ಗುರುವಾರ , ಜೂನ್ 30, 2022
27 °C

ಕುವೆಂಪು ಬಗ್ಗೆ ಹಗುರ ಮಾತು: ಚಕ್ರತೀರ್ಥ ವಜಾಕ್ಕೆ ಒಕ್ಕಲಿಗರ ಸಂಘ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಹಗುರವಾಗಿ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ರಾಜ್ಯ ಒಕ್ಕಲಿಗರ ಸಂಘ ಒತ್ತಾಯಿಸಿದೆ.

‘ನಾಡಗೀತೆಗೆ ಅವಮಾನ ಮಾಡುವುದೆಂದರೆ ನಾಡಿನ ಸರ್ವರಿಗೆ ಮತ್ತು ಸರ್ಕಾರಕ್ಕೆ ಮಾಡುವ ಅವಮಾನ. ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕುವೆಂಪು ಅಭಿಮಾನಿಗಳು, ಸಾಹಿತಿಗಳು ಬೀದಿಗಳಿದು ಹೋರಾಟ ಮಾಡಲಿದ್ದಾರೆ. ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ  ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ನಾಡಿನ ಆರೂವರೆ ಕೋಟಿ ಕನ್ನಡಿಗರು ಸ್ವೀಕರಿಸಿರುವ ನಾಡಗೀತೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಸರಿಯಲ್ಲ. ಜಗದ ಕವಿ, ಯುಗದ ಕವಿ ಎಂದು ಖ್ಯಾತಿ ಪಡೆದ ಕುವೆಂಪು ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವುದು ಖಂಡನೀಯ. ಇದು ಯಾರೂ ಒಪ್ಪುವಂತದ್ದಲ್ಲ’ ಎಂದು ಹೇಳಿದರು.

‌‘ಕುವೆಂಪು ದೇವರು ಮತ್ತು ಧರ್ಮವನ್ನು ಸ್ವಾರ್ಥಕ್ಕೆ ಬಳಸುವವರ ವಿರುದ್ಧ ತಮ್ಮ ಕೃತಿಗಳಲ್ಲಿ ಖಂಡಿಸಿದ್ದರು. ವೈಚಾರಿಕತೆ ಮತ್ತು ಜ್ಞಾನಕ್ಕೆ ಅಪಾರ ಗೌರವ ನೀಡುತ್ತಿದ್ದರು. ರೋಹಿತ್ ಚಕ್ರತೀರ್ಥ ಅವರು ನಾಡಗೀತೆಗೆ ತೋರಿಸಿರುವ ಅಗೌರವಕ್ಕೆ ದೇಶ– ವಿದೇಶಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದನ್ನು ಸರ್ಕಾರ ಗಮನಿಸಬೇಕು’ ಎಂದರು.

‘2019ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರಿಗೆ ನೋಟಿಸ್ ನೀಡಿತ್ತು. ಆದರೂ, ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಇಂದಿಗೂ ಹರಿದಾಡುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇವೆ. ಸರ್ಕಾರ ಏನು ಉತ್ತರ ನೀಡುತ್ತದೆ ಎಂಬುದನ್ನು ಗಮನಿಸಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದರು.

‘ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರು ಈ ಕೃತ್ಯವನ್ನು ಖಂಡಿಸಬೇಕು. ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಚಕ್ರತೀರ್ಥ ಅವರು ಕೂಡಲೇ ನಾಡಿನ ಜನರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು