ಗುರುವಾರ , ಅಕ್ಟೋಬರ್ 21, 2021
29 °C

ದಲಿತ ಶಾಸಕನ ವಿರುದ್ಧವೇ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದೇಕೆ: ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಲಿತ ಪರ–ವಿರೋಧ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಟ್ವೀಟ್ ಸಮರ ತಾರಕಕ್ಕೇರಿದೆ. ಅಂದು ದಲಿತ ಶಾಸಕನ ಪರ ನಿಲ್ಲುವುದು ಬಿಟ್ಟು, ಅವರ ವಿರುದ್ಧವೇ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದೇಕೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರಕರಣ ಉಲ್ಲೇಖಿಸಿ ಕಾಂಗ್ರೆಸ್‌ ಅನ್ನು ಬಿಜೆಪಿ ಪ್ರಶ್ನಿಸಿದೆ.

‘ತಾನು ಕಳ್ಳ ಪರರ ನಂಬ ಎಂಬ ಗಾದೆ ಮಾತು ಕಾಂಗ್ರೆಸ್‌ ಪಕ್ಷಕ್ಕಾಗಿಯೇ ಮಾಡಿದ್ದು ಎಂಬುದು ಈಗ ಖಾತ್ರಿಯಾಯಿತು. ತಮ್ಮ ಮತ ಬ್ಯಾಂಕ್ ಬೇಸರಗೊಳ್ಳುತ್ತದೆ ಎಂಬ ಕಾರಣಕ್ಕೆ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಸಾಂತ್ವನ ಹೇಳುವುದಕ್ಕೂ ಅಂಜಿದ್ದು ನೀವಲ್ಲವೇ’ ಎಂದು ಕಾಂಗ್ರೆಸ್ ನಾಯಕರನ್ನು ಬಿಜೆಪಿ ಪ್ರಶ್ನಿಸಿದೆ.

ಓದಿ: 

‘ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಸತ್ಯ ಶೋಧನೆಗೆ ನೀವು ರಚಿಸಿದ ಸಮಿತಿ ಏನು ಮಾಡಿದೆ? ಸತ್ಯ ಶೋಧನಾ ಸಮಿತಿಯಾದರೂ ಸತ್ಯ ಹೇಳಿದೆಯೇ? ಆತ್ಮಸಾಕ್ಷಿಯೇ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆಯಿದೆಯೇ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಅಖಂಡ ಅವರ ಮನೆಗೆ ಬೆಂಕಿ ಇಟ್ಟವರು ನನ್ನ ಸಹೋದರರು, ನನ್ನ ಮೈಯಲ್ಲಿ ಹರಿಯುವುದು ಅವರದೇ ರಕ್ತ ಎಂದು ನಿಮ್ಮ ಭ್ರಷ್ಟಾಧ್ಯಕ್ಷರು ಹೇಳಿದ್ದು ನೆನಪಿದೆಯೇ? ದಲಿತ ಶಾಸಕನ ಪರ ನಿಲ್ಲುವುದು ಬಿಟ್ಟು, ಅವರ ವಿರುದ್ಧವೇ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದೇಕೆ? ಕಾಂಗ್ರೆಸ್ ದಲಿತ ವಿರೋಧಿ ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

ಓದಿ: 

ಮನುಸ್ಮೃತಿಯನ್ನು ನಂಬಿರುವ ಬಿಜೆಪಿ ತನ್ನ ಗುಪ್ತ ಅಜೆಂಡಾವಾದ ದಲಿತ ವಿರೋಧಿ ವಾತಾವರಣವನ್ನು ವ್ಯವಸ್ಥಿತವಾಗಿ ಸ್ಥಾಪಿಸುತ್ತಿರುವ ಪರಿಣಾಮದಿಂದಲೇ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ ಎಂದು ಮೊದಲಿಗೆ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ಕಾಂಗ್ರೆಸ್ ನಂಬಿರುವುದು ತಾಲಿಬಾನ್, ಐಸಿಸ್ ಸ್ಮೃತಿಯೇ ಎಂದು ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ್ದ ಕಾಂಗ್ರೆಸ್, ಬೆಂಗಳೂರಿನ ಹೃದಯಭಾಗದಲ್ಲಿ, ಒಬ್ಬ ಜನಪ್ರತಿನಿಧಿಗೆ ರಕ್ಷಣೆ ನೀಡದ್ದು ಸರ್ಕಾರದ ಕಾನೂನು ಸುವ್ಯವಸ್ಥೆಯ ಅಧೋಗತಿಗೆ ಸಾಕ್ಷಿ. ಅಖಂಡ ಶ್ರೀನಿವಾಸಮೂರ್ತಿ ದಲಿತರೆಂಬ ಕಾರಣಕ್ಕೆ ಬಿಜೆಪಿ ಸರ್ಕಾರ ರಕ್ಷಣೆ ನೀಡಲು ವಿಳಂಬ ಮಾಡಿ ತನ್ನ ದಲಿತ ವಿರೋಧಿ ನೀತಿಯ ತಾಲಿಬಾನ್ ಸಂಸ್ಕೃತಿಯನ್ನು ನಿರೂಪಿಸಿದೆ ಎಂದು ಟೀಕಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು