ಮಡಿಕೇರಿ/ಸುಂಟಿಕೊಪ್ಪ: ಕೊಡಗು ಜಿಲ್ಲೆಯಲ್ಲಿ ಕಾಡಾನೆ–ಮಾನವ ಸಂಘರ್ಷ ಶುಕ್ರವಾರ ಪರಾಕಾಷ್ಠೆ ತಲುಪಿದ್ದು, ಸುಂಟಿಕೊಪ್ಪದ ಸಮೀಪ ಕಾಡಾನೆಯೊಂದು ಮೃತಪಟ್ಟಿದೆ.
ದುಬಾರೆ ಹೊಕ್ಕಿರುವ ಮದವೇರಿದ ಸಲಗದ ಉಪಟಳ ಮುಂದುವರಿದಿದ್ದು, ಕರ್ಣ ಎಂಬ ಆನೆ ಗಾಯಗೊಂಡಿದೆ. ವಿರಾಜಪೇಟೆ ತಾಲ್ಲೂಕಿನ ಮಗ್ಗುಲದಲ್ಲಿ ಉಪಟಳ ನೀಡುತ್ತಿದ್ದ 4 ಕಾಡಾನೆಗಳ ಪೈಕಿ 3ನ್ನು ಕಾಡಿಗಟ್ಟಲಾಗಿದೆ. ಆದರೆ, ಒಂದು ಆನೆ ಸಮೀಪದ ಬೆಟ್ಟದ ತುದಿಯನ್ನೇರಿ, ಸಿಬ್ಬಂದಿಯನ್ನು ಬೇಸ್ತು ಬೀಳಿಸಿದೆ. ಈ ಎಲ್ಲ ಕಾರ್ಯಾಚರಣೆಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಅಕ್ಷರಶಃ ಹೈರಾಣಾಗಿದ್ದಾರೆ.
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಚೆಟ್ಟಳ್ಳಿ, ಕಂಡಕೆರೆ, ಅತ್ತೂರು ನಲ್ಲೂರು ಭಾಗದಲ್ಲಿ ನಿರಂತರವಾಗಿ ಉಪಟಳ ನೀಡುತ್ತಿದ್ದ 20 ವರ್ಷದ ಗಂಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುವ ವೇಳೆ ಹಳ್ಳಕ್ಕೆ ಬಿದ್ದು ಮೃತಪಟ್ಟಿದೆ.
ಈ ಆನೆಯು ಅಪಾರ ಪ್ರಮಾಣದ ಕಾಫಿ, ಬಾಳೆ, ಕರಿಮೆಣಸು ಸೇರಿದಂತೆ ಕೃಷಿ ಫಸಲುಗಳನ್ನು ತಿಂದು, ತುಳಿದು ದಾಂದಲೆ ನಡೆಸಿ ತೋಟದ ಮಾಲೀಕರಿಗೆ ನಷ್ಟ ಉಂಟು ಮಾಡಿತ್ತು. ಹಗಲು ವೇಳೆಯಲ್ಲಿ ಕಾಣಿಸಿಕೊಂಡು ಕಾರ್ಮಿಕರಲ್ಲೂ ಆತಂಕ ಸೃಷ್ಟಿ ಮಾಡಿತ್ತು. ಸ್ಥಳೀಯರು, ಕಾಫಿ ಬೆಳೆಗಾರರ ದೂರಿನನ್ವಯ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ; ಈ ಕಾಡಾನೆ ಸೆರೆಗೆ ದುಬಾರೆ ಶಿಬಿರದ 6 ಸಾಕಾನೆ ಬಳಸಿ ಕಾರ್ಯಾಚರಣೆ ನಡೆಸಿತ್ತು.
ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಶಿವರಾಮ್, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ ಸೇರಿದಂತೆ ಉಳಿದ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ಕಾಡಾನೆಗೆ ಅರವಳಿಕೆ ನೀಡಿ ಇನ್ನೇನು ಸಿಕ್ಕಿತು ಎನ್ನುವಷ್ಟರಲ್ಲಿ ಓಡುತ್ತಿದ್ದ ಆನೆ 35 ಅಡಿ ಆಳದ ಸಿಮೆಂಟ್‌ನಿಂದ ಮಾಡಲಾದ ಹಳ್ಳಕ್ಕೆ ಬಿದ್ದಿತು. ಕೂಡಲೇ ಸಾಕಾನೆಗಳ ಮೂಲಕ ಅದನ್ನು ಹಗ್ಗ ಕಟ್ಟಿ ಎಳೆದು ತರಲಾಯಿತಾದರೂ, 50 ಅಡಿ ಕ್ರಮಿಸುವಷ್ಟರಲ್ಲಿ ಕಾಡಾನೆ ಕುಸಿದು ಮೃತಪಟ್ಟಿತು.
ಈ ಬಗ್ಗೆ ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆನೆ ಕಾರ್ಯಪಡೆಯ ಡಿಸಿಎಫ್ ಪೂವಯ್ಯ ‘ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಆನೆಯು ಓಡಿ ಆಕಸ್ಮಿಕವಾಗಿ ಹಳ್ಳಕ್ಕೆ (ಸಿಮೆಂಟ್ ಗುಂಡಿ) ಬಿದ್ದಿತು. ನಂತರ, ಅದನ್ನು ಸಾಕಾನೆಗಳ ಸಹಾಯದಿಂದ ಎಳೆದು ತರುವಾಗ ಕುಸಿದು ಬಿದ್ದು ಮೃತಪಟ್ಟಿದೆ. ಹಳ್ಳಕ್ಕೆ ಬಿದ್ದ ರಭಸಕ್ಕೆ ಅಂಗಾಂಗಗಳು ವಿಫಲಗೊಂಡಿರಬೇಕು’ ಎಂದು ಹೇಳಿದರು.
‘ಆ ಆನೆಯ ಬಲಗಣ್ಣು ದೃಷ್ಟಿ ಕಳೆದುಕೊಂಡಿದ್ದರಿಂದ ಹಳ್ಳವಿರು ವುದು ಕಾಣಿಸಿಲ್ಲ ಎನಿಸುತ್ತದೆ. ಮೀನು ಕೊಲ್ಲಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಅಂಗಾಂಗಗಳ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.
ಬೆಟ್ಟದ ತುದಿಯನ್ನೇರಿದ ಆನೆ; ಹೈರಾಣಾದ ಸಿಬ್ಬಂದಿ
ವಿರಾಜಪೇಟೆ: ತಾಲ್ಲೂಕಿನ ಮಗ್ಗುಲ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ 4 ಕಾಡಾನೆಗಳ ಪೈಕಿ 3ನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿರುವ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾಡಾನೆಯೊಂದು ಶುಕ್ರವಾರ ಇನ್ನಿಲ್ಲದಂತೆ ಕಾಡಿತು.
ಬೆಳಿಗ್ಗೆ 9 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ 3 ಆನೆಯನ್ನು ಬಿಟ್ಟಂಗಲದಿಂದ ಆಚೆಗಿನ ಕಾಡಿನ ಪ್ರದೇಶಕ್ಕೆ ಓಡಿಸಿದರು. ಆದರೆ, ಒಂದು ಆನೆ ಮಾತ್ರ ಸಮೀಪದ ಬೆಟ್ಟವನ್ನೇರಿತು.
ಬೆಟ್ಟದಿಂದ ಇಳಿಸಲು ಸಿಬ್ಬಂದಿ ಪಟಾಕಿ ಹೊಡೆದರು. ವಿವಿಧ ಬಗೆಯ ಶಬ್ದಗಳನ್ನು ಮಾಡಿದರೂ ಕಾಡಾನೆ ಮಾತ್ರ ಬೆಟ್ಟದಿಂದ ಇಳಿಯಲಿಲ್ಲ. ಅದಕ್ಕೆ ಬದಲಾಗಿ ತೀರಾ ಕಡಿದಾದ ಬೆಟ್ಟದ ತುದಿಯನ್ನು ತಲುಪಿತು. ಸುತ್ತಮುತ್ತ ಭಾರಿ ಇಳಿಜಾರು ಹಾಗೂ ಬಂಡೆಗಳು ಇದ್ದದ್ದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಆನೆಯ ಜೀವಕ್ಕೆ ಅಪಾಯ ಇದೆ ಎಂದು ಅರಿತ ಸಿಬ್ಬಂದಿ ಕಾರ್ಯಾಚರಣೆ ನಿಲ್ಲಿಸಿದರು. ಶನಿವಾರ ಮತ್ತೆ ಕಾರ್ಯಾಚರಣೆ ಆರಂಭವಾಗಲಿದೆ.
ಎಸಿಎಫ್ ನೆಹರೂ ನೇತೃತ್ವದಲ್ಲಿ ಆರ್‌ಎಫ್‌ಒ ದೇವಯ್ಯ, ಸಿಬ್ಬಂದಿಯಾದ ಚಂದ್ರಶೇಖರ್, ಮೊನಿಷ್, ಆನಂದ್ ಸೇರಿದಂತೆ 20 ಮಂದಿ ಆನೆ ಓಡಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.