ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಕದ ತಟ್ಟಿದ ಕೋಲಾರ ಜೆಡಿಎಸ್‌ ಶಾಸಕ ಶ್ರೀನಿವಾಸ ಗೌಡ

Last Updated 15 ಸೆಪ್ಟೆಂಬರ್ 2021, 21:12 IST
ಅಕ್ಷರ ಗಾತ್ರ

ಬೆಂಗಳೂರು: ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಜೆ.ಟಿ. ದೇವೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿರುವ ಬೆನ್ನಲೇ, ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ಕೂಡ ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ.

ಜೆಡಿಎಸ್ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡಿರುವ ಅವರು ‘ಕೈ’ ಹಿಡಿಯಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

ಕೆಲವು ದಿನಗಳ ಹಿಂದೆ ಎಚ್.‌ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಶ್ರೀನಿವಾಸಗೌಡ, ‘ಕೋಲಾರ ಜಿಲ್ಲೆಗೆ ಕೆ.ಸಿ. ವ್ಯಾಲಿ ನೀರು ತಂದು ರಮೇಶ್ ಕುಮಾರ್ ಮರೆಯಲಾರದಂಥ ಕೆಲಸ ಮಾಡಿದ್ದಾರೆ. ಆದರೆ, ಕುಮಾರಸ್ವಾಮಿ ಅದನ್ನು ಕೊಳಚೆ ನೀರು ಎಂದು ಹೇಳಿರುವುದು ಸರಿಯಲ್ಲ. ಬರಡು ಭೂಮಿ ಎನಿಸಿಕೊಂಡಿರುವ ಕೋಲಾರಕ್ಕೆ ಕೆ. ಸಿ. ವ್ಯಾಲಿ ನೀರು ಬಹಳ ಮುಖ್ಯವಾಗಿದೆ. ಯೋಜನೆ ನೀರನ್ನು ನಾನೂ ಕುಡಿದಿದ್ದೇನೆ. ನಾನೇನು ಸತ್ತು ಹೋಗಿದ್ದೆನೆಯೇ’ಎಂದು ಪ್ರಶ್ನಿಸಿದ್ದರು.

ಜೆಡಿಎಸ್ ನಾಯಕರ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕೆ ಶ್ರೀನಿವಾಸ ಗೌಡ ಅವರ ಮೇಲೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದ್ದರು. ‘ಕೋಲಾರ ಶಾಸಕರ ವಿಚಾರದಲ್ಲಿ ಇನ್ನು ಸಹಿಸುವುದು ಸಾಧ್ಯವಿಲ್ಲ. ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ಸೂಕ್ತ ಕ್ರಮ ಜರುಗಿಸುವಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಸೂಚಿಸಿದ್ದೇನೆ" ಎಂದು ಹೇಳಿದ್ದರು.

ಈ ನಡುವೆಯೇ ಡಿ.ಕೆ. ಶಿವಕುಮಾರ್‌ ಅವರನ್ನ ಭೇಟಿ ಮಾಡಿ ಸುಮಾರು ಒಂದು ಗಂಟೆ ಶ್ರೀನಿವಾಸ ಗೌಡ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಸೇರುವ ಕುರಿತು ಅವರು ಚರ್ಚೆ ನಡೆಸಿದ್ದಾರೆ ಎಂದೂ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT