ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಭಯ: ಚಿಣ್ಣರ ವಿಚಿತ್ರ ವರ್ತನೆ

ಖಿನ್ನತೆಗೆ ಒಳಗಾಗುತ್ತಿರುವ ಮಕ್ಕಳು: ಮಕ್ಕಳ ಹಕ್ಕುಗಳ ಸಂಸ್ಥೆಯಿಂದ ಆಪ್ತ ಸಮಾಲೋಚನೆ
Last Updated 27 ಏಪ್ರಿಲ್ 2021, 19:43 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಎಂಬ ಶಬ್ಧ ಕಿವಿಗೆ ಬಿದ್ದ ಕೂಡಲೇ ಕುರ್ಚಿ ಕೆಳಗೆ ಬಚ್ಚಿಟ್ಟುಕೊಳ್ಳುವ ಬಾಲಕ, ಮುಸುಕು ಹೊದ್ದು ಕುಳಿತುಕೊಳ್ಳುವ ಬಾಲಕಿಯರು, ಅದೇ ಭಯದಲ್ಲಿ ಮಲಗಿ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುವ 14 ವರ್ಷದ ಬಾಲಕ...

ಇದು ಕೋವಿಡ್ ಎರಡನೇ ಅಲೆ ಮಕ್ಕಳ ಮನಸ್ಸನ್ನು ಅದೆಷ್ಟು ಘಾಸಿ ಮಾಡಿಸಿದೆ ಎಂಬುದಕ್ಕೆ ಉದಾಹರಣೆಗಳು. ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿರುವ ಮಕ್ಕಳಿಗೆ ಮನೋಸ್ಥೈರ್ಯ ತುಂಬುವ ಕೆಲಸವನ್ನು ಬೆಂಗಳೂರಿನ ಮಕ್ಕಳ ಹಕ್ಕುಗಳ ಸಂಸ್ಥೆ ಮಾಡುತ್ತಿದೆ.ಕೋವಿಡ್‌ ಭೀತಿಯಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವ ಹಲವು ಪ್ರಕರಣಗಳು ಈ ಸಂಸ್ಥೆ ಮುಂದೆ ಬರುತ್ತಿವೆ. ಸಂಸ್ಥೆಯ ನಿರ್ದೇಶಕ ನಾಗಸಿಂಹ ಜಿ.ರಾವ್ ಅವರು ಮಕ್ಕಳನ್ನು ಆನ್‌ಲೈನ್‌ನಲ್ಲೇ ಆಪ್ತ ಸಮಾಲೋಚನೆಗೆ ಒಳಪಡಿಸಿ ಅವರಿಗೆ ಸ್ಥೈರ್ಯ ತುಂಬುತ್ತಿದ್ದಾರೆ.

ರಾಜಾಜಿನಗರದ 9 ವರ್ಷ ಬಾಲಕ ಪದೇ ಪದೇ ಕುರ್ಚಿಯ ಅಡಿಯಲ್ಲಿ ಮೌನವಾಗಿ ಕುಳಿತು ಬಿಡುತ್ತಿದ್ದ. ಕೋವಿಡ್ ವಿಷಯ ಮನೆಯಲ್ಲಿ ಚರ್ಚೆಯಾದಾಗ ಅಥವಾ ಟಿ.ವಿಯಲ್ಲಿ ಬಂದಾಗ ಬಾಲಕ ಹೀಗೆ ಮಾಡುತ್ತಿರುವುದನ್ನು ಪೋಷಕರು ಗಮನಿಸಿದ್ದರು. ಆತ ಹೀಗೆ ವರ್ತಿಸಲು ಕಾರಣವಿತ್ತು. ಬಾಲಕನ ಸ್ನೇಹಿತನ ತಂದೆ ಕೋವಿಡ್‌ಗೆ ತುತ್ತಾಗಿದ್ದರು. ಆ ಸಂದರ್ಭದಲ್ಲಿ ಆದ ಎಲ್ಲಾ ಬೆಳವಣಿಗೆಗಳನ್ನು ಸ್ನೇಹಿತನಿಗೆ ತಿಳಿಸಿದ್ದ. ಆದೇ ವಿಷಯ ಮನಸ್ಸಿಗೆ ತುಂಬಿಕೊಂಡಿದ್ದ ಬಾಲಕ, ಮನೆಯಲ್ಲಿ ಮತ್ತೆ ಆ ವಿಷಯ ಚರ್ಚೆಯಾದಾಗ ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಆತನಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ ಎಂದು ನಾಗಸಿಂಹ ಜಿ. ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೊಂದೆಡೆ ಚಿತ್ರದುರ್ಗದ 12 ವರ್ಷ ಮತ್ತು 9 ವರ್ಷದ ಅಕ್ಕ–ತಂಗಿಯರು ಕೋವಿಡ್ ವಿಷಯ ಕಿವಿಗೆ ಬಿದ್ದ ಕೂಡಲೇ ಮುಸುಕು ಹೊದ್ದು ಕುಳಿತುಕೊಳ್ಳುತ್ತಿದ್ದಾರೆ. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ನಾಟಕಗಳನ್ನೂ ಈ ಬಾಲಕಿಯರು ಮಾಡಿದ್ದರು. ಎರಡನೇ ಅಲೆ ಇದೇ ಮಕ್ಕಳನ್ನು ಖಿನ್ನತೆಗೆ ಒಳಗಾಗಿಸಿದೆ.

‘ದೇವನಹಳ್ಳಿಯ 14 ವರ್ಷದ ಬಾಲಕ ಇತ್ತೀಚೆಗೆ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದಾನೆ. ಆತನನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ಕೊರೊನಾ ಸೋಂಕಿನ ಭಯ ಎಂಬುದು ಗೊತ್ತಾಗಿದೆ. ಆ ಮಕ್ಕಳ ಮನಸ್ಸಿನಲ್ಲಿದ್ದ ಭೀತಿ ಹೊರ ಹಾಕುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.

‘ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಚಿತಾಗಾರದ ಚಿತ್ರಣ, ಆಮ್ಲಜನಕ ಸಿಗದೆ ಆಗುತ್ತಿರುವ ಸಾವು–ನೋವುಗಳು, ಆನ್‌ಲೈನ್ ತರಗತಿಯಲ್ಲೂ ಕೋವಿಡ್‌ ಕುರಿತ ಜಾಗೃತಿ ಹೆಸರಿನಲ್ಲಿ ಭಯ ಹುಟ್ಟಿಸುತ್ತಿರುವುದು ಮಕ್ಕಳ ಮನಸ್ಸಿನಲ್ಲಿ ವಿಚಿತ್ರ ವಾತಾವರಣ ಸೃಷ್ಟಿಸಿದೆ’ ಎಂದು ನಾಗಸಿಂಹ ಜಿ. ರಾವ್ ವಿವರಿಸಿದರು.

ಸಲಹೆಗಳೇನು
* ಮಕ್ಕಳಲ್ಲಿ ಕೋವಿಡ್ ಭಯ ಹುಟ್ಟಿಸಬೇಡಿ
* ಖಿನ್ನತೆಗೆ ಒಳಗಾಗಿದ್ದರೆ ಮಕ್ಕಳನ್ನು ನಿಂದಿಸಿ ಅವಮಾನ ಮಾಡದೇ, ಆಪ್ತತೆಯಿಂದ ಮಾತನಾಡಿಸಿ
* ಆಪ್ತ ಸಮಾಲೋಚಕರ ಬಳಿ ಏನು ಹೇಳಿದೆ ಎಂದು ಪ್ರಶ್ನಿಸಬೇಡಿ
* ಮಕ್ಕಳ ಖಾಸಗಿತನ ರಕ್ಷಿಸಿ, ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ
* ಮಕ್ಕಳ ವಿಚಿತ್ರ ವರ್ತನೆ ಬಗ್ಗೆ ಅವರ ಮುಂದೆಯೇ ಚರ್ಚಿಸಬೇಡಿ
* ಕತೆ, ಹಾಡು ಹೇಳಿಸಿ, ಆಟ ಆಡಿಸಿ ಹೆದರಿಕೆ ಹೋಗಲಾಡಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT