ಶನಿವಾರ, ಮೇ 21, 2022
23 °C
ಬಾಲ್ಯದಲ್ಲೇ ‘ಬ್ಲ್ಯಾಕ್‌ಹ್ಯಾಟ್’ ಹ್ಯಾಕರ್ಸ್ ತಂಡ ಸೇರಿದ್ದ!

4ನೇ ತರಗತಿಯಿಂದ ಹ್ಯಾಕಿಂಗ್ ತರಬೇತಿ: ಡಾರ್ಕ್‌ನೆಟ್‌ ಮೂಲಕ ಬಿಟ್‌ ಕಾಯಿನ್‌ ಮಾಹಿತಿ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೆಕ್ಕ ಪರಿಶೋಧಕರ (ಸಿ.ಎ) ಮಗನಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26), ಬಾಲ್ಯದಿಂದಲೇ ತಂತ್ರಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ. 4ನೇ ತರಗತಿಯಲ್ಲಿ ಇರುವಾಗಲೇ, ಅಂತರರಾಷ್ಟ್ರೀಯ ಹ್ಯಾಕರ್ಸ್‌ಗಳು ಕಟ್ಟಿಕೊಂಡಿದ್ದ ‘ಬ್ಲ್ಯಾಕ್‌ಹ್ಯಾಟ್’ ತಂಡಕ್ಕೆ ಸೇರಿಕೊಂಡಿದ್ದ. ಅದೇ ತಂಡದಲ್ಲಿ ತರಬೇತಿ ಪಡೆದು ಅಂತರರಾಷ್ಟ್ರೀಯ ಹ್ಯಾಕರ್ ಆಗಿ ಬೆಳೆದ.

ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರದಾರ ಎನ್ನಲಾದ ಶ್ರೀಕೃಷ್ಣನ ಬಾಲ್ಯ ಹಾಗೂ ಬದುಕಿನ ಬಗ್ಗೆಯೂ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ವಿವರಿಸಿದ್ದಾರೆ.

‘ಬೆಂಗಳೂರಿನ ಜಯನಗರ ನಿವಾಸಿ ಶ್ರೀಕೃಷ್ಣ, ಗೋಪಾಲ್ ರಮೇಶ್ ಹಾಗೂ ಕೌಶಲ್ಯಾ ದಂಪತಿ ಪುತ್ರ. ಕಮಲಾ ಗಾರ್ಡನ್‌ನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಆತ, ಕುಮಾರನ್ಸ್ ಶಾಲೆಯಲ್ಲಿ (ಸಿಬಿಎಸ್‌ಇ) ಎಸ್ಸೆಸ್ಸೆಲ್ಸಿ ಮುಗಿಸಿದ್ದ. 4ನೇ ತರಗತಿ ಇರುವಾಗಲೇ ಆತನಿಗೆ ಕಂಪ್ಯೂಟರ್ ಹಾಗೂ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆದಿತ್ತು. ವೆಬ್ ತಂತ್ರಜ್ಞಾನ, ಜಾವಾ, ರಿವರ್ಸ್ ಎಂಜಿನಿಯರಿಂಗ್ ಹಾಗೂ ಗೇಮ್ ಸೃಷ್ಟಿ ಇತರೆ ಮಾಹಿತಿ ತಿಳಿದುಕೊಂಡಿದ್ದ’ ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.

‘ಹ್ಯಾಕರ್‌ ಆಗಬೇಕೆಂದು ಬಾಲ್ಯದಲ್ಲೇ ತೀರ್ಮಾನಿಸಿದ್ದ ಶ್ರೀಕೃಷ್ಣ, ಇಂಟರ್‌ನೆಟ್ ರೆಲೇ ಚಾಟ್ (ಐಆರ್‌ಎಸ್‌) ಪ್ರೋಗ್ರಾಮ್‌ ಮೂಲಕ ಪರಿಣಿತ ಹ್ಯಾಕರ್‌ಗಳ ಸಂಪರ್ಕ ಸಾಧಿಸಿದ್ದ. ಅಂತರರಾಷ್ಟ್ರೀಯ ಹ್ಯಾಕರ್‌ಗಳು ಕಟ್ಟಿಕೊಂಡಿದ್ದ ‘ಬ್ಲ್ಯಾಕ್‌ಹ್ಯಾಟ್’ ತಂಡಕ್ಕೆ ಸದಸ್ಯನಾಗಿ ಸೇರಿದ್ದ. 4ನೇ ತರಗತಿಯಿಂದ 10ನೇ ತರಗತಿಯವರೆಗೂ ಆತ ತಂಡದಲ್ಲಿದ್ದ. ಸ್ಕ್ರಿಫ್ಟ್ ಕಿಡ್ಡೈ, ಡಾಟಾ ಬೇಸಸ್, ಎಸ್‌ಕ್ಯೂಎಲ್‌ ಇಂಜೆಕ್ಷನ್, ರಿಮೋಟ್ ಆ್ಯಕ್ಸಸ್, ಸೋರ್ಸ್ ಕೋಡ್ ವಿಶ್ಲೇಷಣೆ ಹಾಗೂ ಇತರೆ ತಾಂತ್ರಿಕ ಜ್ಞಾನದಲ್ಲಿ ಪರಿಣಿತಿ ಪಡೆದಿದ್ದ.’

‘8ನೇ ತರಗತಿಯಲ್ಲಿರುವಾಗಲೇ ಶ್ರೀಕೃಷ್ಣ, ಐಆರ್‌ಸಿಯ ‘ಬ್ಲ್ಯಾಕ್‌ಹ್ಯಾಟ್‌’ ತಂಡದ ಅಡ್ಮಿನಿಸ್ಟ್ರೇಟರ್‌ ಆಗಿ ಬಡ್ತಿ ಪಡೆದಿದ್ದ. ‘ರೋಸ್ / ಬಿಗ್‌ಬಾಸ್’ ನಿಗೂಢ ಹೆಸರಿನ ಮೂಲಕ ತಂಡವನ್ನು ಮುನ್ನಡೆಸುತ್ತಿದ್ದ. ಸದಸ್ಯರಲ್ಲಿ ವೈಮನಸ್ಸು ಉಂಟಾಗಿದ್ದರಿಂದ, ‘ಬ್ಲ್ಯಾಕ್‌ಹ್ಯಾಟ್’ ತಂಡ ಎರಡು ಭಾಗವಾಗಿತ್ತು. ಅದಾದ ನಂತರ, ಪ್ರತ್ಯೇಕ ತಂಡದ ಮೂಲಕ ಆರೋಪಿ ಹ್ಯಾಂಕಿಂಗ್ ಮುಂದುವರಿಸಿದ್ದ’ ಎಂಬ ಸಂಗತಿ ಪಟ್ಟಿಯಲ್ಲಿದೆ.

‘ಆಸ್ಟ್ರೇಲಿಯಾದ ಸ್ನೇಹಿತ ಶಾನೆ ಡುಫೈ ಜೊತೆ ಸೇರಿ ‘ಪೇಪಾಲ್’ ಹಣ ವರ್ಗಾವಣೆ ಜಾಲತಾಣದ ಖಾತೆಯೊಂದನ್ನು ಹ್ಯಾಕ್ ಮಾಡಿದ್ದ. ಅದುವೇ ಆತನ ಮೊದಲ ಹ್ಯಾಂಕಿಂಗ್. ನಂತರ, ಗೇಮಿಂಗ್ ಆ್ಯಪ್‌ಗಳನ್ನು ಹ್ಯಾಕ್ ಮಾಡಿ ಹಣ ಕದ್ದು, ಪೇಪಾಲ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ.’

‘ವಿ.ವಿ ಪುರದ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದಾಗಲೂ ಆರೋಪಿ ಕೃತ್ಯ ಮುಂದುವರಿಸಿದ್ದ. ಅಲ್ಲಿಯೇ ಆತ, ಧೂಮಪಾನ ಹಾಗೂ ಮದ್ಯಪಾನ ಮಾಡಲಾರಂಭಿಸಿದ್ದ. ಜೊತೆಯಲ್ಲಿ, ಡ್ರಗ್ಸ್ ಸಹ ತೆಗೆದುಕೊಳ್ಳಲಾರಂಭಿಸಿದ್ದ. ತನ್ನ ವ್ಯಸನಗಳಿಗಾಗಿ ಹಣ ಹೊಂದಿಸಲು, ಹೆಚ್ಚೆಚ್ಚು ಹ್ಯಾಂಕಿಂಗ್ ಮಾಡಲಾರಂಭಿಸಿದ. ಇದೇ ಸಂದರ್ಭದಲ್ಲೇ ‘ಡಾರ್ಕ್‌ನೆಟ್‌’ ಮೂಲಕ ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ. ಹಣ ವಿನಿಮಯ ಏಜೆನ್ಸಿಗಳ ಜಾಲತಾಣಗಳನ್ನೇ ಹ್ಯಾಕ್ ಮಾಡಿ ಅಪಾರ ಪ್ರಮಾಣದ ಬಿಟ್‌ ಕಾಯಿನ್ ದೋಚಲಾರಂಭಿಸಿದ್ದ’ ಎಂಬ ಮಾಹಿತಿಯನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

17ನೇ ವಯಸ್ಸಿನಲ್ಲೇ ಹಿಮಾಲಯಕ್ಕೆ ಹೋಗಿದ್ದ

‘ವ್ಯಸನಗಳಿಂದ ಮಾನಸಿಕವಾಗಿ ನೊಂದಿದ್ದ ಶ್ರೀಕೃಷ್ಣ, 17ನೇ ವಯಸ್ಸಿನಲ್ಲೇ ಮನೆ ತೊರೆದು ಸ್ನೇಹಿತನ ಜೊತೆ ಹಿಮಾಲಯದ ಬದರಿನಾಥ ಕ್ಷೇತ್ರಕ್ಕೆ ಹೋಗಿದ್ದ. ಮಗ ನಾಪತ್ತೆಯಾದ ಬಗ್ಗೆ ಪೋಷಕರು, ಸಿದ್ದಾಪುರ ಹಾಗೂ ತಿಲಕನಗರ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ಸಹ ದಾಖಲಾಗಿತ್ತು’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ತನಿಖೆ ನಡೆಸಿದ್ದ ತಿಲಕನಗರ ಪೊಲೀಸರು, ಶ್ರೀಕೃಷ್ಣನನ್ನು ಪತ್ತೆ ಮಾಡಿ ಬೆಂಗಳೂರಿಗೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದರು. ಪಿಯುಸಿ ಮುಗಿದ ಕೂಡಲೇ ಶ್ರೀಕೃಷ್ಣನನ್ನು ಹೆಚ್ಚಿನ ವ್ಯಾಸಂಗಕ್ಕಾಗಿ ನೆದರ್‌ಲೆಂಡ್ಸ್‌ಗೆ ಕಳುಹಿಸಲಾಗಿತ್ತು. ಇಟಲಿ, ಇಸ್ರೇಲ್, ಸ್ವಿಟ್ಜರ್‌ಲೆಂಡ್, ಫ್ರಾನ್ಸ್, ಜರ್ಮನಿ, ಸ್ವೀಡನ್ ಹಾಗೂ ಇತರೆ ದೇಶಗಳ ಹ್ಯಾಕರ್‌ಗಳ ಜೊತೆ ಸಂಪರ್ಕ ಇಟ್ಟುಕೊಂಡು ಹ್ಯಾಂಕಿಂಗ್ ಕೆಲಸ ಮುಂದುವರಿಸಿದ್ದ. ಬಿಟ್ ಕಾಯಿನ್ ದಂಧೆ ಆರಂಭಿಸಿದ್ದ’ ಎಂಬ ಸಂಗತಿ ಪಟ್ಟಿಯಲ್ಲಿದೆ.

ಶಾಲೆ ಜಾಲತಾಣವನ್ನೇ ಹ್ಯಾಕ್ ಮಾಡಿದ್ದ

‘ಶ್ರೀಕೃಷ್ಣ ಕಲಿಯುತ್ತಿದ್ದ ಶಾಲೆಯ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಪರೀಕ್ಷೆ ಫಲಿತಾಂಶ ಪ್ರಕಟಿಸಲು ಜಾಲತಾಣ (ಪುಪಿಲ್‌ಪಾಡ್) ಅಭಿವೃದ್ಧಿಪಡಿಸಲಾಗಿತ್ತು. ಅದೇ ಜಾಲತಾಣವನ್ನು ಹ್ಯಾಕ್ ಮಾಡಿದ್ದ ಆರೋಪಿ, ತರಗತಿಗೆ ಗೈರಾಗುತ್ತಿದ್ದ ಸಹಪಾಠಿಗಳಿಗೆ ಹಾಜರಾತಿ ಕೊಡಿಸಿದ್ದ. ಕೆಲವರಿಗೆ ಹೆಚ್ಚಿನ ಅಂಕಗಳನ್ನು ನಮೂದಿಸಿದ್ದ. ಹ್ಯಾಕ್ ಸಂಗತಿ ಯಾರಿಗೂ ಗೊತ್ತಾಗಿರಲಿಲ್ಲ’ ಎಂಬ ಮಾಹಿತಿಯನ್ನೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು