ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೈನ್ ವೀರರು... ಡಿಕೆ ಸೋದರರನ್ನು ಟೀಕಿಸಿದ ಎಚ್‌ಡಿಕೆ

Last Updated 4 ಜನವರಿ 2022, 6:43 IST
ಅಕ್ಷರ ಗಾತ್ರ

ಬೆಂಗಳೂರು: ಕುಮಾರಸ್ವಾಮಿ ಹಾಸನದಿಂದ ಬಂದವರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ಹೇಳಿಕೆಗೆ ಶಾಸಕ ಎಚ್‌.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ ಶಿವಕುಮಾರ್‌ ಮತ್ತು ಡಿ.ಕೆ ಸುರೇಶ್‌ ಅವರನ್ನು ಡಿಸೈನ್‌ ವೀರರು ಎಂದು ಮೂದಲಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಹಾಕಿರುವ ಎಚ್‌ಡಿಕೆ , 'ಕಲ್ಲು ಬಂಡೆಗಳನ್ನು ನುಂಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ʼಡಿಸೈನ್ ವೀರರಿಗೆʼ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಆಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ! ಅಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

'ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ. ಈ ನೆಲದ ಮಕ್ಕಳು ಎಂದು ಬಡಾಯಿ ಬಿಡುವ ಸಹೋದರರು ಇದೇ ನೆಲವನ್ನು ಹೇಗೆಲ್ಲಾ ನುಂಗಿ ನೀರು ಕುಡಿಯುತ್ತಿದ್ದಾರೆ ಎಂಬುದು ನನಗಿಂತ ಇಲ್ಲಿನ ಜನರಿಗೇ ಚೆನ್ನಾಗಿ ಗೊತ್ತು. ಆಟ ಎಂದ ಮೇಲೆ ಅಂತ್ಯವೂ ಇರಬೇಕಲ್ಲವೇ? ಆ ಕ್ಷಣ ಹತ್ತಿರ ಬಂದಿದೆಯೇನೋ' ಎಂದು ಹೇಳಿದ್ದಾರೆ.

'ನಾವು ಹಾಸನದಿಂದ ಬಂದಿದ್ದೇವೆ, ನಿಜ. ಇಲ್ಲಿನ ಜನ ನಮ್ಮನ್ನು ಮನೆ ಮಕ್ಕಳೆಂದು ಭಾವಿಸಿದ್ದಾರೆ. ನಾವೂ ಹಾಗೆಯೇ ನಡೆದುಕೊಂಡಿದ್ದೇವೆ. ಜನರ ಪ್ರೀತಿ, ಅಭಿಮಾನ, ನಮ್ಮ ದುಡಿಮೆ ಫಲವಾಗಿ ಜಿಲ್ಲೆಯಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಜನರೇ ನಮಗೆ ಅಧಿಕಾರ ನೀಡಿದ್ದಾರೆ' ಎಂದಿದ್ದಾರೆ.

'ಹೌದು, ಹರದನಹಳ್ಳಿ ನನ್ನ ಜನ್ಮಸ್ಥಳ. ಬಿಡದಿ ನನ್ನ ಕರ್ಮಸ್ಥಳ. ಇದುವೇ ನನ್ನ ಪಾಲಿನ ಧರ್ಮಸ್ಥಳ. ಈ ಮಣ್ಣಲ್ಲಿಯೇ ನಾನು ಮಣ್ಣಾಗುವೆ ಎಂದು ಈಗಾಗಲೇ ಹೇಳಿದ್ದೇನೆ. ಇದರ ಹೊರತಾಗಿ ರಾಮನಗರಕ್ಕೆ ರಿಯಲ್ ಎಸ್ಟೇಟ್ ಮಾಡಲಿಕ್ಕೆ ನಾನು ಬಂದವನಲ್ಲ,' ಎಂದು ಅವರು ಹೇಳಿದ್ದಾರೆ.

'ಹಾದಿ ತಪ್ಪಿದ ರಾಜಕಾರಣ ಬಹಳ ದಿನ ನಡೆಯಲ್ಲ. ಹಣ, ದರ್ಪ, ಧಮ್ಕಿ, ಧಿಮಾಕು ಇನ್ನು ಸಾಕು. ಜನ ಕೊಟ್ಟೂ ನೋಡುತ್ತಾರೆ, ಕೆಲವೊಮ್ಮೆ ಬಿಟ್ಟೂ ನೋಡುತ್ತಾರೆ. ಅನುಭವದಿಂದ ಪಾಠ ಕಲಿತರೆ ಒಳ್ಳೆಯದು. ಉಳಿದದ್ದು ಅವರಿಗೇ ಬಿಟ್ಟಿದ್ದು,' ಎಂದು ಹೇಳುವ ಮೂಲಕ ಡಿಕೆ ಸೋದರರನ್ನು ಟೀಕಿಸಿದ್ದಾರೆ.

ಮೇಕೆದಾಟು ಪಾದಯಾತ್ರೆಯನ್ನು ಟೀಕಿಸಿದ್ದ ಕುಮಾರಸ್ವಾಮಿ ಅವರ ಹೇಳಿಕೆಗೆ ಸೋಮವಾರ ಮೈಸೂರಿನಲ್ಲಿ ಡಿ.ಕೆ ಶಿವಕುಮಾರ್‌ ತಿರುಗೇಟು ನೀಡಿದ್ದರು. 'ಹಾಸನದಿಂದ ಬಂದವರನ್ನು ರಾಮನಗರದ ಜನ ಜೀರ್ಣಿಸಿಕೊಂಡಿದ್ದಾರೆ. ಅವರನ್ನು ಮುಖ್ಯಮಂತ್ರಿ, ಪ್ರಧಾನಿ ಮಾಡಿದ್ದಾರೆ. ಇನ್ನು, ಅವರ ಮಾತುಗಳನ್ನು ಜೀರ್ಣಿಸಿಕೊಳ್ಳಲಾರರೇ' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT