ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಬಳಕೆ ‘ಕಡ್ಡಾಯ’ ಅಲ್ಲ: ಕೇಂದ್ರ ಸರ್ಕಾರ

ಹಿಂದಿ, ಇಂಗ್ಲಿಷ್‌ ಭಾಷೆಗಷ್ಟೇ ಮಣೆ: ಗೃಹ ಸಚಿವಾಲಯ ಸ್ಪಷ್ಟನೆ
Last Updated 30 ಜನವರಿ 2021, 18:40 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರದ ಕಚೇರಿಗಳು ಕರ್ನಾಟಕದಲ್ಲೂ ಕನ್ನಡ ಬಳಸಬೇಕಿಲ್ಲ. ತ್ರಿಭಾಷಾ ಸೂತ್ರವನ್ನು ರಾಜ್ಯಗಳು ಪಾಲಿಸಿದರೆ ಸಾಕು; ತಾನು ಅನು ಸರಿಸುವುದು ದ್ವಿಭಾಷಾ ಸೂತ್ರ ಮಾತ್ರ’ ಎಂಬುದು ಕೇಂದ್ರ ಸರ್ಕಾರದ ವಾದ.

ಕೇಂದ್ರ ಗೃಹ ಸಚಿವಾಲಯ ನೀಡಿರುವ ಸ್ಪಷ್ಟನೆಯ ತಿರುಳು ಇದು.

ಭದ್ರಾವತಿಯಲ್ಲಿ ಇದೇ 16ರಂದು ಸಿಆರ್‌ಪಿಎಫ್‌ ಏರ್ಪಡಿಸಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆಯ (ಆರ್‌ಎಎಫ್‌) ಕೇಂದ್ರಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮ ಹಾಗೂ ಶಿಲಾನ್ಯಾಸದ ಫಲಕಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಮಾತ್ರ ಬಳಸಿ, ಕನ್ನಡವನ್ನು ಕಡೆಗಣಿಸಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಾಹಿತಿಗಳು, ಕನ್ನಡ ಹೋರಾಟಗಾರರು ಹಾಗೂ ರಾಜಕೀಯ ಮುಖಂಡರು ಇದನ್ನು ಖಂಡಿಸಿದ್ದರು.

‘ತ್ರಿಭಾಷಾ ಸೂತ್ರ ಪಾಲನೆ ಆಗದಿರುವುದನ್ನು ಗೃಹ ಸಚಿವಾಲಯ ಗಮನಿಸಿದೆಯೇ? ಗಮನಿಸಿದ್ದರೆ, ಈ ಬಗ್ಗೆ ಕೈಗೊಂಡ ಕ್ರಮಗಳೇನು’ ಎಂದು ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿರುವ ಹಾಸನದ ಎಂ.ಎಚ್‌.ಗೌತಮ್‌ ಗಣೇಶ್‌ ಮಾಹಿತಿ ಕೋರಿದ್ದರು.

‘1963ರ ಆಡಳಿತ ಭಾಷೆ ಕಾಯ್ದೆ ಹಾಗೂ 1976ರ ಆಡಳಿತ ಭಾಷೆ ನಿಯಮಗಳ ಪ್ರಕಾರಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೇವಲ ದ್ವಿಭಾಷಾ ನೀತಿ ಮಾತ್ರ ಅನ್ವಯವಾಗುತ್ತದೆ. ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯು (ಸಿಆರ್‌ಪಿಎಫ್‌) ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುತ್ತದೆ. ಹಾಗಾಗಿ ಸಿಆರ್‌
ಪಿಎಫ್‌ ಕಾರ್ಯಕ್ರಮದಲ್ಲಿ ತ್ರಿಭಾಷಾ ಸೂತ್ರ ಪಾಲಿಸುವ ಪ್ರಮೇಯವೇ ಉದ್ಭವಿಸದು’ ಎಂದು ಗೃಹ ಸಚಿವಾಲಯ, ಗೌತಮ್‌ ಅವರಿಗೆ ನೀಡಿದ ಸ್ಪಷ್ಟನೆಯಲ್ಲಿ ತನ್ನ ನಿಲುವು ಪ್ರತಿಪಾದಿಸಿದೆ.

‘ಈ ಉತ್ತರದಿಂದ ಒಂದು ವಿಚಾರ ಸ್ಪಷ್ಟ; ತ್ರಿಭಾಷಾ ಸೂತ್ರವನ್ನು ಕೇಂದ್ರ ಸರ್ಕಾರ ಪಾಲಿಸಬೇಕಿಲ್ಲವಂತೆ. ಅದೇನಿದ್ದರೂ ಹಿಂದಿಯೇತರ ಭಾಷೆಯ ರಾಜ್ಯಗಳಿಗೆ ಮಾತ್ರ. ಇದೆಂಥಾ ವಿಪರ್ಯಾಸ’ ಎಂದು ಗೌತಮ್‌ ಆಕ್ರೋಶ ವ್ಯಕ್ತಪಡಿಸಿದರು.

‘ಭಾಷಾ ಅಸಮಾನತೆಗೆ ಕಾರಣವಾಗಿರುವುದು ಸಂವಿಧಾನದ 343ರಿಂದ 351ರವರೆಗಿನ ವಿಧಿಗಳು. ಇವುಗಳಿಗೆ ತಿದ್ದುಪಡಿಯಾಗದೇ ಹಿಂದಿಯೇತರ ಭಾಷೆಗಳಿಗೆ ಉಳಿಗಾಲವಿಲ್ಲ’ ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಜಾವಗಲ್‌, ‘ಇದು ಕೇವಲ ಭಾಷೆಯ ಕುರಿತ ಭಾವನಾತ್ಮಕ ವಿಚಾರ
ವಲ್ಲ. ಇದು ಆಡಳಿತಾತ್ಮಕ ವಿಚಾರ. 70 ವರ್ಷಗಳಿಂದಲೂ ಕನ್ನಡಿಗರ ಹಕ್ಕುಗಳನ್ನು ದಮನಿಸಲಾಗುತ್ತಿದೆ. ಇನ್ನೆಷ್ಟು ಸಮಯ ನಾವು ಅಸಹಾಯಕರಾಗಿ ಸುಮ್ಮನಿರಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಸಂವಿಧಾನದ 343ರಿಂದ 351ರವರೆಗಿನ ವಿಧಿಗಳ ತಿದ್ದುಪಡಿಗೆ ರಾಜ್ಯದ ಸಂಸದರು ಇನ್ನಾದರೂ ಒಕ್ಕೊರಲಿನಿಂದ ಒತ್ತಾಯಿಸಬೇಕು. ಕೇಂದ್ರದ ಆದೇಶಗಳು, ಸೇವೆಗಳು, ಕಾನೂನುಗಳು, ನೀತಿಗಳ ಕುರಿತ ಮಾಹಿತಿಗಳೆಲ್ಲವೂ ಕನ್ನಡದಲ್ಲೂ ಸಿಗುವಂತಾಗಬೇಕು’ ಎಂದು ಆಗ್ರಹಿಸಿದರು.

***

ಹಿಂದಿ ಹೇರಿಕೆ ನಡೆಯುತ್ತಿಲ್ಲ ಎನ್ನುವವರು ಕೇಂದ್ರ ಸರ್ಕಾರ ನೀಡಿರುವ ಈ ಉತ್ತರವನ್ನು ಓದಿಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಮನ್ನಣೆ ಇಲ್ಲ ಎಂದರೆ ಏನದರರ್ಥ?

ಎಂ.ಎಚ್‌.ಗೌತಮ್‌ ಗಣೇಶ್‌, ಎಂಜಿನಿಯರಿಂಗ್ ವಿದ್ಯಾರ್ಥಿ, ಹಾಸನ

***

ಕೇಂದ್ರವು ಕಾನೂನು,ಯೋಜನೆಗಳನ್ನು ರೂಪಿಸುವ ಪ್ರಕ್ರಿಯೆಗಳಿಂದ ಕನ್ನಡಿಗರನ್ನು ದೂರವಿಟ್ಟಿದೆ. ನಮ್ಮನ್ನು ಎರಡನೇ ದರ್ಜೆಯವರಂತೆ ಕಂಡರೂ ಸಂಸದರು ಸೊಲ್ಲೆತ್ತುತ್ತಿಲ್ಲ

- ಅರುಣ್‌ ಜಾವಗಲ್‌ ಸಂಘಟನಾ ಕಾರ್ಯದರ್ಶಿ, ಕ.ರ.ವೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT