ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಚುನಾವಣೆ; ಹಣದ ಬಲ ತಡೆಯುವುದು ಸವಾಲು: ಆಯೋಗ 

Last Updated 29 ಮಾರ್ಚ್ 2023, 18:49 IST
ಅಕ್ಷರ ಗಾತ್ರ

ನವದೆಹಲಿ: ವಿಧಾನಸಭೆ ಚುನಾ ವಣೆಯ ಸಮಯದಲ್ಲಿ ಹಣದ ಬಲ ತಡೆಯುವುದು ದೊಡ್ಡ ಸವಾಲು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ರಾಜ್ಯದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಕಟ್ಟುನಿಟ್ಟಿನ ಕ್ರಮ ಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದೆ.

ರಾಜ್ಯದ ಚುನಾವಣಾ ಸಿದ್ಧತೆ ಕುರಿತು ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗವು ಕರ್ನಾಟಕಕ್ಕೆ ಇತ್ತೀಚೆಗೆ ಭೇಟಿ ನೀಡಿತ್ತು. ಹಣ ಬಲದ ಬಳಕೆಗೆ ಬಗ್ಗೆ ಕೆಲವು ರಾಜಕೀಯ ಪಕ್ಷಗಳು ದೂರು ನೀಡಿದ್ದವು. ಚುನಾವಣಾ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಅಪಾರ ಪ್ರಮಾಣದ ಹಣ ಬಳಸುತ್ತಿರುವುದು ಆಯೋಗದ ಗಮನಕ್ಕೂ ಬಂದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ತಿಳಿಸಿದರು.

ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದು ಬುಧವಾರ ದಿಂದ. ಆದರೆ, ಅಧಿಕಾರಿಗಳು ಕಟ್ಟೆಚ್ಚರ ವಹಿಸಿ ಅನೇಕ ಅಕ್ರಮಗಳಿಗೆ ತಡೆ ಒಡ್ಡಿದ್ದಾರೆ. ಕೆಲವು ದಿನಗಳಲ್ಲೇ ₹58 ಕೋಟಿ ಮೊತ್ತದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

‘ಮತದಾರರಿಗೆ ಹಣ ಮತ್ತಿತರ ಆಮಿಷ ನೀಡುವುದನ್ನು ತಡೆಗಟ್ಟಲು ಆಯೋಗ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಕೃತ್ಯಗಳ ಮೇಲೆ ನಿಗಾ ಇಡಲು 2,400 ವಿಚಕ್ಷಣಾ ತಂಡಗಳನ್ನು ರಚಿಸಲಾಗುತ್ತದೆ. ರಾಜ್ಯದ 19 ಜಿಲ್ಲೆಗಳಲ್ಲಿ ಅಂತರ್‌ರಾಜ್ಯದ ಗಡಿಗಳಿದ್ದು, ಇಲ್ಲಿ 171 ಅಂತರ್‌ರಾಜ್ಯದ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಲಾಗುತ್ತದೆ. ವಾಣಿಜ್ಯ ತೆರಿಗೆ, ಅರಣ್ಯ, ಅಬಕಾರಿ ಸೇರಿದಂತೆ ಹಲವು ಇಲಾಖೆಗಳ ಶಾಶ್ವತ ಚೆಕ್‌ಪೋಸ್ಟ್‌ಗಳು ನಿಗಾ ಇಡಲಿವೆ’ ಎಂದು ಅವರು ಮಾಹಿತಿ ನೀಡಿದರು.

ಗುಜರಾತ್‌, ಹಿಮಾಚಲ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆ ಮೇಲೆ ಹೆಚ್ಚಿನ ನಿಗಾ ವಹಿಸಿದ್ದರಿಂದ ₹1,028 ಕೋಟಿ ಮೊತ್ತದ ಹಣ ಹಾಗೂ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಇದು ಕಳೆದ ಚುನಾವಣೆಗೆ ಹೋಲಿಸಿದರೆ 23 ಪಟ್ಟು ಹೆಚ್ಚು ಎಂದು ಪ್ರತಿಪಾದಿಸಿದರು.

ರ‍್ಯಾಲಿಯಲ್ಲಿ ಹಣ ಎಸೆದ ಪ್ರಕರಣ– ಕ್ರಮದ ಭರವಸೆ: ಚುನಾವಣೆ ವೇಳೆ ಮತದಾರರ ಸೆಳೆಯಲು ಹಣ ಎಸೆಯುವಂತಹ ಘಟನೆಗಳು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಸಿದೆ.

ಮಂಗಳವಾರ ನಡೆದ ರ್‍ಯಾಲಿಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮತದಾರರ ಮೇಲೆ ಹಣ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಈ ಪ್ರತಿಕ್ರಿಯೆ ನೀಡಿದರು.

ಅಭ್ಯರ್ಥಿಗಳು, ಮುಖಂಡರು, ಏಜೆಂಟರ ವಾಹನಗಳು ಅಥವಾ ಮನೆಗಳಲ್ಲಿ ನಗದು, ಉಚಿತ ಕೊಡುಗೆಗಳು ಕಂಡುಬಂದರೆ, ಆ ವ್ಯಕ್ತಿ ಯಾರೇ ಆಗಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಅಧಿಕಾರಿಗಳಿಂದ ಮತಗಟ್ಟೆ ನಿರ್ವಹಣೆ

l ಎಲ್ಲ ಮತಗಟ್ಟೆಗಳು ನೆಲಮಹಡಿಯಲ್ಲಿ ಇರಲಿವೆ. ಅಂಗವಿಕಲರ ಅನುಕೂ ಲಕ್ಕಾಗಿ ಗಾಲಿ ಕುರ್ಚಿಯೊಂದಿಗೆ ಗಟ್ಟಿಮುಟ್ಟಾದ ರ‍್ಯಾಂಪ್‌ ನಿರ್ಮಿಸಲಾಗುತ್ತದೆ. ಎಲ್ಲ ಮತಗಟ್ಟೆಗಳಲ್ಲಿ ಶೌಚಾಲಯ, ರ‍್ಯಾಂಪ್‌, ವಿದ್ಯುತ್‌, ಕುಡಿ ಯುವ ನೀರು ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.

l ಮಹಿಳಾ ಅಧಿಕಾರಿಗಳು ಹಾಗೂ ಅಂಗವಿಕಲರು ಪ್ರತ್ಯೇಕ ಮತಗಟ್ಟೆಗಳ ನಿರ್ವಹಣೆ ಮಾಡಲಿದ್ದಾರೆ. ಮಹಿಳಾ ಮತಗಟ್ಟೆಯಲ್ಲಿ ಪೊಲೀಸ್‌, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ಸಿಬ್ಬಂದಿ ಮಹಿಳೆಯರೇ ಇರಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಒಂದು ಮಾದರಿ ಮತಗಟ್ಟೆಯನ್ನು ಸ್ಥಳೀಯ ವಸ್ತುಗಳನ್ನು, ವಿವಿಧ ಕಲಾಪ್ರಕಾರಗಳನ್ನು ಬಳಸಿ ಅಲಂಕಾರ ಮಾಡಲಾಗುತ್ತದೆ.

l ಜಿಲ್ಲೆಗೆ ಒಂದು ಮತಗಟ್ಟೆಯನ್ನು ಲಭ್ಯವಿರುವ ಅತ್ಯಂತ ಕಿರಿಯ ಉದ್ಯೋಗಿಗಳ ತಂಡ ನಿರ್ವಹಿಸಲಿದೆ. ಇದು ಚುನಾವಣಾ ಆಯೋಗದ ಹೊಸ ಯೋಜನೆ.

l ಚುನಾವಣಾ ವೇಳಾಪಟ್ಟಿ ಘೋಷಣೆಯಾದ ದಿನದಿಂದ ಫಲಿತಾಂಶ ಘೋಷಣೆಯಾಗುವ ದಿನಾಂಕದ ವರೆಗೆ ರಾತ್ರಿ 10ರಿಂದ ಬೆಳಗ್ಗಿನ ಜಾವ 6ರ ವರೆಗೆ ಎಲ್ಲ ರೀತಿಯ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸ
ಲಾಗಿದೆ ಎಂದೂ ಅವರು ಹೇಳಿದರು.

80 ವರ್ಷ ದಾಟಿದವರಿಗೆ ಮನೆಯಿಂದಲೇ ಮತ

ಅಂಗವಿಕಲರು, 80 ವರ್ಷ ದಾಟಿದವರು, ಅಗತ್ಯ ಸೇವೆಯ ಉದ್ಯೋಗಸ್ಥರು ಹಾಗೂ ಕೋವಿಡ್‌ ಬಾಧಿತರು ಅಂಚೆ ಮತದಾನ (ಮನೆಯಿಂದಲೇ ಮತ ಚಲಾಯಿಸಲು ಅವಕಾಶ) ಮಾಡಬಹುದು. ಇದಕ್ಕಾಗಿ ಆಯೋಗದ ನಿಯಮಾವಳಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಇವರನ್ನು ’ಗೈರುಹಾಜರಿ ಮತದಾರರು’ ಎಂದು ಗುರುತಿಸಲಾಗುತ್ತದೆ. ಈ ಮತದಾರರು ಅಂಚೆ ಮತ ಪತ್ರದ ಮೂಲಕ ಮತ ಚಲಾಯಿಸಲು ಅರ್ಹರು.

ಅಂಚೆ ಮತಪತ್ರದ ಮೂಲಕ ಹಕ್ಕು ಚಲಾಯಿಸಲು ಬಯಸುವವರು ನಮೂನೆ 12 ಡಿಯಲ್ಲಿ ಅಗತ್ಯವಿರುವ ಎಲ್ಲ ವಿವರಗಳನ್ನು ನೀಡಬೇಕು. ಮತದಾನದ ದಿನಾಂಕಕ್ಕಿಂತ 5 ದಿನಗಳ ಮೊದಲು ಚುನಾವಣಾ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಅಂಗವಿಕಲರು ನಮೂನೆ 12 ಡಿ ಜತೆಗೆ ಅಸಾಮರ್ಥ್ಯದ ಪ್ರಮಾಣಪತ್ರ ಸಲ್ಲಿಸಬೇಕು.

ಒಂದು ಮತಗಟ್ಟೆ ತಂಡವು ಇಬ್ಬರು ಅಧಿಕಾರಿಗಳನ್ನು ಒಳಗೊಂಡಿದ್ದು, ವಿಡಿಯೊಗ್ರಾಫರ್‌ ಹಾಗೂ ಭದ್ರತಾ ಸಿಬ್ಬಂದಿಯ ಜತೆಗೆ ಮತದಾರನ ಮನೆಗೆ ತೆರಳಿ ಅಂಚೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸುತ್ತದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT