ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘತ್ತರಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಟ್ಟಡಕ್ಕೆ ಭೂಮಿ ಖರೀದಿಸಲು ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ ಅವರು ‘ಅಕ್ಷರ ಜೋಳಿಗೆ’ ಅಭಿಯಾನ ನಡೆಸಿ, ಈವರೆಗೆ ₹ 61 ಲಕ್ಷ ಸಂಗ್ರಹಿಸಿದ್ದಾರೆ.
ಭೂಮಿ ಖರೀದಿಸಲು ಹಣ ನೀಡುವಂತೆ ಹಲವು ಬಾರಿ ಕೋರಿದರೂ ಸರ್ಕಾರ ಸ್ಪಂದಿಸಿರಲಿಲ್ಲ. ಈ ಸಂಬಂಧ ಒತ್ತಾಯಿಸಲು ಪಾದಯಾತ್ರೆ ಮೂಲಕ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕಲಬುರಗಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಆಗ, ಪಾದಯಾತ್ರೆ ತಡೆದಿದ್ದ ಜಿಲ್ಲಾಡಳಿತವುಹಣ ಒದಗಿಸುವ ಭರವಸೆ ನೀಡಿತ್ತು. ನಂತರ ಈಡೇರಿಸಲಿಲ್ಲ.
‘ಈ ಬೆಳವಣಿಗೆಯನ್ನು ಗಮನಿಸಿ ಗ್ರಾಮದ ಮನೆಗಳಿಗೆ ತೆರಳಿ, ಹಣ ಸಂಗ್ರಹಿಸತೊಡಗಿದೆ. ವಾರದ ಹಿಂದೆ ₹ 25 ಲಕ್ಷ ಸಂಗ್ರಹವಾಗಿತ್ತು. ಈಗ ಆ ಮೊತ್ತ ₹ 61 ಲಕ್ಷಕ್ಕೆ ಏರಿದೆ. 2.5 ಎಕರೆ ಜಮೀನು ಖರೀದಿಸಿ ಅದರಲ್ಲಿ ಕಟ್ಟಡ ನಿರ್ಮಿಸುವ ಉದ್ದೇಶವಿದೆ. ಶುಕ್ರವಾರ ಭೂಮಿ ಖರೀದಿ ಪ್ರಕ್ರಿಯೆ ಆಗಿದೆ‘ ಎಂದು ಡಾ. ಶಿವಾನಂದ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.
ಶಾಲೆಗೆ ಘತ್ತರಗಿಯ ಭಾಗ್ಯವಂತಿ ದೇವಿಯ ಹೆಸರಿಡಲು ನಿರ್ಧರಿಸಲಾಗಿದೆ. ಹಾಲಿ ಕಟ್ಟಡವು ಮುಜರಾಯಿ ಇಲಾಖೆಯ ಅಧೀನದಲ್ಲಿದೆ. ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಲಿಂದ ಶಾಲೆ ತೆರವುಗೊಳಿಸಲು ಸೂಚಿಸಿತ್ತು. ಅಲ್ಲದೇ, ದುರಸ್ತಿ ಕಾರ್ಯ ನಡೆಸದಂತೆ ಇಲಾಖೆಯು ನಿರ್ಬಂಧ ವಿಧಿಸಿತ್ತು ಎನ್ನಲಾಗಿದೆ. ಹೀಗಾಗಿ, ಕಟ್ಟಡ ನಿರ್ಮಿಸಲು ಮಂಜೂರಾಗಿದ್ದ ₹ 2 ಕೋಟಿ ಹಣ ಬಳಕೆಯಾಗದೇ ಶಿಕ್ಷಣ ಇಲಾಖೆಯಲ್ಲೇ ಉಳಿದಿತ್ತು.
‘ಶಾಲೆ ಕಟ್ಟಡದ ವಿಚಾರವನ್ನು ಶಿವಾನಂದ ಸ್ವಾಮೀಜಿ ಅವರ ಗಮನಕ್ಕೆ ತಂದೆವು. ಆಗ ಸ್ವಾಮೀಜಿ ಅವರು ಎಲ್ಲರಿಂದ ಹಣ ಸಂಗ್ರಹಿಸಿ ಶಾಲೆ ನಿರ್ಮಿಸಲು ಸಂಕಲ್ಪ ತೊಟ್ಟರು. ಮೊದಲಿಗೆ ತಾವೇ ಮಠದಿಂದ ₹ 1 ಲಕ್ಷ ದೇಣಿಗೆ ನೀಡಿದರು’ ಎಂದು ಗ್ರಾಮಸ್ಥರು ತಿಳಿಸಿದರು.
‘ಈಗ ಖರೀದಿಸುವ ಜಾಗದ ಜೊತೆಗೆ ಸ್ಥಳೀಯ ಶಾಸಕ ಎಂ.ವೈ.ಪಾಟೀಲ ಅವರು 1 ಎಕರೆ ಜಮೀನು ಖರೀದಿಸಿ ಕೊಡಲು ಒಪ್ಪಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಅವರೂ ಜಮೀನು ಖರೀದಿಗೆ ಹಣ ನೀಡುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.