ಶುಕ್ರವಾರ, ಮೇ 27, 2022
22 °C

ವಿಧಾನಸಭೆ ಅಧಿವೇಶನದಲ್ಲಿ ಶೇ 75 ಸದಸ್ಯರಷ್ಟೇ ಹಾಜರು: ವಿಶ್ವೇಶ್ವರ ಹೆಗಡೆ ಕಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ (ಸುವರ್ಣ ವಿಧಾನಸೌಧ): ಈ ಬಾರಿಯ ಅಧಿವೇಶನದಲ್ಲಿ ಶೇ 75ರಷ್ಟು ಸದಸ್ಯರು ಹಾಜರಾಗಿದ್ದರು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ವಿಧಾನಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ‘ಸದನಕ್ಕೆ ಗೈರುಹಾಜರಾಗಲು 8 ಸದಸ್ಯರು ಪೂರ್ವಾನುಮತಿ ಪಡೆದಿದ್ದರು’ ಎಂದರು.

‘ಈ ವರ್ಷ 40 ದಿನಗಳ ಅಧಿವೇಶನ ನಡೆದಿದೆ. ಪ್ರತಿವರ್ಷ 60 ದಿನಗಳ ಕಾಲ ಅಧಿವೇಶನ ನಡೆಯಬೇಕು ಎಂಬುದು ನಮ್ಮ ಹಂಬಲ. ಕೊರೊನಾ ಸೋಂಕಿನ ಕಾರಣದಿಂದ ಕಳೆದ ಎರಡು ವರ್ಷದಿಂದ 60 ದಿನಗಳು ಅಧಿವೇಶನ ನಡೆದಿರಲಿಲ್ಲ. ಮುಂದಿನ ವರ್ಷ ಹೆಚ್ಚಿನ ದಿನ ಅಧಿವೇಶನ ನಡೆಸುವ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ’ ಎಂದರು.

‘ಬೆಳಗಾವಿಯಲ್ಲಿ 52 ಗಂಟೆಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ. ಒಟ್ಟು 2426 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾದ 150 ಪ್ರಶ್ನೆಗಳ ಪೈಕಿ 149 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಲಿಖಿತ ಮೂಲಕ ಉತ್ತರಿಸುವ 2032 ಪ್ರಶ್ನೆಗಳ ಪೈಕಿ 1921 ಪ್ರಶ್ನೆಗಳಿಗೆ ಉತ್ತರಗಳನ್ನು ಮಂಡಿಸಲಾಗಿದೆ. ಈ ಮೂಲಕ ಶೇ 99 ಸಾಧನೆ ಮಾಡಲಾಗಿದೆ’ ಎಂದರು. 

‘ಅತಿವೃಷ್ಟಿ ಕುರಿತ ಚರ್ಚೆಯಲ್ಲಿ 37 ಸದಸ್ಯರು ಭಾಗವಹಿಸಿದ್ದು, 8 ಗಂಟೆ 38 ನಿಮಿಷಗಳ ಕಾಲ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು 13 ಸದಸ್ಯರು ಭಾಗವಹಿಸಿದ್ದು 5 ಗಂಟೆ 45 ನಿಮಿಷಗಳ ಕಾಲ ಚರ್ಚಿಸಲಾಗಿದೆ’ ಎಂದು ಅವರು ತಿಳಿಸಿದರು.

ಸಚಿವರಿಗೆ ಗದರಿದ ಸಭಾಧ್ಯಕ್ಷ ಕಾಗೇರಿ
ಬೆಳಗಾವಿ(ಸುವರ್ಣ ವಿಧಾನಸೌಧ): ‘ಏನ್ರೀ ಸುನಿಲ್‌, ನಿರಾಣಿ ಏನ್‌ ಮಾಡ್ತಾ ಇದ್ದೀರಿ. ಸದನ ಮತ್ತು ಕಲಾಪವನ್ನು ಸರಿಯಾಗಿ ನಿಭಾಯಿಸುವ ಹೊಣೆಗಾರಿಕೆ ಸಚಿವರಾದ ನಿಮ್ಮದಲ್ಲವೇ. ಏನ್ ಮಾಡ್ತಾ ಇದ್ದೀರಿ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆಗಿ ಪ್ರಶ್ನಿಸಿದರು.

ಉತ್ತರ ಕರ್ನಾಟಕದ ವಿಷಯದಲ್ಲಿ ಚರ್ಚೆ ಸಂದರ್ಭದಲ್ಲಿ ಸದನದಲ್ಲಿ ಕೋರಂ ಇಲ್ಲದೇ ಇರುವುದನ್ನು ಧರಣಿಯಲ್ಲಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತಂದರು. ‘ಕೋರಂ ಇಲ್ಲದೆ ಸದನ ಹೇಗೆ ನಡೆಸುತ್ತೀರಿ’ ಎಂದು ಪ್ರಶ್ನಿಸಿದರು.

ಆಗಷ್ಟೇ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಹೊರಗೆ ಹೋಗಿದ್ದರು. ಇದನ್ನು ಸಿದ್ದರಾಮಯ್ಯ ಆಕ್ಷೇಪಿಸಿದರು. ಆಗ ಆಡಳಿತ ಪಕ್ಷದ ಸದಸ್ಯರೊಬ್ಬರು ಕೈಸನ್ನೆಯ ಮೂಲಕ ಶೌಚಾಲಯಕ್ಕೆ ಹೋಗಿದ್ದು ತಿಳಿಸಿದರು.

ತಲೆ ಎಣಿಸಿದ ಸಭಾಧ್ಯಕ್ಷರು, ಆಡಳಿತಪಕ್ಷದ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಧರಣಿಯಲ್ಲಿದ್ದ ಕಾಂಗ್ರೆಸ್‌ ಸದಸ್ಯರು ‘ಕೋರಂ ಕೋರಂ ಕೋರಂ’ ಎಂದು ಕೂಗಲು ಆರಂಭಿಸಿದರು.

‘ಏಯ್‌ ಸುನಿಲ್‌ ಕುಮಾರ್‌ ಹಿಂದೆ ನೀವು ಮುಖ್ಯಸಚೇತಕರಾಗಿದ್ದವರು. ಸಚೇತಕರಾದ ಸತೀಶ್‌ ರೆಡ್ಡಿ ಅವರೇ ನೀವೆಲ್ಲರೂ ಮುಂದಾಗಿ ಅವ್ಯವಸ್ಥೆ ಸರಿಪಡಿಸಬೇಕಲ್ವಾ’ ಎಂದು ಕಾಗೇರಿ ಹೇಳಿದರು.

‘ನಿರಾಣಿಯವರೇ ನೀವು ಸಚಿವರು. ಅಲ್ಲಿಂದಿಲ್ಲಿಗೆ ಓಡಾಡಿದರೆ ಹೇಗೆ? ನೀವು–ನಾವು  ಸೇರಿ ಸುಗಮ ಕಲಾಪ ನಡೆಸಬೇಕಲ್ಲವೇ? ಜವಾಬ್ದಾರಿ ಮರೆತರೆ ಹೇಗೆ? ಕಲಾಪ ಸರಿಯಾಗಿ ನಡೆಯುತ್ತಿಲ್ಲ ಎಂದು ಮೊನ್ನೆಯಿಂದಲೂ ಚರ್ಚೆ ನಡೆಸಿ, ತಪ್ಪು ತಿದ್ದಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ. ಅದು ಪಾಲನೆಯಾಗದೇ ಇದ್ದರೆ ಹೇಗೆ’ ಎಂದು ಸಭಾಧ್ಯಕ್ಷರು ಕಟುವಾಗಿಯೇ ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು