ಭಾನುವಾರ, ಏಪ್ರಿಲ್ 18, 2021
31 °C

Covid-19 Karnataka Updates: ಕೋವಿಡ್-19 ಸಕ್ರಿಯ ಪ್ರಕರಣ ಸಂಖ್ಯೆಯಲ್ಲಿ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಪ್ರತಿನಿತ್ಯ 500ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವ ಪರಿಣಾಮ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿ ಪಡೆದಿದೆ. ಸದ್ಯ 6,594 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಶನಿವಾರ 580 ಪ್ರಕರಣಗಳು ದೃಢಪಟ್ಟಿವೆ. ಈ ತಿಂಗಳು ಆರು ದಿನಗಳ ಅವಧಿಯಲ್ಲಿ 3,142 ಮಂದಿ ಕೋವಿಡ್ ಪೀಡಿತರಾಗಿರುವುದು ಖಚಿತಪಟ್ಟಿದೆ. ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 9.53 ಲಕ್ಷ ದಾಟಿದೆ. ಸೋಂಕಿತರಲ್ಲಿ ಬೆಂಗಳೂರಿನಲ್ಲಿ ಮೂವರು ಹಾಗೂ ಹಾಸನ, ತುಮಕೂರಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಸಾವಿಗೀಡಾದವರ ಒಟ್ಟು ಸಂಖ್ಯೆ 12,359ಕ್ಕೆ ತಲುಪಿದೆ. ಕೋವಿಡ್ ಪೀಡಿತರಲ್ಲಿ 355 ಮಂದಿ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 9.35 ಲಕ್ಷ ದಾಟಿದೆ.

ಕೋವಿಡ್ ಪರೀಕ್ಷೆಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಒಂದು ದಿನದ ಅವಧಿಯಲ್ಲಿ 82 ಸಾವಿರ ಪರೀಕ್ಷೆ ನಡೆಸಲಾಗಿದೆ. ಈವರೆಗೆ 1.92 ಕೋಟಿ ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 367 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 4.07 ಲಕ್ಷ ದಾಟಿದೆ. ದಕ್ಷಿಣ ಕನ್ನಡದಲ್ಲಿ 27, ಬೀದರ್‌ನಲ್ಲಿ 20, ಕಲಬುರ್ಗಿಯಲ್ಲಿ 18, ಉತ್ತರ ಕನ್ನಡದಲ್ಲಿ 16, ಉಡುಪಿಯಲ್ಲಿ 14, ತುಮಕೂರಿನಲ್ಲಿ 13 ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ.

28 ಸಾವಿರ ಮಂದಿಗೆ ಲಸಿಕೆ: ರಾಜ್ಯದಲ್ಲಿ ಶನಿವಾರ 28,725 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಇದರಲ್ಲಿ 16,263 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಆರೋಗ್ಯ ಕಾರ್ಯಕರ್ತರಲ್ಲಿ 6,874 ಮಂದಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಈವರೆಗೆ ಎರಡು ಡೋಸ್ ಪೂರ್ಣಗೊಳಿಸಿದ ಆರೋಗ್ಯ ಕಾರ್ಯಕರ್ತರ ಸಂಖ್ಯೆ 2,33,238ಕ್ಕೆ ತಲುಪಿದೆ.

ನಿಗದಿಪಡಿಸಲಾದ ಫಲಾನುಭವಿಗಳಲ್ಲಿ 4,61,157 ಮಂದಿ ಆರೋಗ್ಯ ಕಾರ್ಯಕರ್ತರು, 2,33,238 ಮಂದಿ ಮುಂಚೂಣಿ ಯೋಧರು, 67,810 ಮಂದಿ 60 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಕಾಯಿಲೆಗಳನ್ನು ಎದುರಿಸುತ್ತಿರುವ 10,722 ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ವಾರದ ಎಲ್ಲ ದಿನ ಲಸಿಕೆ ವಿತರಣೆ

ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ವಿತರಿಸುವ ಸಂಬಂಧ ಸೋಮವಾರದಿಂದ ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವಾರದ ಎಲ್ಲ ದಿನಗಳು ಲಸಿಕೆ ವಿತರಣೆ ನಡೆಯಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಲಸಿಕೆ ವಿತರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮಾ.8ರಂದು ಮಹಿಳಾ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಸಿ.ವಿ. ರಾಮನ್ ಆಸ್ಪತ್ರೆ ಹಾಗೂ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಒಂದೊಂದು ಪಿಂಕ್ ಬೂತ್‌ಗಳನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದು, ಮಹಿಳಾ ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಲಸಿಕೆ ಪಡೆದ ವಿಜ್ಞಾನಿಗಳು

ಬೆಂಗಳೂರು: ಕೆ. ಶಿವನ್, ಎ.ಎಸ್. ಕಿರಣ್ ಕುಮಾರ್, ಕೆ. ರಾಧಾಕೃಷ್ಣನ್, ಉಮಾಮಹೇಶ್ವರನ್ ಆರ್. ಸೇರಿದಂತೆ ಹಲವು ವಿಜ್ಞಾನಿಗಳು ನಗರದ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯನ್ನು ಶನಿವಾರ ಪಡೆದುಕೊಂಡರು.

‘ವಿಶ್ವದಲ್ಲಿಯೇ ಅತೀ ದೊಡ್ಡ ಲಸಿಕೆ ವಿತರಣೆ ಅಭಿಯಾನವು ನಮ್ಮ ದೇಶದಲ್ಲಿ ನಡೆಯುತ್ತಿದೆ. ಕೋವಿಡ್‌ ಕಾಯಿಲೆ ಬರದಂತೆ ತಡೆಯಲು ಈ ಲಸಿಕೆ ಸಹಕಾರಿಯಾಗಿದೆ. ಅತ್ಯಂತ ಸುರಕ್ಷಿತ ಎನ್ನುವುದು ಕೂಡ ಪ್ರಮಾಣೀಕೃತವಾಗಿದೆ. ಹಾಗಾಗಿ, ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ಮುಖಗವಸು ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಲಸಿಕೆ ಪಡೆದ ಬಳಿಕ ನನಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಕೆ. ಶಿವನ್ ತಿಳಿಸಿದರು.

ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್, ‘ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ. ಲಸಿಕೆ ಪಡೆದುಕೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚುವ ಜತೆಗೆ ನಮಗೆ ಸುರಕ್ಷಿತ ಭಾವ ಮೂಡುತ್ತದೆ. ಕೋವಿಡ್‌ನಂತಹ ಸಾಂಕ್ರಾಮಿಕ ಕಾಯಿಲೆಯನ್ನು ಎದುರಿಸಬೇಕಾದರೆ ಸಾಮೂಹಿಕ ಪ್ರಯತ್ನ ಅಗತ್ಯ’ ಎಂದರು.

ವಿಜ್ಞಾನಿ ಡಾ. ಉಮಾಮಹೇಶ್ವರನ್ ಆರ್., ‘ನಮ್ಮನ್ನು ಹಾಗೂ ಈ ಸಮಾಜವನ್ನು ರಕ್ಷಿಸಲು ಲಸಿಕೆ ಸಹಕಾರಿಯಾಗಿದೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗಬೇಕಾದರೆ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ಈ ಅಭಿಯಾನವು ಭಾರತದ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲು ಆಗಲಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು