ಶುಕ್ರವಾರ, ಮೇ 27, 2022
26 °C
ಕೋಲ, ನೇಮಕ್ಕೂ ಸಂಚಕಾರ: ಆಕ್ರೋಶ

ಧ್ವನಿವರ್ಧಕ ನಿರ್ಬಂಧ: ಯಕ್ಷಗಾನಕ್ಕೂ ತೂಗುಗತ್ತಿ, ಕೋಲ, ನೇಮಕ್ಕೂ ಸಂಚಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಧ್ವನಿವರ್ಧಕ ಬಳಕೆ ಕುರಿತಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದೀಗ ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೂ ಕುತ್ತು ಬರಲಿದೆಯೇ ಎನ್ನುವ ಆತಂಕ ಕಾಡುತ್ತಿದೆ. ಸರ್ಕಾರ ರಾತ್ರಿ ವೇಳೆ ಧ್ವನಿವರ್ಧಕ ಬಳಕೆಗೆ ನಿರ್ಬಂಧ ವಿಧಿಸಿದ್ದರಿಂದ ಯಕ್ಷಗಾನ, ನಾಟಕ, ನೇಮ, ಕೋಲಗಳು ತೊಂದರೆ ಎದುರಿಸುವಂತಾಗಿದೆ.

ಸರ್ಕಾರದ ಸುತ್ತೋಲೆಯ ಪ್ರಕಾರ, ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ಒಳಾಂಗಣದ ಕಾರ್ಯಕ್ರಮಗಳಿಗೂ ಅನುಮತಿ ಪಡೆದುಕೊಂಡೇ ನಿಗದಿತ ಡೆಸಿಬಲ್‌ ಸಾಮರ್ಥ್ಯದ ಧ್ವನಿವರ್ಧಕ ಬಳಸಬೇಕು.

ಕರಾವಳಿ ಜಿಲ್ಲೆಗಳಲ್ಲಿ 6 ತಿಂಗಳು ನಿರಂತರವಾಗಿ ಯಕ್ಷಗಾನ ಪ್ರದರ್ಶನ ನಡೆಯುತ್ತವೆ. ಸಂಜೆ 6ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಈ ಅವಧಿಯಲ್ಲಿ ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ ವಿಧಿಸುವುದರಿಂದ ಯಕ್ಷಗಾನ ನಡೆಸು
ವುದು ದುಸ್ತರವಾಗಲಿದೆ ಎನ್ನುವ ಮಾತುಗಳು ಕಲಾವಿದರಿಂದ ಕೇಳಿ ಬರುತ್ತಿವೆ.

ಕಲಾವಿದರಿಗೆ ತೊಂದರೆ: ಯಕ್ಷಗಾನ ಮಾತ್ರವಲ್ಲದೇ, ನಾಟಕ ತಂಡಗಳಿಗೂ ಈ ಸುತ್ತೋಲೆಯಿಂದ ತೊಂದರೆ ಉಂಟಾಗಲಿದೆ. ಇದೀಗ ಕೋವಿಡ್–19 ಸುಳಿಯಿಂದ ಹೊರಬರುತ್ತಿರುವ ಕಲಾವಿದರು ಮತ್ತೊಮ್ಮೆ ಸಂಕಷ್ಟ ಎದುರಿಸುವಂತಾಗಿದೆ.

‘ನಾಟಕ ಹಾಗೂ ಯಕ್ಷಗಾನ ಕಲಾವಿದರು ಈಗ ತಕ್ಕಮಟ್ಟಿಗೆ ಆದಾಯ ಗಳಿಸುತ್ತಿದ್ದಾರೆ. ಸರ್ಕಾರ ಸುತ್ತೋಲೆ ಜಾರಿಗೆ ಬಂದರೆ, ಕಲಾವಿದರ ಕುಟುಂಬಗಳು ಬೀದಿಗೆ ಬೀಳುವ ಅಪಾಯವಿದೆ. ಇದರಿಂದ ದೊಡ್ಡ ಗೊಂದಲ ಸೃಷ್ಟಿಯಾಗಲಿದೆ’ ಎಂದು ಚಿತ್ರನಟ ತಮ್ಮಣ್ಣ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.

ಹಿಡಿಶಾಪ: ರಾಜ್ಯದಾದ್ಯಂತ ಆರಂಭ ವಾದ ಸುಪ್ರಭಾತ ಅಭಿಯಾನದಿಂದ ಯಕ್ಷಗಾನ ಕಲಾವಿದರು ಕಂಗೆಡು ವಂತಾಗಿದೆ ಎಂದು ಕರಾವಳಿಯ ಜನರು ಪ್ರಮೋದ್‌ ಮುತಾಲಿಕ್‌ ಹಾಗೂ ಅವರ ಬೆಂಬಲಿಗರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದ್ದು, ‘ಮುಸ್ಲಿಮರ ಒಂದು ಕಣ್ಣಿಗೆ ಹೊಡೆಯಲು ಹೋಗಿ, ನಮ್ಮ ಎರಡೂ ಕಣ್ಣು ಒಡೆದು ಹಾಕಿದ್ದಾರೆ’ ಎನ್ನುವ ಆಕ್ರೋಶ ವ್ಯಕ್ತವಾಗಿದೆ.

‘ಮುಸ್ಲಿಂ ದ್ವೇಷದಿಂದ ಮಸೀದಿಯ ಮೈಕ್‌ ತೆಗೆಸಲು ಹೋಗಿ ಕಲ್ಲು ಹಾಕಿಕೊಂಡಿದ್ದು ನಮ್ಮ ಅನ್ನಕ್ಕೆ. ಮೈಕ್‌ ಇಲ್ಲದಿದ್ದರೆ ಅವರಿಗೆ ಎಳ್ಳಷ್ಟೂ ನಷ್ಟವಿಲ್ಲ. ಸುಪ್ರೀಂ ಕೋರ್ಟ್‌ ಆದೇಶ ಕರಾವಳಿಗೆ ಬಲವಾದ ಕೊಡಲಿ ಏಟು’ ಎಂದು ವಾಸುದೇವ ಹೆಗ್ಗಡೆ ಎಂಬುವವರು ಹೇಳಿದ್ದಾರೆ. ‘ಶ್ರೀರಾಮಸೇನೆಯವರು ಧರ್ಮ ರಕ್ಷಕರಲ್ಲ, ಧರ್ಮ ಭಕ್ಷಕರು’ ಎಂದು ಹಲವರು ಆಕ್ರೋಶ ಹೊರಹಾಕುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು