ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನಕ್ಕೆ ಮೊದಲ ದಿನ ಪ್ರತಿಭಟನೆ ಬಿಸಿ

ಎತ್ತಿನ ಬಂಡಿಯೇರಿದ ಸಿದ್ದರಾಮಯ್ಯ,ಡಿ.ಕೆ. ಶಿವಕುಮಾರ್‌
Last Updated 13 ಸೆಪ್ಟೆಂಬರ್ 2021, 19:37 IST
ಅಕ್ಷರ ಗಾತ್ರ

ಬೆಂಗಳೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ವಿಧಾನಮಂಡಲದ ಮೊದಲ ಅಧಿವೇಶನದ ಆರಂಭಿಕ ದಿನವಾದ ಸೋಮವಾರ ಸರ್ಕಾರ ಪ್ರತಿಭಟನೆಗಳ ಬಿಸಿ ಅನುಭವಿಸಿತು.

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ನಾಯಕರು ಎತ್ತಿನಬಂಡಿ ಪಯಣದ ಮೂಲಕ ಪ್ರತಿಭಟನೆಯ ಧ್ವನಿ ಮೊಳಗಿಸಿದರೆ, ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಚಳವಳಿ ನಡೆಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಎತ್ತಿನಬಂಡಿಯಲ್ಲಿ ವಿಧಾನಸೌಧದ ಆವರಣದವರೆಗೂ ಸಾಗಿಬಂದ ಕಾಂಗ್ರೆಸ್‌ ಶಾಸಕರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಹಾಗೂ ಭೂ ಕಂದಾಯ ಕಾಯ್ದೆಗಳಿಗೆ ವಿಧಾನಮಂಡಲದ ಕಳೆದ ಅಧಿವೇಶನದಲ್ಲಿ ತಂದಿರುವ ತಿದ್ದುಪಡಿಗಳನ್ನು ವಾಪಸ್‌ ಪಡೆಯುವಂತೆ ರಾಜ್ಯ ರೈತ ಸಂಘದ ಕಾರ್ಯಕರ್ತರು ವಿಧಾನಸೌಧ
ಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಜತೆ ಮಾತುಕತೆಗೆ ವ್ಯವಸ್ಥೆ ಮಾಡುವುದಾಗಿ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ನೀಡಿದ ಭರವಸೆಯನ್ನು ಆಧರಿಸಿ, ರೈತ ನಾಯಕರು ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದರು. ಪೂರ್ವನಿಗದಿಯಂತೆ
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಮನೆಗಳ ಬಳಿ ಎರಡು ಎತ್ತಿನ ಬಂಡಿಗಳನ್ನು ಪ್ರತಿಭಟನೆಗಾಗಿ ಸಜ್ಜುಗೊಳಿಸಲಾಗಿತ್ತು. ಶಾಸಕರು ಸೇರಿದಂತೆ ಕೆಲವು ಮುಖಂಡರು ಬಂಡಿ ಏರಿದರೆ, ನೂರಾರು ಮಂದಿ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದರು.

ಕುಮಾರ ಪಾರ್ಕ್‌ ನಿವಾಸದಿಂದ ಸಿದ್ದರಾಮಯ್ಯ ಸ್ವತಃ ಎತ್ತಿನಬಂಡಿ ‌ಮುನ್ನಡೆಸಿಕೊಂಡು ಸಾಗಿದರು. ಇನ್ನೊಂದೆಡೆ ಸದಾಶಿವನಗರದಿಂದ ಡಿ.ಕೆ. ಶಿವಕುಮಾರ್‌ ಬಂಡಿ ಏರಿ ಬಂದರು. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಶಾಸಕರಾದ ಜಿ. ಪರಮೇಶ್ವರ, ಎಂ.ಬಿ. ಪಾಟೀಲ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಜತೆಗಿದ್ದರು.

ಎರಡೂ ತಂಡಗಳು ವಿಂಡ್ಸರ್‌ ಮ್ಯಾನರ್‌ ವೃತ್ತ ತಲುಪುತ್ತಿದ್ದಂತೆ ಮತ್ತಷ್ಟು ಮಂದಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಬಂದು ಸೇರಿದರು. ವಿಧಾನಸೌಧದ ಕಡೆಗೆ ಸಾಗಲು ಅನುಮತಿ ನಿರಾಕರಿಸಿದ ಪೊಲೀಸರು, ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಇರಿಸಿ ತಡೆಯೊಡ್ಡಿದರು.

ಕೆಲ ಹೊತ್ತಿನ ವಾಗ್ವಾದದ ಬಳಿಕ, ಒಂದು ಎತ್ತಿನಬಂಡಿಗೆ ಮಾತ್ರ ಮುಂದಕ್ಕೆ ಸಾಗಲು ಅನುಮತಿ ನೀಡುವುದಾಗಿ ಪೊಲೀಸರು ತಿಳಿಸಿದರು. ಶಿವಕುಮಾರ್‌, ಮತ್ತವರ ತಂಡ ಸಿದ್ದರಾಮಯ್ಯ ಮುನ್ನಡೆಸುತ್ತಿದ್ದ ಬಂಡಿ ಏರಿತು. ಇನ್ನೊಂದು ಎತ್ತಿನಬಂಡಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಗುಂಪನ್ನು ವಿಂಡ್ಸರ್‌ ಮ್ಯಾನರ್‌ ವೃತ್ತದಲ್ಲೇ ತಡೆಹಿಡಿದು ನಿಲ್ಲಿಸಲಾಯಿತು.

ವಿಧಾನಸೌಧ ಪ್ರವೇಶಕ್ಕೂ ತಡೆ: ಬಸವೇಶ್ವರ ವೃತ್ತ ಮಾರ್ಗವಾಗಿ ವಿಧಾನಸೌಧದತ್ತ ಕಾಂಗ್ರೆಸ್‌ ನಾಯಕರು, ಶಾಸಕರು ಹೊರಟರು. ಆದರೆ, ವಿಧಾನಸೌಧದ ಪ್ರವೇಶ ದ್ವಾರದ ಗೇಟ್‌ಗಳನ್ನು ಮುಚ್ಚಿದ ಪೊಲೀಸರು, ಎತ್ತಿನಬಂಡಿಯಲ್ಲಿ ಒಳಕ್ಕೆ ಹೋಗಲು ಅನುಮತಿ ನಿರಾಕರಿಸಿದರು.

ಅಲ್ಲಿಯೂ ಕಾಂಗ್ರೆಸ್‌ ನಾಯಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ‘ವಿಧಾನಸೌಧದ ಒಳಕ್ಕೆ ಹೋಗಲು ಏಕೆ ಅವಕಾಶ ಇಲ್ಲ? ಎತ್ತಿನಬಂಡಿಯಲ್ಲಿ ನಾವು ಹೋದರೆ ನಿಮ್ಮ ಗಂಟೇನು ಖರ್ಚಾಗುತ್ತದೆ’ ಎಂದು ಸಿದ್ದರಾಮಯ್ಯ ಪೊಲೀಸ್‌ ಅಧಿಕಾರಿಗಳಿಗೆ ರೇಗಿದರು. ಶಿವಕುಮಾರ್‌ ಕೂಡ ಪೊಲೀಸರ ವಿರುದ್ಧ ಹರಿಹಾಯ್ದರು.

ಲೊಕಸಭಾ ಅಧಿವೇಶನದ ವೇಳೆ ವಾಜಪೇಯಿ ಅವರೂ ಇದೇ ರೀತಿ ಪ್ರತಿಭಟನೆ ನಡೆಸಿದ್ದನ್ನು ಉದಾಹರಣೆ ನೀಡಿದ ಸಿದ್ದರಾಮಯ್ಯ, ‘ಒಳಕ್ಕೆ ಹೋಗಲು ಅನುಮತಿ ನೀಡಲೇಬೇಕು’ ಎಂದು ಪಟ್ಟು ಹಿಡಿದರು. ಬಳಿಕ ಪೊಲೀಸರು ಗೇಟ್‌ ತೆರೆದು ಎತ್ತಿನಬಂಡಿ ಒಳಕ್ಕೆ ಹೋಗಲು ಅವಕಾಶ ನೀಡಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆಯನ್ನು ‘ಕ್ರಿಮಿನಲ್‌ ಅಪರಾಧ’ ಎಂದು ಬಿಜೆಪಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಟೀಕಿಸಿದ್ದರು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿತ್ಯವೂ ಜನರ ಕಿಸೆಗಳ್ಳತನ ಮಾಡುತ್ತಿವೆ. ಇದನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಶಿವಕುಮಾರ್‌ ಕಿಡಿಕಾರಿದರು.

ವಿಧಾನಸೌಧದ ಮುಂಭಾಗದ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಬಳಿಯ ಪ್ರವೇಶ ದ್ವಾರದವರೆಗೂ ಬಂಡಿಯಲ್ಲಿ ಪ್ರತಿಭಟನಾಕಾರರು ಸಾಗಿದರು.

ಬಂಡಿಯಿಂದ ಜಾರಿ ಬಿದ್ದ ಶಾಸಕರು

ಎತ್ತಿನಬಂಡಿಯು ವಿಧಾನಸೌಧದ ಆವರಣ ಪ್ರವೇಶಿಸಿದ ಬಳಿಕ ಕಾಂಗ್ರೆಸ್‌ನ ಹಲವು ಶಾಸಕರು ಮೇಲೇರಿದರು. ಭಾರ ಹೆಚ್ಚಾಗಿದ್ದರಿಂದ ಎತ್ತುಗಳು ಮುಗ್ಗರಿಸಿದವು. ಬಂಡಿಯ ಹಿಂಬದಿಯಲ್ಲಿದ್ದ ಕೆಲವು ಶಾಸಕರು ಜಾರಿ ಕೆಳಕ್ಕೆ ಬಿದ್ದರು.

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ನೆಲದ ಮೇಲೆ ಕುಸಿದು ಕುಳಿತರು. ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ್‌ ಸಿಂಗ್‌, ಬಿ.ಕೆ. ಸಂಗಮೇಶ್ವರ ಸೇರಿದಂತೆ ಕೆಲವು ಶಾಸಕರು ಕೆಳಕ್ಕೆ ಜಾರಿದರು.

‘ಸದನದಲ್ಲೇ ಉತ್ತರಿಸುವೆ’

‘ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಎತ್ತುವ ಎಲ್ಲ ಪ್ರಶ್ನೆಗಳಿಗೂ ಸದನದಲ್ಲೇ ಅಂಕಿಅಂಶಗಳ ಸಮೇತ ತಕ್ಕ ಉತ್ತರ ನೀಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾಂಗ್ರೆಸ್‌ನ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗಲೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿತ್ತು. ಆಗ ಏಕೆ ಧರಣಿ ನಡೆಸಿರಲಿಲ್ಲ. ಆಗಲೂ ಇವರು ಪ್ರತಿಭಟನೆ ಮಾಡಬೇಕಿತ್ತಲ್ಲವೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT