಗತಿ ಫಲಿತಾಂಶ ನೀಡಲು ಅನುಸರಿಸಿದ ಮಾನದಂಡಗಳು ಮತ್ತು ಪ್ರಕ್ರಿಯೆಯ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಕಾಡೆಮಿ ಫಾರ್‌ ಕ್ರಿಯೇಟಿವ್‌ ಟೀಚಿಂಗ್ (ಎಸಿಟಿ) ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ 242 ಪ್ರಾಂಶುಪಾಲರು, ಶಿಕ್ಷಕರು ಮತ್ತು ಸಿಬಿಎಸ್‌ಇ ಪಠ್ಯಕ್ರಮದ 833 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಮಾರ್ಗದರ್ಶನದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.

ಇಂತಹ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ, ಮಂಡಳಿಯು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು ಎಂಬುದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 81ರಷ್ಟು ಜನರ ಅಭಿಪ್ರಾಯವಾಗಿದೆ.

ಶೈಕ್ಷಣಿಕ ಸಾಮರ್ಥ್ಯ ಮತ್ತು ಪ್ರಗತಿಯ ಮೇಲೆ ಕೋವಿಡ್‌ ಸಾಂಕ್ರಾಮಿಕವು ದುಷ್ಪರಿಣಾಮ ಬೀರಿದೆ ಎಂದು ಶೇ 73ರಷ್ಟು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

‌ಪರೀಕ್ಷೆಯನ್ನು ರದ್ದು ಪಡಿಸಿ, ಗ್ರೇಡ್‌ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ್ದು ಸರಿಯಾದ ಕ್ರಮವಲ್ಲ ಎಂದು ಬಹುತೇಕರು ಹೇಳಿದ್ದಾರೆ. ಆದರೆ, ಶೇ 48ರಷ್ಟು ಶಿಕ್ಷಕರು ಮತ್ತು ಪ್ರಾಂಶುಪಾಲರು, ಸಿಬಿಎಸ್‌ಇ ಕ್ರಮವನ್ನು ಸ್ವಾಗತಿಸಿದ್ದಾರೆ. ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ. ಶೇ 57ರಷ್ಟು ವಿದ್ಯಾರ್ಥಿಗಳು ಕೂಡ ಮಂಡಳಿಯು ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಉತ್ತೀರ್ಣಗೊಳಿಸುವುದಕ್ಕೆ ಶೇ 39 ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದರೆ, ಶೇ 32 ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಉಳಿದವರು ಈ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.

ಆಂತರಿಕ ಮೌಲ್ಯಮಾಪನ ಆಧರಿಸಿ, ಗ್ರೇಡ್‌ ನೀಡುವ ಇಡೀ ಪ್ರಕ್ರಿಯೆಯೇ ವ್ಯರ್ಥ ಪ್ರಯತ್ನ ಎಂದು ಶೇ 43ರಷ್ಟು ಶಿಕ್ಷಕರು ಹೇಳಿರುವುದಲ್ಲದೆ, ಈ ಪ್ರಕ್ರಿಯೆಯು ಬಹುಪಾಲು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅತೃಪ್ತಿ ನೀಡಿದೆ ಎಂದೂ ಹೇಳಿದ್ದಾರೆ ಎಂಬುದಾಗಿ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT