ಮಂಗಳವಾರ, ಮೇ 11, 2021
27 °C
ಸರ್ಕಾರಿ ಶಾಲೆ ಮಕ್ಕಳಿಗೆ ₹ 1 ಸಾವಿರ ಮೌಲ್ಯದ ಬಾಂಡ್‌

ಮಕ್ಕಳ ಸೆಳೆದ ‘ರೇಖಾ ಬಾಂಡ್’: ಏನಿದು?

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹೊಸನಗರ ತಾಲ್ಲೂಕು ನಗರ (ಬಿದನೂರು) ಸಮೀಪದ ನೂಲಿಗ್ಗೇರಿಯ ಶಿಕ್ಷಕಿ ರೇಖಾ ಪ್ರಭಾಕರ್ ಸ್ವಂತ ಹಣದಲ್ಲಿ ಜಾರಿಗೆ ತಂದ ‘ಬಾಂಡ್‌’ ಯೋಜನೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇವರು, ಪ್ರತಿ ವರ್ಷವು ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ₹ 1 ಸಾವಿರ ಮೌಲ್ಯದ ಬಾಂಡ್‌ ನೀಡುತ್ತಿದ್ದು, ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿದೆ. ಮಕ್ಕಳ ಹೆಸರಿಗೆ 10 ವರ್ಷದ ಅವಧಿಗೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು, ಬಾಂಡ್‌ ಅನ್ನು ಮಕ್ಕಳ ಪೋಷಕರಿಗೆ ನೀಡುತ್ತಿದ್ದಾರೆ. ವಿದ್ಯಾರ್ಥಿಯು 10ನೇ ತರಗತಿ ಪೂರೈಸಿದ ವರ್ಷ ಬಡ್ಡಿ ಸಹಿತ ಹಣ ಆ ಅವರ ಖಾತೆಗೆ ಜಮೆಯಾಗಲಿದೆ.

ಹೊಸನಗರದಿಂದ ಹುಲಿಕಲ್‌ ರಸ್ತೆಯಲ್ಲಿ 18 ಕಿ.ಮೀ. ದೂರದಲ್ಲಿ ಶಾಲೆ ಇದೆ. 1ರಿಂದ 7ನೇ ತರಗತಿವರೆಗೆ ಇರುವ ಈ ಶಾಲೆಗೆ ಶಿಕ್ಷಕಿಯಾಗಿ ರೇಖಾ 2010ರಲ್ಲಿ ಬಂದಿದ್ದರು. ಆಗ ಪ್ರತಿ ವರ್ಷ 1ನೇ ತರಗತಿಗೆ ಮೂರ್ನಾಲ್ಕು ಮಕ್ಕಳು ಸೇರುತ್ತಿದ್ದರು. ಒಟ್ಟು ಮಕ್ಕಳ ಸಂಖ್ಯೆ 20 ಇತ್ತು. ಶಾಲೆಗೆ ಮಕ್ಕಳನ್ನು ಸೆಳೆಯಲು ಭಿನ್ನ ಚಿಂತನೆ ಮಾಡಿದರು.

ಆ ಭಾಗದಲ್ಲಿ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ಗಮನಿಸಿ, 2013–14ರಿಂದ ಬಾಂಡ್‌ ಯೋಜನೆ ಪರಿಚಯಿಸಿದರು. ಪ್ರಥಮ ವರ್ಷ 4 ಮಕ್ಕಳು ಯೋಜನೆಯ ಫಲಾನುಭವಿಗಳಾದರು. ನಂತರ ಪ್ರತಿ ವರ್ಷ 10ಕ್ಕಿಂತ ಹೆಚ್ಚು ಮಕ್ಕಳು ಒಂದನೇ ತರಗತಿಗೆ ಸೇರುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ‘ವಿದ್ಯಾಗಮ’ ಹೊರತುಪಡಿಸಿ, ನಿತ್ಯದ ತರಗತಿಗಳು ನಡೆಯದಿದ್ದರೂ 13 ಮಕ್ಕಳು ದಾಖಲಾಗಿದ್ದಾರೆ. ಒಟ್ಟು 83 ಮಕ್ಕಳು ಇದ್ದಾರೆ. ಇದುವರೆಗೆ 63 ಮಕ್ಕಳು ಬಾಂಡ್‌ ಸೌಲಭ್ಯ ಪಡೆದಿದ್ದಾರೆ.

ರೇಖಾ ಅವರು ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಊರಿನವರು. ಪತಿ ಪ್ರಭಾಕರ್ ಕುಲಾಲ್ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕಿಯು ನಿತ್ಯವೂ ಶಂಕರನಾರಾಯಣದಿಂದಲೇ ಶಾಲೆಗೆ ಬಂದು ಹೋಗುತ್ತಾರೆ.

‘ನಾನು ಮತ್ತು ಪತಿ ಇಬ್ಬರೂ ಬಡತನದಲ್ಲಿ ಬೆಳೆದವರು. ನಮ್ಮ ವಿದ್ಯಾಭ್ಯಾಸಕ್ಕೆ ಸಮಾಜ ತುಂಬಾ ನೆರವಾಗಿದೆ. ಇಬ್ಬರಿಗೂ ಸರ್ಕಾರಿ ನೌಕರಿ ಸಿಕ್ಕಿದೆ. ಮಕ್ಕಳ ಶಿಕ್ಷಣಕ್ಕೆ  ಇನ್ನಷ್ಟು ನೆರವಾಗಬೇಕು ಎನ್ನುವ ಅಪೇಕ್ಷೆ ಇಟ್ಟುಕೊಂಡಿದ್ದೇವೆ’ ಎನ್ನುತ್ತಾರೆ ರೇಖಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು