ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್ ಜಿಹಾದ್‌ ಕಾನೂನು ಹಿಂದೆ ದುರುದ್ದೇಶ: ಸಿದ್ದರಾಮಯ್ಯ

‘ಗೂಂಡಾರಾಜ್ಯ ಉತ್ತರಪ್ರದೇಶ ಕರ್ನಾಟಕಕ್ಕೆ ಮಾದರಿಯಲ್ಲ’
Last Updated 6 ನವೆಂಬರ್ 2020, 17:16 IST
ಅಕ್ಷರ ಗಾತ್ರ

ಬೆಂಗಳೂರು: ‘ಲವ್ ಜಿಹಾದ್ ಎಂದರೆ ಏನೆಂಬುದೇ ಸ್ಪಷ್ಟವಾಗಿಲ್ಲದಿರುವಾಗ ಅದರ ತಡೆಗೆ ಕಾನೂನು ರೂಪಿಸುವುದರ ಹಿಂದೆ ಕೋಮುದ್ವೇಷ ಹುಟ್ಟುಹಾಕುವ ದುರುದ್ದೇಶ ಎದ್ದು ಕಾಣಿಸುತ್ತದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಲವ್ ಜಿಹಾದ್ ತಡೆಗೆ ಕಾನೂನು ರೂಪಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಆಡಳಿತ ವೈಫಲ್ಯದಿಂದ ಬೇಸತ್ತಿರುವ ಜನರ ಮನವನ್ನು ಬೇರೆಡೆಗೆ ಸೆಳೆಯುವ ಹತಾಶ ಪ್ರಯತ್ನ ಇದಾಗಿದೆ ವಿನಃ ಇದರ ಹಿಂದೆ ಸದುದ್ದೇಶವಂತೂ ಇಲ್ಲ’ ಎಂದು ಕುಟುಕಿದ್ದಾರೆ.

'ಯಾವ ಕಾನೂನು ಕೂಡಾ ಲವ್ ಜಿಹಾದ್ ಅನ್ನು ವ್ಯಾಖ್ಯಾನಿಸಿಲ್ಲ' ಎಂದು ಕೇಂದ್ರ ಗೃಹಸಚಿವಾಲಯವೇ ಸ್ಪಷ್ಟಪಡಿಸಿದೆ. ಹೀಗಿರುವಾಗ ಯಾವ ಆಧಾರದಲ್ಲಿ ಕಾನೂನು ರೂಪಿಸಲು ಮುಖ್ಯಮಂತ್ರಿ ಹೊರಟಿದ್ದಾರೆ? ಅಲಹಾಬಾದ್ ಹೈಕೋರ್ಟ್
ತೀರ್ಪನ್ನು ತಮ್ಮ ರಾಜಕೀಯ ಅನುಕೂಲತೆಗೆ ತಕ್ಕಂತೆ ತಪ್ಪಾಗಿ ವಿಶ್ಲೇಷಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.

'ಮತಾಂತರ ಎನ್ನುವುದು ಅಂತರಧರ್ಮೀಯ ಮದುವೆಗೆ ಅಸ್ತ್ರವಾಗಬಾರದು' ಎಂದು ತೀರ್ಪು ಹೇಳಿದೆಯೇ ಹೊರತು ಅಂತರಧರ್ಮೀಯ ಮದುವೆಯೇ ಅಕ್ರಮ ಎಂದು ಹೇಳಿಲ್ಲ. ಮುಖ್ಯಮಂತ್ರಿ ಮತ್ತು ಕೆಲವು ಸಚಿವರು ಉತ್ತರಪ್ರದೇಶದ ಮುಖ್ಯಮಂತ್ರಿ ಅವರಿಂದ ಪ್ರೇರಿತರಾಗಿರುವುದು ದುರದೃಷ್ಟಕರ. ಪ್ರಗತಿಪರ ಚಿಂತಕರ ಪರಂಪರೆಯ ಕರ್ನಾಟಕಕ್ಕೆ ‘ಗೂಂಡಾರಾಜ್ಯ’ ಎಂಬ ಕುಖ್ಯಾತಿಯ ಉತ್ತರಪ್ರದೇಶ ಮಾದರಿ ಅಲ್ಲ, ಅಲ್ಲಿನ ಮುಖ್ಯಮಂತ್ರಿ
ಪ್ರೇರಣೆಯೂ ಆಗಬಾರದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿದ್ಯುತ್‌ ದರ ಏರಿಕೆ: ಟೀಕೆ

ಬೆಂಗಳೂರು: ರಾಜ್ಯದ ಜನರು ದುಡಿಮೆ ಕಳೆದುಕೊಂಡು ಕಷ್ಟದಲ್ಲಿರುವಾಗ ವಿದ್ಯುತ್‌ ದರ ಏರಿಸುವುದು ವಿವೇಚನಾರಹಿತ ಆಡಳಿತಕ್ಕೆ ಮಾದರಿ ಎಂದು ಟೀಕಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ದರ ಇಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಕೋವಿಡ್‌ನಿಂದಾಗಿ ಉತ್ಪಾದನಾ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದು, ಕೊಳ್ಳುವ ಶಕ್ತಿಯನ್ನು ಜನರು ಕಳೆದುಕೊಂಡಿದ್ದಾರೆ. ಈ ಕಷ್ಟಕಾಲದಲ್ಲಿ ಎಲ್ಲ ದರಗಳನ್ನು ಕಡಿಮೆ ಮಾಡಬೇಕಾದ ಅಗತ್ಯವಿದೆ. ಪೆಟ್ರೋಲ್, ಡೀಸೆಲ್‌ ಮತ್ತು ವಿದ್ಯುತ್‌ ದರ ಕಡಿಮೆ ಮಾಡಿದರೆ ಮಾರುಕಟ್ಟೆಯಲ್ಲಿ ಆರ್ಥಿಕ ಚೈತನ್ಯ ಬರುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಬೇಡಿಕೆಗೆ ಇರುವಷ್ಟು ವಿದ್ಯುತ್‌ ಬಳಸಿಕೊಂಡು ಹೆಚ್ಚುವರಿ ವಿದ್ಯುತ್‌ ಅನ್ನು ಬೇರೆ ರಾಜ್ಯಗಳಿಗೆ ಮಾರಬಹುದಾದಷ್ಟು ಉತ್ಪಾದನೆ ಕರ್ನಾಟಕದಲ್ಲಿ ಆಗುತ್ತಿದೆ. ಕಳೆದ 7–8 ತಿಂಗಳಿನಿಂದ ರಾಯಚೂರಿನ ಥರ್ಮಲ್ ವಿದ್ಯುತ್ ಉತ್ಪಾದನಾ ಘಟಕಗಳನ್ನು (ಆರ್.ಟಿ.ಪಿ.ಎಸ್) ರಾಜ್ಯ ಸರ್ಕಾರ ಸಂಪೂರ್ಣ ಸ್ಥಗಿತಗೊಳಿಸಿದೆ. ಆದರೆ, ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿ ಯೂನಿಟ್‍ಗೆ 50 ಪೈಸೆಗಳಷ್ಟು ಹೆಚ್ಚು ಮೊತ್ತ ನೀಡಿ ವಿದ್ಯುತ್ ಖರೀದಿ ಮಾಡುತ್ತಿದೆ. ಇದರಿಂದಾಗಿ, ರಾಜ್ಯದ ಜನ ತೆರಿಗೆ ರೂಪದಲ್ಲಿ ನೀಡುವ ಹಣದಲ್ಲಿ ₹5 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವು ಕೇಂದ್ರಕ್ಕೆ ಹೋಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವರ್ಷ ರಾಜ್ಯದ ಎಲ್ಲ ಜಲಾಶಯಗಳು ತುಂಬಿದ್ದು, ಸೌರ ಮತ್ತು ಪವನ ವಿದ್ಯುತ್ ಯಥೇಚ್ಚವಾಗಿ ಲಭಿಸುತ್ತಿದೆ. ಈ ಮೂಲಗಳ ವಿದ್ಯುತ್ ಅನ್ನು ಜನರಿಗೆ ಸರಬರಾಜು ಮಾಡಿದರೆ, ಕೇಂದ್ರ ಸರ್ಕಾರಕ್ಕೆ ಅನವಶ್ಯಕವಾಗಿ ನೀಡುತ್ತಿರುವ ಹಣವನ್ನು ತಪ್ಪಿಸಬಹುದಾಗಿದೆ ಎಂದವರು ಸಲಹೆ ನೀಡಿದ್ದಾರೆ.

ಜಿಎಸ್‌ಟಿ, ನೋಟು ರದ್ದತಿ, ಕೋವಿಡ್‌ ಪರಿಣಾಮದಿಂದ ಕೈಗಾರಿಕೆಗಳು, ವಾಣಿಜ್ಯೋದ್ಯಮಗಳು ಮತ್ತು ಜನರು ನಲುಗಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ವಿದ್ಯುತ್ ದರ ಏರಿಕೆಯ ಬರೆ ಹಾಕದೇ, ತೆರಿಗೆಯ ಹೊರೆ ಇಳಿಸಿ, ಆರ್ಥಿಕತೆಗೆ ಚೈತನ್ಯ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT