ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಕೋವಿಡ್ ಲಸಿಕೆ ಕೊಡದ ಕೇಂದ್ರ: ಅಭಿಯಾನಕ್ಕೆ ದೊಡ್ಡ ಮಟ್ಟದ ಹಿನ್ನಡೆ

Last Updated 15 ಜುಲೈ 2021, 3:06 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬೇಡಿಕೆಯಷ್ಟು ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಪೂರೈಕೆಯಾಗದೇ ಇರುವುದರಿಂದ ಲಸಿಕೆ ಅಭಿಯಾನಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಎರಡನೇ ಡೋಸ್ ಪಡೆಯುವ ಅವಧಿ ಮುಗಿಯುವ ಹಂತಕ್ಕೆ ಬಂದರೂ ಲಸಿಕೆ ಸಿಗದೇ ಜನ ಪರದಾಡುವಂತಾಗಿದೆ.

ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ; ವಾಸ್ತವ ಸ್ಥಿತಿ ಬೇರೆಯೇ ಇದೆ. ಲಸಿಕೆ ಕುರಿತಂತೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಅಧಿಕಾರಿಗಳು ನಡೆಸಿದ ವಿಡಿಯೊ ಸಂವಾದದಲ್ಲಿ ಲಸಿಕೆ ಬೇಡಿಕೆಯ ಬಗ್ಗೆ ಅಂಕಿ ಅಂಶ ಸಹಿತ ಕೋರಿಕೆ ಸಲ್ಲಿಸಿದರೂ ಪೂರೈಕೆ ಮಾತ್ರ ಆಗುತ್ತಿಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳುತ್ತಿವೆ.

‘ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಲಸಿಕಾ ಕೇಂದ್ರಗಳ ಮೂಲಕ ದಿನವೊಂದಕ್ಕೆ ಸುಮಾರು 11 ಲಕ್ಷ ಮಂದಿಗೆ ಲಸಿಕೆ ನೀಡಲು ಸಾಧ್ಯವಿದೆ. ‘ಲಸಿಕೆ ಮಹಾ ಅಭಿಯಾನ’ ನಡೆದ ಜೂನ್‌ 21ರಂದು (ಅಂತರರಾಷ್ಟ್ರೀಯ ಯೋಗ ದಿನ) ಮಾತ್ರ ಈ ಸಾಧನೆ ಮಾಡಲಾಗಿದೆ. ದಿನವೊಂದಕ್ಕೆ ಸರಾಸರಿ 2 ಲಕ್ಷದಷ್ಟು ಮಾತ್ರ ಲಸಿಕೆ ಲಭ್ಯ ಆಗುತ್ತಿದೆ’ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಕೇಂದ್ರ ಸರ್ಕಾರದ ಪೂರೈಸುವ ಲಸಿಕೆ ಮತ್ತು ಜಿಲ್ಲೆಗಳಲ್ಲಿ ಲಸಿಕೆ ಹಾಕಲು ಬಾಕಿ ಇರುವ ಜನಸಂಖ್ಯೆಯ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಸೋಮವಾರ (ಜುಲೈ 12) 3.40 ಲಕ್ಷ ಡೋಸ್‌ ಬಂದಿತ್ತು. ಗುರುವಾರ (ಜುಲೈ 15) 4.80 ಲಕ್ಷ ಡೋಸ್‌ ಪೂರೈಕೆ ಆಗಲಿದೆ. ಎಲ್ಲ ಜಿಲ್ಲೆಗಳಿಂದಲೂ ಬೇಡಿಕೆ ಇದ್ದರೂ ಲಭ್ಯತೆ ಆಧರಿಸಿ ವಿತರಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಲಸಿಕೆಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ ಹೆಚ್ಚಿನ ಬೇಡಿಕೆ ಇದೆ. ಪ್ರತಿದಿನ ಸರ್ಕಾರಿ ವಲಯಕ್ಕೆ 5 ಲಕ್ಷದಿಂದ 6 ಲಕ್ಷ ಖಾಸಗಿ ವಲಯಕ್ಕೆ 3 ಲಕ್ಷದಿಂದ 4 ಲಕ್ಷ ಡೋಸ್‌ ಲಭ್ಯವಾದರೂ ನಿಭಾಯಿಸಬಹುದು. ಜೂನ್‌ ತಿಂಗಳಲ್ಲಿ 73 ಲಕ್ಷ ಡೋಸ್‌ ಬಂದಿದ್ದು, ಅದೇ ತಿಂಗಳು 59.98 ಲಕ್ಷ ಲಸಿಕೆ ಬಳಕೆ ಆಗಿದೆ. ಭಾರಿ ಕೊರತೆ ಉಂಟಾದಾಗ ತಕ್ಷಣ ಕಳುಹಿಸುವಂತೆ ನಾವು ಕೇಳುತ್ತಲೇ ಇರುತ್ತೇವೆ’ ಎಂದರು.

ಸಾಧನೆಯಾಗದ ಗುರಿ: ಜೂನ್‌ 21ರ ಬಳಿಕ ಪ್ರತಿ ದಿನ 7 ಲಕ್ಷ ಜನರಿಗೆ ಲಸಿಕೆ ಹಾಕಲು ಗುರಿ ನಿಗದಿಪಡಿಸಿತ್ತು. ಲಸಿಕೆ ಪೂರೈಕೆ ಆಗದೇ ಇರುವುದರಿಂದ ಅದರ ಅರ್ಧದಷ್ಟೂ ತಲುಪಲು ಸಾಧ್ಯ ಆಗುತ್ತಿಲ್ಲ. ಮಂಗಳವಾರ (ಜುಲೈ 14) ಸರ್ಕಾರಿ ಕೋವಿಡ್‌ ಲಸಿಕಾ ಕೇಂದ್ರಗಳಲ್ಲಿ 1,24,923 ಹಾಗೂ ಖಾಸಗಿ ಕೋವಿಡ್‌ ಲಸಿಕಾ ಕೇಂದ್ರಗಳಲ್ಲಿ 29,696 ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ.

ರಾಜ್ಯಕ್ಕೆ ಸರ್ಕಾರಿ ವಲಯಕ್ಕೆ ಕೋವಾಕ್ಸಿನ್‌ ಮತ್ತು ಕೋವಿ ಶೀಲ್ಡ್‌ ಲಸಿಕೆ ಸೇರಿ ಕೇಂದ್ರ ಸರ್ಕಾರದಿಂದ ಈವರೆಗೆ 1,99,24,260 ಡೋಸ್‌ ಪೂರೈಕೆ ಆಗಿದೆ. ಕೇಂದ್ರ ಉಚಿವಾಗಿ ನೀಡುವುದಾಗಿ ಘೋಷಿಸುವ ಮೊದಲು 18 ವರ್ಷ ದಾಟಿದವರಿಗಾಗಿ ರಾಜ್ಯ ಸರ್ಕಾರ 26,03,369 ಡೋಸ್‌ ಖರೀದಿಸಿದ್ದು, ಒಟ್ಟು 2,25,27,620 ಡೋಸ್‌ ಬಂದಿದೆ. ರಾಜ್ಯದಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಕೋವಾಕ್ಸಿನ್‌ 8,21380 ಮತ್ತು ಕೋವಿಶೀಲ್ಡ್‌ 38,39,320 ಡೋಸ್‌ ಸೇರಿ 46,60,700 ಡೋಸ್‌ ಪೂರೈಕೆ ಆಗಿದೆ.

ಗ್ರಾ.ಪಂ.ಗಳಲ್ಲಿ ನಿರಾಶಾದಾಯಕ ಪ್ರಗತಿ
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಲಸಿಕೆ ಅಭಿಯಾನದ ಪ್ರಗತಿ ತೀರಾ ನಿರಾಶಾದಾಯಕವಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಮಾಹಿತಿ ಪ್ರಕಾರ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ3.03 ಕೋಟಿ ಜನಸಂಖ್ಯೆ ಇದೆ. ಆದರೆ, ಸಮರ್ಪಕವಾಗಿ ಲಸಿಕೆ ತಲುಪಿಲ್ಲ. ಲಭ್ಯ ಮಾಹಿತಿ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ 60 ವರ್ಷ ದಾಟಿದವರು 38.79 ಲಕ್ಷ ಮಂದಿ ಇದ್ದಾರೆ. ಅದರಲ್ಲಿ 26.44 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ, ಆದರೆ ಎರಡನೇ ಡೋಸ್‌ ಪಡೆದವರು 2.33 ಲಕ್ಷ ಮಾತ್ರ. ಅದೇ ರೀತಿ 45 ರಿಂದ 59 ವಯೋಮಾನದವರು 40.10 ಲಕ್ಷ ಮಂದಿ ಇದ್ದು ಅವರಲ್ಲಿ 9.09 ಲಕ್ಷ ಮಂದಿ ಮಾತ್ರ ಮೊದಲ ಡೋಸ್‌ ಪಡೆದಿದ್ದಾರೆ. 1.73 ಲಕ್ಷ ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. 18ರಿಂದ 45 ವರ್ಷ ವಯೋಮಾನದವರು 24.14 ಲಕ್ಷ ಮಂದಿ ಇದ್ದಾರೆ. ಅವರಲ್ಲಿ 1.03 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಆದರೆ, ಎರಡನೇ ಡೋಸ್‌ ಪಡೆದವರು 32,900 ಮಂದಿ ಮಾತ್ರ!

***

ಕೇಂದ್ರ ಸರ್ಕಾರದ ಜೊತೆ ಮಂಗಳವಾರವೂ (ಜುಲೈ 13) ವಿಡಿಯೊ ಸಂವಾದ ನಡೆದಿದ್ದು, ಲಸಿಕೆ ಪೂರೈಕೆಗೆ ಬೇಡಿಕೆ ಇಟ್ಟಿದ್ದೇವೆ. ಈ ತಿಂಗಳ ಮೂರನೇ ವಾರದಿಂದ ಪೂರೈಕೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ.
-ಅರುಂಧತಿ ಚಂದ್ರಶೇಖರ್‌, ನಿರ್ದೇಶಕಿ, ರಾಷ್ಟ್ರೀಯ ಆರೋಗ್ಯ ಅಭಿಯಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT