ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗೆ ಥಳಿತ: ಪೊಲೀಸರಿಂದ ರಾಜ್ಯ ದ್ರೋಹ –ಎಚ್‌ಡಿಕೆ

Last Updated 1 ಡಿಸೆಂಬರ್ 2022, 9:38 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿಯ ಗೋಗಟೆ ಕಾಲೇಜಿನಲ್ಲಿ ಬುಧವಾರ ನಡೆದ ಕಾಲೇಜು ಹಬ್ಬದಲ್ಲಿ ಕನ್ನಡ ಧ್ವಜ ಹಿಡಿದು ಕುಣಿದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವುದನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ.

ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ದೂರು ಕೊಡಲು ಹೋದ ಆ ವಿದ್ಯಾರ್ಥಿ ಮೇಲೆ ಪೊಲೀಸರು ಕೂಡ ಅಮಾನುಷವಾಗಿ ಹಲ್ಲೆ ನಡೆಸಿರುವುದು ಕನ್ನಡಕ್ಕೆ, ಕರ್ನಾಟಕಕ್ಕೆ ಬಗೆದ ದೊಡ್ಡ ದ್ರೋಹ‌’ ಎಂದಿದ್ದಾರೆ.

‘ಡಿಸಿಪಿ ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳು ಇಬ್ಬರು ವಿದ್ಯಾರ್ಥಿಗಳ ವಿಷಯದಲ್ಲಿ ಕ್ರೂರವಾಗಿ ವರ್ತಿಸಿ ದರ್ಪ ತೋರಿಸಿರುವುದು ಸರಿಯಲ್ಲ. ಡಿಸಿಪಿ ಅಧಿಕಾರಿ ಆ ವಿದ್ಯಾರ್ಥಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿ, ಬೂಟು ಕಾಲಿನಿಂದ ಒದ್ದಿರುವುದು ಅಕ್ಷಮ್ಯ ಹಾಗೂ ಅನಾಗರಿಕ ವರ್ತನೆ’ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.

‘ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಇತರೆ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು, ಅವರಿಗೆ ಚಿತಾವಣೆ ನೀಡಿದವರನ್ನು ಬಂಧಿಸಬೇಕು ಹಾಗೂ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ದುಂಡಾವರ್ತನೆ ತೋರಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಬೆಳಗಾವಿಯಲ್ಲಿ ಗೊಂದಲ ಹೆಚ್ಚಾಗುತ್ತಿದೆ. ಪ್ರತಿ ಸೂಕ್ಷ್ಮ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಬಿಜೆಪಿಯ ಕೈಯ್ಯಲ್ಲಿ ಕನ್ನಡ ಮತ್ತು ಕನ್ನಡಿಗರು ಸುರಕ್ಷಿತವಾಗಿಲ್ಲ ಎನ್ನುವುದು ಸ್ಪಷ್ಟ. ಬೆಳಗಾವಿ ವಿಷಯ ಗಮನಿಸಿದರೆ ಅದು ಅರ್ಥವಾಗುತ್ತದೆ’ ಎಂದು ಎಚ್‌ಡಿಕೆ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT