ಸೋಮವಾರ, ಡಿಸೆಂಬರ್ 5, 2022
19 °C

ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು: ಸಚಿವ ನಾಗೇಶ್ ವಿರುದ್ಧ ಸಿದ್ದರಾಮಯ್ಯ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಶಿಕ್ಷಣ ವ್ಯವಸ್ಥೆ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

‘ಬಿ.ಸಿ.ನಾಗೇಶ್ ಅವರೇ, ‘ಯೋಗ-ಧ್ಯಾನ ಯಾವುದಕ್ಕೂ ನನ್ನ ವಿರೋಧ ಇಲ್ಲ. ಆದರೆ, ಶಾಲೆಗಳಲ್ಲಿ ಯಾವುದು ಮುಖ್ಯ, ಯಾವುದಕ್ಕೆ ಆದ್ಯತೆ ನೀಡಬೇಕೆನ್ನುವುದಷ್ಟೇ ಪ್ರಶ್ನೆ. ಒಂದೆಡೆ ಶಾಲೆ ನಡೆಸಲು ಸಾರ್ವಜನಿಕರಿಂದ ಭಿಕ್ಷೆ ಬೇಡುತ್ತಿರುವ ಬಿಜೆಪಿ ಸರ್ಕಾರ ಇನ್ನೊಂದೆಡೆ ದಿನಕ್ಕೊಂದರಂತೆ ಗಿಮಿಕ್‌ಗಳನ್ನು ಮಾಡುತ್ತಿರುವುದು ಖಂಡನೀಯ’ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ. 

‘ರಾಜ್ಯದಲ್ಲಿ ಬಿ.ಸಿ.ನಾಗೇಶ್ ಅವರು ಶಿಕ್ಷಣ ಸಚಿವರಾದ ದಿನದಿಂದ ಪಠ್ಯಪುಸ್ತಕ ವಿವಾದದಿಂದ ಹಿಡಿದು ಶಾಲಾ ಶಿಕ್ಷಕರ ನೇಮಕದವರೆಗೆ ಬರೀ ಹಗರಣಗಳಲ್ಲೇ ಈಜಾಡುತ್ತಿದ್ದಾರೆ. ಅವರ ಮನಸ್ಸು ಸ್ಥಿಮಿತದಲ್ಲಿದ್ದ ಹಾಗಿಲ್ಲ, ನಿಜವಾಗಿ ಯೋಗ ಮತ್ತು ಧ್ಯಾನದ ಅಗತ್ಯ ಎಲ್ಲರಿಗಿಂತ ಹೆಚ್ಚಾಗಿ ಶಿಕ್ಷಣ ಸಚಿವರಿಗಿದೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. 

‘ಕೊರೊನಾವನ್ನು ಸರಿಯಾಗಿ ನಿಯಂತ್ರಿಸಲಾಗದೆ ಶಾಲೆಗಳನ್ನು ಮುಚ್ಚಿ, ಆನ್‌ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮೊಬೈಲ್ ಹುಚ್ಚು ಹತ್ತಿಸಿರುವ ಬಿಜೆಪಿ ಸರ್ಕಾರ, ಈಗ ಆ ಹುಚ್ಚು ಬಿಡಿಸಲು ಧ್ಯಾನ ನಡೆಸಲು ಮುಂದಾಗಿರುವುದು ಹುಚ್ಚುತನವಲ್ಲದೆ ಮತ್ತೇನು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

‘ಎಳೆಯ ಮಕ್ಕಳು ಆಡುತ್ತಾ, ಕುಣಿಯುತ್ತಾ ಪಾಠ ಓದಬೇಕು. ಇದರ ಬದಲಿಗೆ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ಬಲಾತ್ಕಾರವಾಗಿ ಯೋಗ-ಧ್ಯಾನಗಳ ಕಸರತ್ತು ಮಾಡಿಸಿದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅವರು ಇನ್ನಷ್ಟು ಕುಗ್ಗಿಹೋಗುತ್ತಾರೆ’ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

‘ಮೊದಲು ಶಾಲೆಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಶಿಕ್ಷಕರನ್ನು ನೇಮಿಸಿ ಅವಶ್ಯಕವಾದ ಬೋದನಾ ಸಲಕರಣೆಗಳನ್ನು ಬಿಜೆಪಿ ಸರ್ಕಾರ ಒದಗಿಸಬೇಕು. ಪ್ರತಿಶಾಲೆಯಲ್ಲಿ ಕಲೆ, ಸಂಗೀತ ಮತ್ತು ಕ್ರೀಡೆಗಳಲ್ಲಿ ತರಬೇತಿ ನೀಡುವ ಶಿಕ್ಷಕರನ್ನು ನೇಮಿಸಬೇಕು. ಇದನ್ನು ಬಿಟ್ಟು ತಮ್ಮ ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಓದಿ... ಸಚಿವ ನಾಗೇಶ್ ಶಿಕ್ಷಣ ವಿರೋಧಿ, ಅವಿವೇಕಿಯನ್ನು ಸಂಪುಟದಿಂದ ಕೈಬಿಡಿ: ಸಿದ್ದರಾಮಯ್ಯ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು