ಬುಧವಾರ, ಮಾರ್ಚ್ 29, 2023
27 °C
ರಾಜ್ಯದ ಎಲ್ಲ ಮನೆಗಳನ್ನೂ ತಲುಪಲು ಟಿಕೆಟ್‌ ಆಕಾಂಕ್ಷಿಗಳು, ಮುಖಂಡರಿಗೆ ಗುರಿ

‘ಭರವಸೆ’ ಅಭಿಯಾನಕ್ಕೆ ‘ಕೈ’ ಪಡೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗೃಹ ಜ್ಯೋತಿ‘, ‘ಗೃಹ ಲಕ್ಷ್ಮಿ’ ಸೇರಿದಂತೆ ಕಾಂಗ್ರೆಸ್‌ ಪಕ್ಷವು ಪ್ರಕಟಿಸಿರುವ ಎಲ್ಲ ಭರವಸೆಗಳನ್ನು ರಾಜ್ಯದ ಪ್ರತಿ ಮನೆಗೂ ತಲುಪಿಸುವ ಅಭಿಯಾನವನ್ನು ಫೆಬ್ರುವರಿ 3ರಿಂದ ಆರಂಭಿಸಲಾಗುತ್ತಿದೆ. ಒಂದು ತಿಂಗಳೊಳಗೆ ರಾಜ್ಯದ 1.8 ಕೋಟಿ ಮನೆಗಳನ್ನು ತಲುಪುವ ಗುರಿ ನಿಗದಿಪಡಿಸಲಾಗಿದೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಪಕ್ಷದ ಪ್ರಮುಖ ನಾಯಕರ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ನಡೆದ ಸಭೆಯಲ್ಲಿ ಈ ಕಾರ್ಯಸೂಚಿಯನ್ನು ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರಿಗೆ ನೀಡಲಾಗಿದೆ.

ಶಾಸಕರು, ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಸಭೆ, ವಿಧಾನ ಪರಿಷತ್‌ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪರಾಜಿರಾದ ಕಾಂಗ್ರೆಸ್‌ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಫೆ.3ರಿಂದ ಒಂದು ವಾರ ಮತ್ತು ಒಂದು ತಿಂಗಳ ಎರಡು ಗುರಿಗಳನ್ನು ಇರಿಸಿಕೊಂಡು ಅಭಿಯಾನ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರತಿ ಗ್ರಾಮ ಮತ್ತು ವಾರ್ಡ್‌ಗಳಲ್ಲಿ ಕನಿಷ್ಠ ಎರಡು ಸಭೆಗಳನ್ನು ನಡೆಸಬೇಕು. ಕಾಂಗ್ರೆಸ್‌ ನೀಡಿರುವ ಭರವಸೆಗಳ ಕುರಿತು ಜನರಿಗೆ ಮನವರಿಕೆ ಮಾಡಬೇಕು. ‘ಬಿಜೆಪಿಯ ಪಾಪದ ಪುರಾಣ’ ಕರಪತ್ರವನ್ನು ಹಂಚುವ ಮೂಲಕ ಸರ್ಕಾರದ ವೈಫಲ್ಯಗಳ ಕುರಿತು ಜಾಗೃತಿ ಮೂಡಿಸಬೇಕು. ಸ್ಥಳೀಯವಾಗಿ ಪ್ರಭಾವಿಯಾಗಿರುವ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬುದು ಯೋಜನೆಯಲ್ಲಿ ಸೇರಿದೆ.

ಒಂದು ತಿಂಗಳ ಅವಧಿಯಲ್ಲಿ ಪ್ರತಿ ಮನೆಗೂ ‘ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌’ ತಲುಪಿಸಬೇಕು. 50 ಸದಸ್ಯರ ತಂಡವು ಪ್ರತಿದಿನ 2,500 ಮನೆಗಳಿಗೆ ಭೇಟಿ ನೀಡಬೇಕು. 30 ದಿನಗಳಲ್ಲಿ ವಿಧಾನಸಭಾ ಕ್ಷೇತ್ರದಲ್ಲಿನ 75 ಸಾವಿರ ಮನೆಗಳನ್ನೂ ತಲುಪಬೇಕು ಎಂಬ ಗುರಿ ನೀಡಲಾಗಿದೆ. ಪಕ್ಷದ ಕರಪತ್ರಗಳು, ‘ಗ್ಯಾರಂಟಿ ಕಾರ್ಡ್‌’ ವಿತರಣೆಯ ಜತೆಗೆ ಪ್ರತಿ ಮನೆಗೂ ಕಾಂಗ್ರೆಸ್‌ನ ‘ಸ್ಟಿಕ್ಕರ್‌’ ಅಂಟಿಸಬೇಕು ಎಂಬ ಗುರಿ ನೀಡಲಾಗಿದೆ.

ಪ್ರತಿ ಹತ್ತು ಮತಗಟ್ಟೆಗಳಿಗೆ ಒಂದು ನೋಂದಣಿ ಕೇಂದ್ರ ತೆರೆಯಬೇಕು. ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 25 ನೋಂದಣಿ ಕೇಂದ್ರಗಳನ್ನು ತೆರೆದು ಹೊಸ ಸದಸ್ಯರನ್ನು ನೋಂದಣಿ ಮಾಡಬೇಕು ಎಂಬ ನಿರ್ದೇಶನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಫೆ.3ರಿಂದ ಎರಡನೇ ಹಂತದ ಯಾತ್ರೆ

ಫೆಬ್ರುವರಿ 3ರಿಂದ ತಮ್ಮ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತ್ಯೇಕವಾಗಿ ಎರಡನೇ ಹಂತದ ಪ್ರಜಾ ಧ್ವನಿ ಯಾತ್ರೆ ಆರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಭೆಯಲ್ಲಿ ಪ್ರಕಟಿಸಿದ್ದಾರೆ.

‘ಉತ್ತರ ಕರ್ನಾಟಕದ 112 ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತು ದಕ್ಷಿಣ ಕರ್ನಾಟಕದ 112 ಕ್ಷೇತ್ರಗಳಲ್ಲಿ ನನ್ನ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ. ಸಿದ್ದರಾಮಯ್ಯ ಬಸವಕಲ್ಯಾಣದಿಂದ ಯಾತ್ರೆ ಆರಂಭಿಸುತ್ತಾರೆ. ಮೂರನೇ ಹಂತದಲ್ಲಿ ಉತ್ತರಕ್ಕೆ ನಾನು ಮತ್ತು ದಕ್ಷಿಣಕ್ಕೆ ಅವರು ಯಾತ್ರೆ ಆರಂಭಿಸುತ್ತೇವೆ’ ಎಂದು ಅವರು ಪಕ್ಷದ ಮುಖಂಡರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು