ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಜಿಲ್ಲೆಗಳಲ್ಲಿ ಸೋಂಕು ದೃಢ ಪ್ರಮಾಣ ಏರಿಕೆ- ಬಂತೇ ಕೋವಿಡ್‌ 3ನೇ ಅಲೆ?

Last Updated 30 ಜುಲೈ 2021, 21:05 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಕದ ರಾಜ್ಯ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದ ಬೆನ್ನಲ್ಲೇ, ಗಡಿ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಮೂರನೇ ಅಲೆಯ ಮುನ್ಸೂಚನೆಯೇ ಎಂಬ ವಿಶ್ಲೇಷಣೆಗಳು ವೈದ್ಯಕೀಯ ವಲಯದಲ್ಲಿ ಶುರುವಾಗಿವೆ.

ಮೊದಲ ಎರಡು ಅಲೆಯಲ್ಲಿ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳವಾದ ಬಳಿಕ ಕರ್ನಾಟಕದಲ್ಲೂ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿತ್ತು. ಹೀಗಾಗಿ, ಸಂಭಾವ್ಯ ಮೂರನೇ ಅಲೆಯ ಹೊತ್ತಿಗೆ ಗಡಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಈ ಹಿಂದೆಯೇ ಶಿಫಾರಸು ಮಾಡಿದ್ದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ‘ನೆರೆಯ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿ ಪಡೆಯುತ್ತಿರುವಂತೆ ಮೂರನೇ ಅಲೆ ಎದುರಿಸಲು ಸನ್ನದ್ದವಾಗಿರಬೇಕು’ ಎಂದೂ ಸೂಚಿಸಿತ್ತು.

ಕಳೆದೊಂದು ತಿಂಗಳ ಹಿಂದಷ್ಟೇ ಕೋವಿಡ್ ಎರಡನೇ ಅಲೆಯು ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದಿದೆ. ಎಲ್ಲ ನಿರ್ಬಂಧಗಳನ್ನು ತೆರವು ಮಾಡಲಾಗಿದ್ದು, ಜನರ ಓಡಾಟ ಮಾಮೂಲಿಗೆ ಬಂದಿದೆ. ಎರಡನೇ ಅಲೆಯ ಅಪಾಯದ ಮುನ್ನೆಚ್ಚರಿಕೆಯನ್ನು ತಾಂತ್ರಿಕ ಸಲಹಾ ಸಮಿತಿ ನೀಡಿದ್ದರೂ ಆಗ, ಸರ್ಕಾರ ಎಚ್ಚೆತ್ತುಕೊಳ್ಳದೇ ಅಪಾಯವನ್ನು ರಾಜ್ಯಕ್ಕೆ ತಂದೊಟ್ಟಿತ್ತು. ಈಗಲೂ ತಾಂತ್ರಿಕ ಸಮಿತಿಯ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಆ ಕಾರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ವಿಶ್ಲೇಷಣೆಗಳು ತಜ್ಞರ ಮಧ್ಯೆ ಶುರುವಾಗಿವೆ.

ಮೂರನೇ ಅಲೆಯು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಕಾಣಿಸಿಕೊಳ್ಳುವ ಬಗ್ಗೆ ವೈದ್ಯಕೀಯ ತಜ್ಞರು ಲೆಕ್ಕಾಚಾರ ಹಾಕಿದ್ದರು. ಆ ವೇಳೆಗೆ ಶೇ 70ರಷ್ಟು ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಲ್ಲಿ ಸಾವು–ನೋವನ್ನು ತಡೆಯಲು ಸಾಧ್ಯ ಎಂದು ಹೇಳಿದ್ದರು. ಆದರೆ, ರಾಜ್ಯದಲ್ಲಿ ಈವರೆಗೆ ಶೇ 35.6ರಷ್ಟು ಮಂದಿ ಮಾತ್ರ ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಅವರಲ್ಲಿ ಶೇ 9.6ರಷ್ಟು ಮಂದಿ ಎರಡೂ ಡೋಸ್ ಲಸಿಕೆ ಪೂರ್ಣಗೊಳಿಸಿದ್ದಾರೆ.

ಕೇಂದ್ರ ಸರ್ಕಾರವು ಬೇಡಿಕೆಯಷ್ಟು ಲಸಿಕೆ ಪೂರೈಕೆ ಮಾಡದಿರುವುದರಿಂದ ಲಸಿಕಾ ಅಭಿಯಾನಕ್ಕೆ ಹಿನ್ನಡೆಯಾಗಿದ್ದು, ಕಳೆದೊಂದು ತಿಂಗಳಿನಿಂದ ಪ್ರತಿನಿತ್ಯ ಸರಾಸರಿ 2.5 ಲಕ್ಷ ಮಂದಿಗೆ ಲಸಿಕೆ ಒದಗಿಸಲಾಗುತ್ತಿದೆ.

ಶೇ 50ಕ್ಕೂ ಅಧಿಕ ಮಂದಿ ಒಂದು ಡೋಸ್ ಲಸಿಕೆಯನ್ನೂ ಪಡೆದಿಲ್ಲ. ಹೀಗಾಗಿ, ಮೂರನೇ ಅಲೆಯಲ್ಲಿ ಮಕ್ಕಳ ಜತೆಗೆ ವಯಸ್ಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇರಳದಿಂದ ಬರುವ ಪ್ರಯಾಣಿಕರಲ್ಲಿ ಕೆಲವರು ಕೋವಿಡ್‌ ನೆಗೆಟಿವ್ ಪರೀಕ್ಷೆಯ ಪ್ರಮಾಣ ಪತ್ರ ಅಥವಾ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಜತೆಗೆ ತರುತ್ತಿಲ್ಲ. ಇದರಿಂದಾಗಿ ಪ್ರತಿನಿತ್ಯ ದಕ್ಷಿಣ ಕನ್ನಡದ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಅಲ್ಲಿಂದ ಬರುವವರಲ್ಲಿ 150ರಿಂದ 170 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.

‘ನೆರೆ ರಾಜ್ಯಗಳಿಂದ ಇಲ್ಲೆಗೆ ಬರುವ 12 ಪ್ರವೇಶ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಕಟ್ಟೆಚ್ಚರ: ಬೊಮ್ಮಾಯಿ ಸಭೆ ಇಂದು:

‘ಕೊರೊನಾ ಹರಡುವುದನ್ನು ತಡೆಯಲು ಆದ್ಯತೆಯ ಕೆಲಸವಾಗಿದ್ದು, ಜಿಲ್ಲಾಡಳಿತದ ಜತೆ ಶನಿವಾರ ಸಂಜೆ ವಿಡಿಯೊ ಸಂವಾದ ನಡೆಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ, ಕೊಡಗು, ಶಿವಮೊಗ್ಗ ಜಿಲ್ಲಾಡಳಿತದ ಜತೆ ಸಂಜೆ 5.30ಕ್ಕೆ ಸಭೆ ನಿಗದಿಯಾಗಿದೆ.

ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವ ಮೂಲಕ ಬೇರೆ ರಾಜ್ಯಗಳಿಂದ ಬರುವವರ ಮೇಲೂ ನಿಗಾ ವಹಿಸಲಾಗುವುದು. ರಾಜ್ಯ ಪ್ರವೇಶಿಸುವವರನ್ನು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಲು ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ರೈಲುಗಳ ಮೂಲಕ ಬರುವವರನ್ನೂ ನಿಲ್ದಾಣದಲ್ಲೇ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಉತ್ತರ ಕರ್ನಾಟಕ ಭಾಗದ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬೀದರ್, ಬಳ್ಳಾರಿ, ರಾಯಚೂರು, ಕಲಬುರ್ಗಿ ಹಾಗೂ ಕೋಲಾರ ಗಡಿಗಳಲ್ಲೂ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಲಾಗುವುದು ಎಂದರು.

ನಿರ್ಬಂಧ ಜಾರಿ: ಡಿ.ಸಿಗೆ ಅಧಿಕಾರ:ಬೆಂಗಳೂರು: ಕೋವಿಡ್‌ ಪ್ರಕರಣಗಳು ಏರಿಕೆ ಕಂಡ ಬೆನ್ನಲ್ಲೇ ಸೋಂಕು ನಿಯಂತ್ರಿಸಲು ಅಗತ್ಯವಿರುವ ಹೆಚ್ಚುವರಿ ನಿರ್ಬಂಧಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಎಲ್ಲ ಜಿಲ್ಲಾಧಿಕಾರಿಗಳು ಮತ್ತುಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೀಡಿ ಶುಕ್ರವಾರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ.

ಪ್ರಕರಣಗಳ ಏರಿಳಿತ:ರಾಜ್ಯದಲ್ಲಿ ವಾರದಿಂದ ಕೋವಿಡ್ ಹೊಸ ಪ್ರಕರಣಗಳು ಏರಿಳಿತ ಕಂಡಿದ್ದು, 1,890 ಮಂದಿ ಸೋಂಕಿತರಾಗಿರುವುದು ಶುಕ್ರವಾರ ದೃಢಪಟ್ಟಿದೆ.

ಹೊಸ ಪ್ರಕರಣಗಳ ಸಂಖ್ಯೆ ಗುರುವಾರ ಎರಡು ಸಾವಿರದ ಗಡಿ ದಾಟಿತ್ತು. ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡದಲ್ಲಿ 396, ಉಡುಪಿಯಲ್ಲಿ 174, ಮೈಸೂರಿನಲ್ಲಿ 157 ಹಾಗೂ ಹಾಸನದಲ್ಲಿ 136 ಪ್ರಕರಣಗಳು ದೃಢಪಟ್ಟಿತ್ತು. ರಾಜಧಾನಿ ಬೆಂಗಳೂರಿನಲ್ಲಿ 500ರ ಗಡಿ ದಾಟಿತ್ತು.

ಶುಕ್ರವಾರ ಶೇ 1.30ರಷ್ಟು ಸೋಂಕು ದೃಢ ಪ್ರಮಾಣ ವರದಿಯಾಗಿದೆ. 12 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಒಂದಂಕಿಯಲ್ಲಿದೆ. ಬೆಂಗಳೂರಿನಲ್ಲಿ 426, ದಕ್ಷಿಣ ಕನ್ನಡದಲ್ಲಿ 345, ಉಡುಪಿಯಲ್ಲಿ 155, ಮೈಸೂರಿನಲ್ಲಿ 142, ಹಾಸನದಲ್ಲಿ 135 ಹಾಗೂ ಬೆಳಗಾವಿಯಲ್ಲಿ 103 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಕಂಡಿದ್ದು, 23,478 ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT