ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಕತ್ತಲು ಕಳೆದ ದೇಶದ ಮೊದಲ ವಿದ್ಯುದ್ದೀಪ

Last Updated 6 ನವೆಂಬರ್ 2021, 22:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಪ್ರಾಂಗಣದ ಪೂರ್ವ ದಿಕ್ಕಿನ ದ್ವಾರದ ಬಳಿ ಒಳ ಪ್ರವೇಶಿಸುತ್ತಿದ್ದಂತೆಯೇ ರಸ್ತೆ ಪಕ್ಕದಲ್ಲಿ ಬೀದಿ ದೀಪವನ್ನು ನೋಡಬಹುದು. ಆಕರ್ಷಕವಾಗಿ ಕಾಣಿಸುವ, ದೀಪಗಳ ಗುಚ್ಛವನ್ನು ಒಳಗೊಂಡ ಈ ಬೀದಿ ದೀಪ ಕುತೂಹಲ ಮೂಡಿಸದೇ ಇರದು.

ಕತ್ತಲೆ ಕಳೆಯುವ ಬೆಳಕಿನ ಹಬ್ಬ ದೀಪಾವಳಿಯ ಆಚರಣೆ ಬೆನ್ನಲ್ಲೇ ಈ ಬೀದಿ ದೀಪವನ್ನು ನೆನಪಿಸಿಕೊಳ್ಳುವುದಕ್ಕೆ ಕಾರಣವೂ ಇದೆ. ಎಲ್ಲ ಬೀದಿಗಳಂತೆಯೇ ಇದೂ ಕೂಡಾ ಮಾಮೂಲಿ ಬೀದಿದೀಪ ಎಂದು ಭಾವಿಸಬೇಡಿ. ಇದು ಅಂತಿಂಥ ಬೀದಿ ದೀಪವಲ್ಲ; ವಿದ್ಯುತ್‌ನಿಂದ ಬೆಳಗಿದ ದೇಶದ ಮೊದಲ ಬೀದಿ ದೀಪವಿದು. ಹಾಗಾಗಿ ಈ ದೀಪ ಬೆಂಗಳೂರಿನ ಹೆಮ್ಮೆಯ ಪ್ರತೀಕವೂ ಹೌದು.

‘ಕೋಲಾರ ಚಿನ್ನದ ಗಣಿಗೆ ವಿದ್ಯುತ್‌ ಪೂರೈಸುವ ಸಲುವಾಗಿ ಏಷ್ಯಾದ ಮೊದಲ ಜಲವಿದ್ಯುತ್‌ ಯೋಜನೆಯನ್ನು ಶಿವನ ಸಮುದ್ರದಲ್ಲಿ ಆರಂಭಿಸಲಾಗಿತ್ತು. ಅಲ್ಲಿಂದ ನೇರವಾಗಿ ಕೋಲಾರದ ಚಿನ್ನದ ಗಣಿ ಬೆಳಗಿಸಲು ವಿದ್ಯುತ್‌ ಪೂರೈಸಲಾಗುತ್ತಿತ್ತು. ಅಲ್ಲಿನ ಬೇಡಿಕೆಗಿಂತಲೂ ಹೆಚ್ಚು ವಿದ್ಯುತ್‌ ಈ ಯೋಜನೆಯಲ್ಲಿ ಉತ್ಪಾದನೆ ಆಗುತ್ತಿತ್ತು. ಅಂದಿನ ಡೆಪ್ಯುಟಿ ಚೀಫ್‌ ಎಂಜಿನಿಯರ್‌ ಆಗಿದ್ದ ಎಸಿಜೆ ಲ್ಯಾಬಿನ್‌ ಅವರು ಈ ಹೆಚ್ಚುವರಿ ವಿದ್ಯುತ್‌ ಅನ್ನು ಬೆಂಗಳೂರಿಗೆ ಪೂರೈಸುವ ಪ್ರಸ್ತಾಪವನ್ನು ಆಗಿನ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಮುಂದಿಟ್ಟಿದ್ದರು. ಒಡೆಯರ್‌ ಅವರು 1905ರ ಮೇ 30ರಂದುಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ದೂರದರ್ಶಿತ್ವದ ಫಲವಾಗಿ ನಗರಕ್ಕೆ ವಿದ್ಯುತ್‌ ಪೂರೈಕೆ ಆಗಿದೆ’ ಎಂದು ಇತಿಹಾಸ ಪ್ರೇಮಿ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ತಿಳಿಸಿದರು.

‘ಈ ದೀಪ 116 ವರ್ಷ ಹಳೆಯದು. ಮೈಸೂರಿನ ಅರಸರ ಜನಪರ ಕಾಳಜಿಯ ಕುರುಹಾಗಿರುವ ಈ ದೀ‍ಪವನ್ನು 1905ರ ಆ .05 ರಂದು ಸ್ಥಾಪಿಸಲಾಗಿತ್ತು. ವೈಸರಾಯ್‌ ಕೌನ್ಸಿಲ್‌ನ ಸರ್‌ ಜಾನ್‌ ಹೆವಿಟ್ ಅಧ್ಯಕ್ಷತೆಯಲ್ಲಿ ಇದರ ಉದ್ಘಾಟನೆ ನಡೆದಿತ್ತು. ನಾಲ್ವಡಿ ಕೃಷ್ಣರಾಜ್ ಒಡೆಯರ್‌ ಅವರೂ ಈ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗಿದ್ದರು. ಏಷ್ಯಾ ಖಂಡದಲ್ಲೇ ವಿದ್ಯುತ್‌ನಿಂದ ಬೆಳಗಿದ ಮೊದಲ ಬೀದಿ ದೀಪವಿದು’ ಎಂದು ಅವರು ವಿವರಿಸಿದರು.

‘ಈಗಿನ ಕೆ.ಆರ್‌.ಮಾರುಕಟ್ಟೆ ಸಿಗ್ನಲ್‌ ಇರುವ ಜಾಗದಲ್ಲಿ ಹಿಂದೆ ಕೆರೆ ಇತ್ತು. ಅದನ್ನು ಸಿದ್ದಿಕಟ್ಟೆ ಕೆರೆ ಎಂದು ಕರೆಯುತ್ತಿದ್ದರು. ಅದರ ಪಕ್ಕದ ಬಯಲನ್ನು ಸಿದ್ಧಿಕಟ್ಟೆ ಎನ್ನುತ್ತಿದ್ದರು. ಈಗಿನ ಅವೆನ್ಯೂ ರಸ್ತೆ ಇರುವಲ್ಲಿ ಪೇಟೆ ಕೋಟೆ ಇತ್ತು. ಈಗ ಉಳಿದುಕೊಂಡಿರುವ ಕೋಟೆ ಹಾಗೂ ಪೇಟೆ ಕೋಟೆಗಳ ನಡುವೆ ಸಿದ್ದಿಕಟ್ಟೆ ಬಯಲು ಇತ್ತು. ಆ ಬಯಲಿನಲ್ಲಿ (ಈಗ ಗಣಪತಿ ದೇವಸ್ಥಾನವಿರುವ ಜಾಗ) ವಿದ್ಯುತ್‌ನಿಂದ ಬೆಳಗುವ ಬೀದಿ ದೀಪವನ್ನು ಸ್ಥಾಪಿಸಲಾಗಿತ್ತು’ ಎಂದು ಅವರು ತಿಳಿಸಿದರು.

‘1905ರಲ್ಲಿ ನಗರದಲ್ಲಿ ಚಾಮರಾಜಪೇಟೆ, ಮಲ್ಲೇಶ್ವರ ಮುಂತಾದ ಬಡಾವಣೆಗಳು ವ್ಯವಸ್ಥಿತವಾಗಿ ಬೆಳವಣಿಗೆ ಹೊಂದಿದ್ದವು.ನಗರಕ್ಕೆ ಶಿವನಸಮುದ್ರದಿಂದಲೇ ವಿದ್ಯುತ್‌ ಪೂರೈಸಲಾಗಿತ್ತು. ಇದೇ ಸಂದರ್ಭದಲ್ಲಿ 100 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿತ್ತು. ಆ ಮನೆಗಳಿಂದ ತಿಂಗಳಿಗೆ ₹ 1ರಂತೆ ವಿದ್ಯುತ್‌ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ನಗರಕ್ಕೆ ವಿದ್ಯುತ್‌ ಪೂರೈಸುವಲ್ಲಿ ಮೈಸೂರು ಸಂಸ್ಥಾನದ ಆಗಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್‌ ದೂರದೃಷ್ಟಿಯೂ ಇದೆ’ ಎಂದು ಧರ್ಮೇಂದ್ರ ವಿವರಿಸಿದರು.

ಈಗ ನಗರದಲ್ಲಿ ಸ್ಮಾರ್ಟ್‌ ಬೀದಿ ದೀಪಗಳನ್ನು ಬಿಬಿಎಂಪಿ ಅಳವಡಿಸುತ್ತಿದೆ. ವಿದ್ಯುತ್‌ ಉಳಿತಾಯ ಮಾಡುವ ಈ ಸ್ಮಾರ್ಟ್‌ ಬೀದಿ ದೀಪಗಳನ್ನು ನಿಯಂತ್ರಿಸಲು ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ತರುವ ಮೂಲಕ ಪಾಲಿಕೆ ವಿನೂತನ ಹೆಜ್ಜೆ ಇಟ್ಟಿದೆ. ಈ ರೀತಿಯ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಪರಿಪಾಠ ನೂರಾರು ವರ್ಷಗಳಿಗೂ ಮುನ್ನವೇ ಆರಂಭವಾಗಿದ್ದರಿಂದಲೇ ಬೆಂಗಳೂರು ಈ ಹಂತಕ್ಕೆ ಬೆಳೆದಿದೆ ಎಂದರೆ ತಪ್ಪಾಗಲಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT