ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ನಲ್ಲಿ ಮತಾಂತರ ನಿಷೇಧ ಮಸೂದೆ ಅಂಗೀಕಾರ

* ಕಾಂಗ್ರೆಸ್‌– ಜೆಡಿಎಸ್‌ ಗದ್ದಲ, ಸಭಾತ್ಯಾಗ * ಪ್ರತಿ ಹರಿದ ಕಾಂಗ್ರೆಸ್‌ ಸದಸ್ಯರು
Last Updated 15 ಸೆಪ್ಟೆಂಬರ್ 2022, 16:02 IST
ಅಕ್ಷರ ಗಾತ್ರ

ಬೆಂಗಳೂರು: ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ತೀವ್ರ ವಿರೋಧ, ಗದ್ದಲ, ಧಿಕ್ಕಾರ, ಸಭಾತ್ಯಾಗದ ನಡುವೆಯೇ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ’ (ಮತಾಂತರ ನಿಷೇಧ) ವಿಧಾನ ಪರಿಷತ್‌ನಲ್ಲಿ ಧ್ವನಿಮತದ ಮೂಲಕ ಗುರುವಾರ ಅಂಗೀಕಾರಗೊಂಡಿತು.

ಈ ಮಸೂದೆಗೆ 2021ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆ ಅಂಗೀಕಾರ ನೀಡಿತ್ತು. ಆದರೆ, ಸಂಖ್ಯಾಬಲದ ಕೊರತೆ ಕಾರಣಕ್ಕೆ ಅಂದು ವಿಧಾನಪರಿಷತ್‌ನಲ್ಲಿ ಮಂಡಿಸದ ಸರ್ಕಾರ, ಕಳೆದ ಮೇ ತಿಂಗಳಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೊಳಿಸಿತ್ತು.

ಮಸೂದೆಯು ಕಾಯ್ದೆ ಸ್ವರೂಪ ಪಡೆಯಲು ಎರಡೂ ಸದನಗಳ ಅಂಗೀಕಾರ ಅಗತ್ಯ. ಹೀಗಾಗಿ, ಗುರುವಾರ ಬೆಳಿಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಪರಿಷತ್‌ನಲ್ಲಿ ಮಸೂದೆ ಮಂಡಿಸಿದರು. ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆದ ಏಟು– ಎದಿರೇಟಿನ ವಾಗ್ಯುದ್ಧದ ಬಳಿಕ ಮಸೂದೆಗೆ ಅಂಗೀಕಾರ ನೀಡುವಂತೆ ಗೃಹ ಸಚಿವರು ಕೋರಿದರು.

ಆಗ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಮುಖ್ಯ ಸಚೇತಕ ಪ್ರಕಾಶ್‌ ರಾಠೋಡ್‌, ಪಿ.ಆರ್‌. ರಮೇಶ್ ಮತ್ತಿತರರು, ‘ಸಂವಿಧಾನ ವಿರೋಧಿಯಾದ, ಗುಪ್ತ ಕಾರ್ಯಸೂಚಿ ಹೊಂದಿದ ಮಸೂದೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಮಸೂದೆಯಲ್ಲಿರುವ ಕೆಲವು ಅಂಶಗಳಿಗೆ ಸ್ಪಷ್ಟನೆ ನೀಡಬೇಕು’ ಎಂದು ಪ‍ಟ್ಟು ಹಿಡಿದರು.‌‌ ಅಲ್ಲದೆ, ಕಾಯ್ದೆ ಜಾರಿಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ದಾಖಲಾದ ಪ್ರಕರಣಗಳ ಮಾಹಿತಿ ನೀಡುವಂತೆ ಆಗ್ರಹಿಸಿದರು.

ಆದರೆ, ಕಾಂಗ್ರೆಸ್‌ ಬೇಡಿಕೆಗೆ ಅವಕಾಶ ನೀಡದ ಸಭಾಪತಿ ರಘುನಾಥ ರಾವ್‌ ಮಲ್ಕಾಪುರೆ, ಮಸೂದೆಯನ್ನು ಧ್ವನಿಮತಕ್ಕೆ ಹಾಕಿದರು. ಸಭಾಪತಿಯ ನಡೆಗೆ ತೀವ್ರ ವಿರೋಧ ವ್ಯಕ್ತಪ‍ಡಿಸಿದ ಕಾಂಗ್ರೆಸ್‌ ಸದಸ್ಯರು, ಎದ್ದು ನಿಂತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮಸೂದೆಯ ಪ್ರತಿಗಳನ್ನು ಹರಿದು ಸಭಾಪತಿ ಪೀಠದ ಕಡೆಗೆ ಎಸೆದು ‌ಸಭಾತ್ಯಾಗ ಮಾಡಿದರು. ಜೆಡಿಎಸ್‌ ಸದಸ್ಯರು ಕೂಡಾ ಕಾಂಗ್ರೆಸ್‌ ಸದಸ್ಯರನ್ನು ಹಿಂಬಾಲಿಸಿದರು.

ಮಸೂದೆ ಮಂಡಿಸಿ ಮಾತನಾಡಿದ ಆರಗ ಜ್ಞಾನೇಂದ್ರ, ‘ಇತ್ತೀಚೆಗೆ ಮತಾಂತರ ಪ್ರಕ್ರಿಯೆಗಳು ವ್ಯಾಪಕವಾಗಿ ನಡೆಯುತ್ತಿವೆ. ಈ ಮಸೂದೆಯು ಯಾವುದೇ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯ ಕಸಿಯುವುದಿಲ್ಲ. ಕಾಯ್ದೆ ಜಾರಿಯಾದ ಬಳಿಕವೂ ಮತಾಂತರವಾಗಲು ಸ್ವಾತಂತ್ರ್ಯವಿದೆ’ ಎಂದು ಪ್ರತಿಪಾದಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕಬಿ.ಕೆ. ಹರಿಪ್ರಸಾದ್‌, ‘ಈ ಮಸೂದೆಯೇ ಕಾನೂನುಬಾಹಿರ. ಮತಾಂತರ ವ್ಯಾಪಕವಾಗಿ ನಡೆಯುತ್ತಿದ್ದರೆ ಕ್ರೈಸರ ಸಂಖ್ಯೆ ಹೆಚ್ಚಾಗಬೇಕಾಗಿತ್ತು. ಆದರೆ, 2001ರಲ್ಲಿ ಶೇ 2.31ರಷ್ಟು ಇದ್ದ ಕ್ರೈಸ್ತರ ಜನಸಂಖ್ಯೆ, 2011ರಲ್ಲಿ ಶೇ 2.30ರಷ್ಟಿತ್ತು. ಮತಾಂತರ ನಿಷೇಧದ ಬಗ್ಗೆ ಶಾಸನ ರೂಪಿಸಲು ವಿಧಾನಸಭೆ ಮತ್ತು ವಿಧಾನ ಪರಿಷತ್‌ಗೆ ಅಧಿಕಾರ ಇಲ್ಲ. ಸಂಸತ್‌ಗೆ ಮಾತ್ರ ಅಧಿಕಾರ ಇದೆ.ಸಂವಿಧಾನದ ಮೂಲ ಆಶಯಗಳಿಗೆ ತಿದ್ದುಪಡಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT