ಶುಕ್ರವಾರ, ಮೇ 27, 2022
22 °C

ವಿಧಾನಸಭೆ ಕಲಾಪದ ಚಟುವಟಿಕೆಗಳು ಹಾದಿ ತಪ್ಪುತ್ತಿವೆ: ಸದಸ್ಯರ ಕಳಕಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ (ಸುವರ್ಣ ವಿಧಾನಸೌಧ): ವಿಧಾನಸಭೆಯ ಕಲಾಪದ ಚಟುವಟಿಕೆಗಳು ಹಾದಿ ತಪ್ಪುತ್ತಿರುವ ಬಗ್ಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹಲವು ಸದಸ್ಯರು ಬುಧವಾರ ಕಳವಳ ವ್ಯಕ್ತಪಡಿಸಿದರು.

ಶೂನ್ಯವೇಳೆಯಲ್ಲಿ ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರು ಕ್ಷೇತ್ರದ ವಿದ್ಯುತ್‌ ಬಿಲ್‌ ಸಮಸ್ಯೆ ಬಗ್ಗೆ ದೀರ್ಘವಾಗಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ‘ಶೂನ್ಯ ವೇಳೆಯಲ್ಲಿ ಈ ರೀತಿ ಸುದೀರ್ಘವಾಗಿ ಚರ್ಚಿಸುವುದು ಸರಿಯಲ್ಲ. ವಿಧಾನಸಭಾಧ್ಯಕ್ಷರು ಇದಕ್ಕೆಲ್ಲ ಅವಕಾಶ ಮಾಡಿಕೊಡಬಾರದು‘ ಎಂದು ಆಗ್ರಹಿಸಿದರು. ‘ನಾನು ಅಸಹಾಯಕ’ ಎಂದು ವಿಧಾನಸಭಾಧ್ಯಕ್ಷ ಕಾಗೇರಿ ಅಳಲು ತೋಡಿಕೊಂಡರು.

ಈ ವೇಳೆ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌, ‘ಸಭಾಧ್ಯಕ್ಷರದ್ದು ಹೆಸರಿಗೆ ಮಾತ್ರ ಎತ್ತರದ ಪೀಠ. ಅತೀ ಹೆಚ್ಚು ಅಪವಾದ ಹಾಗೂ ಮಾನಸಿಕ ಹಿಂಸೆಗೆ ಗುರಿಯಾಗುವುದು ಈ ಪೀಠ. ಅವರ ನೆರವಿಗೆ ಯಾರೂ ಬರುವುದಿಲ್ಲ‘ ಎಂದರು.

’10 ದಿನಗಳ ಅಧಿವೇಶನದಲ್ಲಿ ಪ್ರಮುಖ ವಿಚಾರಗಳ ಬಗ್ಗೆಯೇ ಚರ್ಚೆ ಆಗುತ್ತಿಲ್ಲ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಯೇ ಆಗಿಲ್ಲ. ಶೇ 40 ಕಮಿಷನ್‌ ಬಗ್ಗೆ ಪ್ರಸ್ತಾಪ ಮಾಡದಿದ್ದರೆ ವಿರೋಧ ಪಕ್ಷದವರಿಗೆ ಕಮಿಷನ್‌ ಸಿಕ್ಕಿದೆಯಾ ಎಂಬ ಮಾತು ಬರುತ್ತದೆ‘ ಎಂದರು.

ಜೆ.ಸಿ.ಮಾಧುಸ್ವಾಮಿ, ‘ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪವಾದ ವಿಚಾರವೇ ಶೂನ್ಯ ವೇಳೆಯಲ್ಲಿ, ಗಮನ ಸೆಳೆಯುವ ಸೂಚನೆ ರೂಪದಲ್ಲೂ ಪ್ರಸ್ತಾಪ ಆಗುತ್ತಿದೆ. ಇದರಿಂದಾಗಿ, ಶಾಸನ ರಚನೆ, ನೀತಿ ನಿರೂಪಣೆ ಕೆಲಸಕ್ಕೆ ಸಮಯ ಕೊಡಲು ಆಗುತ್ತಿಲ್ಲ. ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ಹಾಗಿದ್ದರೆ ಈ ಮನೆ ಏಕೆ‘ ಎಂದು ಕಟುವಾಗಿ ಪ್ರಶ್ನಿಸಿದರು.

‘ಮೌಲ್ಯಾಧಾರಿತ ಚರ್ಚೆಗೆ ನಮ್ಮ ಪಕ್ಷ ವಿರೋಧ ವ್ಯಕ್ತಪಡಿಸುತ್ತಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸಮಜಾಯಿಷಿ ನೀಡಿದರು.

‘ಜೆಡಿಎಸ್‌ ಸದಸ್ಯರನ್ನು ಉದ್ದೇಶಿಸಿ ನಾವು ಮಾತನಾಡಿಲ್ಲ. ಮೂರು ದಿನಗಳಿಂದ ಕಲಾಪ ಹಾದಿ ತಪ್ಪುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದೆವು‘ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ‘ಕ್ಷೇತ್ರದ ನಾನಾ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಶಾಸಕರು ಬರುತ್ತಾರೆ. ಚರ್ಚಿಸಲು ಅವಕಾಶ ಸಿಗದಿದ್ದರೆ ಯಾಕೆ ಬರಬೇಕು ಎಂಬ ಭಾವನೆ ಬರುತ್ತದೆ. ವರ್ಷಕ್ಕೆ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು. ಈಗ 30–35 ದಿನ ಮಾತ್ರ ನಡೆಯುತ್ತಿದೆ. ಅಧಿವೇಶನದ ಅವಧಿ ವಿಸ್ತರಿಸಿದರೆ ಎಲ್ಲ ವಿಷಯಗಳ ಚರ್ಚೆಗೆ ಅವಕಾಶ ಸಿಗುತ್ತದೆ. ಜಂಟಿ ಅಧಿವೇಶನವನ್ನು ಮೂರು ವಾರ ಹಾಗೂ ಬಜೆಟ್‌ ಅಧಿವೇಶನವನ್ನು ಒಂದು ತಿಂಗಳು ನಡೆಸಲು ತೀರ್ಮಾನ ಕೈಗೊಳ್ಳಿ‘ ಎಂದು ಸಲಹೆ ನೀಡಿದರು.

ಜೆಡಿಎಸ್‌ನ ಜಿ.ಟಿ.ದೇವೇಗೌಡ, ’ಶಾಸಕರ ಸಂಖ್ಯೆಯ ಆಧಾರದಲ್ಲಿ ಆಯಾ ಪಕ್ಷಗಳಿಗೆ ಸಮಯ ನಿಗದಿ ಮಾಡಿ‘ ಎಂದರು. ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ, ’ಲೋಕಸಭೆಯ ಮಾದರಿಯನ್ನೇ ಇಲ್ಲೂ ಅನುಸರಿಸಿ. ವಿರೋಧ ಪಕ್ಷದ ನಾಯಕರಿಗೆ ಬಿಟ್ಟು ಉಳಿದ ಸದಸ್ಯರಿಗೆ ಮೂರು ನಿಮಿಷಕ್ಕಿಂತ ಹೆಚ್ಚು ಮಾತನಾಡಲು ಅವಕಾಶ ನೀಡಬೇಡಿ‘ ಎಂದರು.

ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ‘ಸದನ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗುತ್ತಿದೆ. ಅಭಿವೃದ್ಧಿ, ಆಡಳಿತ ವ್ಯವಸ್ಥೆ ಸುಧಾರಣೆ, ತೆರಿಗೆ ಸೋರಿಕೆ ಹಾಗೂ ಭ್ರಷ್ಟಾಚಾರ ವಿಷಯಗಳ ಬಗ್ಗೆ ಚರ್ಚೆ ಆಗುತ್ತಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

ಕಲಾಪ: ಕಾಗೇರಿಗೆ ಬಿಎಸ್‌ವೈ ಪಾಠ
‘ಒಂದು ವಾರದಿಂದ ಕಲಾಪ ದಿಕ್ಕು ತಪ್ಪಿದೆ. ಸದಸ್ಯರು ಮನಸ್ಸಿಗೆ ಬಂದಂತೆ ವರ್ತಿಸಿದಾಗ ಸಭಾಧ್ಯಕ್ಷರು ಬಿಗಿ ನಿಲುವು ತೆಗೆದುಕೊಳ್ಳಬೇಕಿತ್ತು. ಆ ಕೆಲಸ ಆಗಿಲ್ಲ. ಯಾವ ವಿಷಯದ ಬಗ್ಗೆ ಚರ್ಚೆ ನಡೆಸಬೇಕು ಎಂಬ ಬಗ್ಗೆ ಸಭಾಧ್ಯಕ್ಷರು,ಸಂಸದೀಯ ವ್ಯವಹಾರಗಳ ಸಚಿವರು ನಿರ್ಧರಿಸಬೇಕು. ಈ ವಿಷಯದಲ್ಲಿ ಇಬ್ಬರೂ ವಿಫಲರಾಗಿದ್ದೀರಿ‘ ಎಂದು ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ಈ ವಿಷಯದಲ್ಲಿ ನನ್ನನ್ನು ಮಾತ್ರ ಜವಾಬ್ದಾರಿ ಮಾಡುವುದು ಸರಿಯಲ್ಲ. ನನ್ನ ಸೂಚನೆಯನ್ನು ಮೀರಿ ಸದಸ್ಯರು ನಡೆದುಕೊಂಡ ಸಂದರ್ಭದಲ್ಲಿ ಸಚಿವರು, ವಿರೋಧ ಪಕ್ಷದ ನಾಯಕರು ಹಾಗೂ ಇತರ ಶಾಸಕರು ಎಚ್ಚರಿಕೆ ನೀಡುವ ಕೆಲಸ ಮಾಡಬೇಕಿತ್ತು‘ ಎಂದು ಕಾಗೇರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು