ಬುಧವಾರ, ಅಕ್ಟೋಬರ್ 21, 2020
26 °C
ಮುನಿರತ್ನ, ಕುಸುಮಾ ಎಚ್‌., ಕೃಷ್ಣಮೂರ್ತಿ ಚುನಾವಣಾ ಕಣಕ್ಕೆ

ಆರ್.ಆರ್‌. ನಗರ: ಮೂರೂ ಪಕ್ಷಗಳಿಂದ ನಾಮಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯಿಂದ ಆರ್‌. ಮುನಿರತ್ನ, ಕಾಂಗ್ರೆಸ್‌ನಿಂದ ಎಚ್‌.ಕುಸುಮಾ  ಮತ್ತು ಜೆಡಿಎಸ್‌ನಿಂದ ವಿ.ಕೃಷ್ಣಮೂರ್ತಿ ಬುಧವಾರ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಚುನಾವಣಾ ಅಖಾಡ ತೀವ್ರ ಪೈಪೋಟಿಯ ಕಣವಾಗಿ ಮಾರ್ಪಟ್ಟಿದೆ.

ಮುನಿರತ್ನ ಅವರಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಇದು ಮೂರನೇ ಚುನಾವಣೆ. ಹಿಂದಿನ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಈ ಬಾರಿ ಪಕ್ಷ ಬದಲಿಸಿ ಬಿಜೆಪಿಯಿಂದ ಉಪ ಚುನಾವಣಾ ಕಣಕ್ಕಿಳಿದಿದ್ದಾರೆ. ಕುಸುಮಾ ಮತ್ತು ಕೃಷ್ಣಮೂರ್ತಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.

ಬಿಜೆಪಿ ನಗರ ಘಟಕದ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉಪಸ್ಥಿತಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಂದ ‘ಬಿ’ ಫಾರ್ಮ್‌ ಸ್ವೀಕರಿಸಿದ ಮುನಿರತ್ನ, ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಕಂದಾಯ ಸಚಿವ ಆರ್‌. ಅಶೋಕ ಅವರೊಂದಿಗೆ ರಾಜರಾಜೇಶ್ವರಿನಗರದ ಬಿಬಿಎಂಪಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಕುಸುಮಾ ಅವರು ನಾಮಪತ್ರ ಸಲ್ಲಿಸುವ ಮುನ್ನ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ ಹಿಂಭಾಗದಲ್ಲಿರುವ ಆಂಜನೇಯ ಸ್ವಾಮಿ ದೇವಾ ಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ ಸೇರಿದಂತೆ ಪಕ್ಷದ ಪ್ರಮುಖ ನಾಯಕರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮತ್ತು ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಜತೆಗಿದ್ದರು.

ಕರ್ನಾಟಕ ರಾಷ್ಟ್ರ ಸಮಿತಿಯಿಂದ ಅರವಿಂದ ಬಿಷ್ಠಪ್ಪ ನಾಯ್ಕನವರ್‌, ಕರುನಾಡು ಪಕ್ಷದಿಂದ ಎಚ್‌.ಎಂ. ಕಿಶೋರ್‌ ಗೌಡ, ಪಕ್ಷೇತರರಾಗಿ ಕಿರಣ್‌ ಬಿ.ಆರ್‌, ಸೈಯದ್ ಆಸಿಫ್‌ ಬುಖಾರಿ ಮತ್ತು ಸಿ.ಬಿ.ಕೆ. ರಾಮ ಈ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

‘ಹಗರಣ ಮುಚ್ಚಿಕೊಳ್ಳಲು ಬಿಜೆಪಿಗೆ’

‘ಹಿಂದೆ ಶಾಸಕರಾಗಿದ್ದ ಮುನಿರತ್ನ ಅವರು ಹಣ, ಅಧಿಕಾರದ ಆಸೆಗೆ ಮತ್ತು ಹಿಂದೆ ಮಾಡಿದ್ದ ಹಗರಣಗಳನ್ನು ಮುಚ್ಚಿಕೊಳ್ಳಲು ಬಿಜೆಪಿಗೆ ಹೋಗಿದ್ದಾರೆ. ಅವರು ಬಿಜೆಪಿ ಸೇರಿದ ತಕ್ಷಣ ಮತದಾರರೆಲ್ಲ ಬಿಜೆಪಿಗೆ ಹೋಗುವುದಿಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕುಸುಮಾ ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಅವರ ತಂದೆ ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಉಪ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ನಾಯಕರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ ಎಂದರು.

ಎರಡೂ ಸರ್ಕಾರಗಳಿಗೆ ಸಂದೇಶ

‘ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳಿಗೆ ಸಂದೇಶ ರವಾನಿಸುವುದಕ್ಕಾಗಿಯೇ ಈ ಉಪ ಚುನಾವಣೆ ಎದುರಿಸುತ್ತಿದ್ದೇವೆ. ರಾಜರಾಜೇಶ್ವರಿನಗರದಲ್ಲಿ ಎರಡು ಬಾರಿ ಸತತವಾಗಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಈ ಬಾರಿಯೂ ಗೆಲುವು ನಿಶ್ಚಿತ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಈ ಹಿಂದೆ ನಮ್ಮ ಅಭ್ಯರ್ಥಿಯಾಗಿದ್ದವರು ಏಕೆ ಬೇರೆ ಪಕ್ಷಕ್ಕೆ ಹೋದರು ಎಂಬುದರ ಕುರಿತು ಈಗ ಚರ್ಚೆ ಮಾಡುವುದಿಲ್ಲ. ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಇಬ್ಬರ ಆಟವೂ ನಡೆಯದು

‘ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಆಟಗಳು ನಡೆಯುವುದಿಲ್ಲ. ಕಾಂಗ್ರೆಸ್‌ನವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದರೆ, ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾದ ಬಿಜೆಪಿಯವರು ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಈ ಬಾರಿ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದ್ದೇವೆ. ನಾನೇ ಖುದ್ದಾಗಿ ಈ ಕ್ಷೇತ್ರದ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದೇನೆ’ ಎಂದರು.

‘ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ’

‘ಅಭಿವೃದ್ಧಿಯ ಹೆಸರಿನಲ್ಲಿ ನಾನು ಚುನಾವಣೆ ಎದುರಿಸುತ್ತಿದ್ದೇನೆ. ಯಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಮತದಾರರು ನನ್ನ ಕೈಬಿಡುವುದಿಲ್ಲ’ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದರು.

‘ಕಾಂಗ್ರೆಸ್‌ನವರು ಜ್ಯೋತಿಷಿಯ ಮಾತು ಕೇಳಿ ಮಹಿಳೆಯನ್ನು ಕಣಕ್ಕಿಳಿಸಿದ್ದಾರೆ. ಅವರು ರಾಜಕೀಯಕ್ಕೆ ಹೊಸಬರು. ನಾನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಅದೇ ಜ್ಯೋತಿಷಿ ಹೇಳಿದ್ದಾರೆ’ ಎಂದರು.

‘ಬಂಡೆ ಸ್ಫೋಟಿಸುವುದು ಗೊತ್ತು’

‘ಕನಕಪುರ ಬಂಡೆಯನ್ನು ಹೇಗೆ ಸ್ಫೋಟಿಸಬೇಕು ಎಂಬುದು ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಗೊತ್ತು. ಇಲ್ಲಿ ಯಾವ ಬಂಡೆಯ ಆಟವೂ ನಡೆಯುವುದಿಲ್ಲ’ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

‘ಇಂತಹ ಹಲವು ಚುನಾವಣೆಗಳನ್ನು ಎದುರಿಸಿದ್ದೇವೆ. ಈ ಬಾರಿ ಗೆಲುವು ಕಟ್ಟಿಟ್ಟ ಬುತ್ತಿ. ಜನರು ಆಡಳಿತ ಪಕ್ಷವನ್ನು ಬೆಂಬಲಿಸುತ್ತಾರೆ.  ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಅಂತರದಿಂದ ಮುನಿರತ್ನ ಗೆಲ್ಲುತ್ತಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು