ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಕಣ ರೈಲ್ವೆ ಅಧಿಕಾರಿಗಳ ಜತೆ ಜ್ಞಾನೇಂದ್ರ ಚರ್ಚೆ

ತಾಳಗುಪ್ಪ– ಹೊನ್ನಾವರ ರೈಲು ಮಾರ್ಗದ ಯೋಜನೆ
Last Updated 26 ಆಗಸ್ಟ್ 2021, 22:15 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪ ಮತ್ತು ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ನಡುವೆ 82 ಕಿ.ಮೀ. ಉದ್ದದ ಹೊಸ ರೈಲು ಮಾರ್ಗ ನಿರ್ಮಿಸುವ ಯೋಜನೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೊಂಕಣ ರೈಲ್ವೆ ಅಧಿಕಾರಿಗಳ ಜತೆ ಗುರುವಾರ ಚರ್ಚೆ ನಡೆಸಿದರು.

ಕೊಂಕಣ ರೈಲ್ವೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಗುಪ್ತ ಅವರು ಗೃಹ ಸಚಿವರನ್ನು ಭೇಟಿಮಾಡಿ, ತಾಳಗುಪ್ಪ– ಹೊನ್ನಾವರ ರೈಲು ಮಾರ್ಗದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡರು. ಹೊಸ ರೈಲು ಮಾರ್ಗದ ಸಮೀಕ್ಷೆ ಮಗಿದಿದ್ದು, ಯೋಜನೆ ಅನುಷ್ಠಾನವಾದರೆ ಶಿವಮೊಗ್ಗ ಜಿಲ್ಲೆಯು ಕೊಂಕಣ ರೈಲ್ವೆ ಜಾಲಕ್ಕೆ ಸೇರುತ್ತದೆ ಎಂಬ ವಿಷಯವನ್ನು ಸಚಿವರಿಗೆ ತಿಳಿಸಿದರು.

ರಾಜ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಮೂಲಕ ಮಾತ್ರ ಕರಾವಳಿ ಹಾಗೂ ಘಟ್ಟ ಪ್ರದೇಶಗಳನ್ನು ಬೆಸೆಯುವ ರೈಲು ಮಾರ್ಗವಿದೆ. ಹುಬ್ಬಳ್ಳಿ– ಅಂಕೋಲಾ ಮಾರ್ಗವು ಪರಿಸರ ಸಂಬಂಧಿ ತೊಡಕುಗಳಿಂದ ನನೆಗುದಿಗೆ ಬಿದ್ದಿದೆ. ಈಗ ಹೊನ್ನಾವರ– ತಾಳಗುಪ್ಪ ಮಾರ್ಗದ ಮೂಲಕ ಕರಾವಳಿ ಹಾಗೂ ಘಟ್ಟ ಪ್ರದೇಶಗಳನ್ನು ಬೆಸೆಯಲು ಕೊಂಕಣ ರೈಲ್ವೆ ಮುಂದಾಗಿದೆ. 2016ರಲ್ಲಿ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು ಅವರು ₹ 2,500 ಕೋಟಿ ವೆಚ್ಚದ ಈ ಯೋಜನೆಯನ್ನು ಘೋಷಿಸಿದ್ದರು.

ಈ ಯೋಜನೆ ಅನುಷ್ಠಾನಕ್ಕೆ ಬಂದರೆ ತಾಳಗುಪ್ಪ– ಮಂಗಳೂರು ಮತ್ತು ತಾಳಗುಪ್ಪ– ಮುಂಬೈ ಮಾರ್ಗದ ಅಂತರ ಕಡಿಮೆಯಾಗಲಿದೆ. ತುರ್ತು ಸಂದರ್ಭಗಳಲ್ಲಿ ರೈಲುಗಳ ಮಾರ್ಗ ಬದಲಾವಣೆಗೂ ಹೊಸ ಮಾರ್ಗದಿಂದ ಅನುಕೂಲ ಆಗಲಿದೆ ಎಂಬ ಮಾಹಿತಿಯನ್ನು ಕೊಂಕಣ ರೈಲ್ವೆ ಅಧಿಕಾರಿಗಳು ಗೃಹ ಸಚಿವರ ಜತೆ ಹಂಚಿಕೊಂಡಿದ್ದಾರೆ. ಯೋಜನೆಯ ತ್ವರಿತ ಅನುಷ್ಠಾನಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ನೆರವು ಒದಗಿಸುವಂತೆಯೂ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT