ಶುಕ್ರವಾರ, ಮೇ 20, 2022
23 °C

ಸ್ಥಳೀಯ ಸಂಸ್ಥೆ ಚುನಾವಣೆ: 3 ನಗರಸಭೆಗಳಲ್ಲಿ ಬಿಜೆಪಿ; ಶಿರಾ, ಹೊಸಪೇಟೆ ಅತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ 5 ನಗರ ಸಭೆಗಳು ಸೇರಿ ಅವಧಿಪೂರ್ಣಗೊಂಡಿರುವ 58 ನಗರ ಸ್ಥಳೀಯ ಸಂಸ್ಥೆಗಳು ಮತ್ತು 59 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತಗಳ ಎಣಿಕೆ ಇಂದು ನಡೆಯಿತು. ಬಿಜೆಪಿ ಮೂರು ನಗರಸಭೆಗಳಲ್ಲಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಹೊಸಪೇಟೆ ಮತ್ತು ಶಿರಾದಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದೆ.

ಹೊಸಪೇಟೆಯ ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ‌ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ಸೃಷ್ಟಿಯಾಗಿದೆ. ಒಟ್ಟು 35 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರರು ತಲಾ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಹತ್ತು ಕ್ಷೇತ್ರಗಳಲ್ಲಿ ಗೆದ್ದರೆ, ಆಮ್ ಆದ್ಮಿ ಪಕ್ಷ ಒಂದು ಸ್ಥಾನದಲ್ಲಿ ಗೆಲ್ಲುವುದರ ಮೂಲಕ ಮೊದಲ ಚುನಾವಣೆಯಲ್ಲೇ ಖಾತೆ ತೆರೆದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಹಿನ್ನಡೆಯಾಗಿದೆ. ಈ ಸಲ ನಗರಸಭೆಯಲ್ಲಿ ಬಿಜೆಪಿ ಬಾವುಟ ಹಾರಾಡುವುದು ಖಚಿತ ಎಂದು ಹಲವು ಸಲ ಆನಂದ್ ಸಿಂಗ್ ಹೇಳಿಕೆ ನೀಡಿದ್ದರು.

35 ವಾರ್ಡ್‌ಗಳ ಗದಗ ಬೆಟಗೇರಿ ನಗರಸಭೆಯು ಬಿಜೆಪಿ ಕೈವಶವಾಗಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ 15 ಸ್ಥಾನ ಗಳಿಸಿದ್ದು, ಒಟ್ಟು 18 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಎರಡು ಸ್ಥಾನ ಪಕ್ಷೇತರರ ಪಾಲಾಗಿದೆ.

ಚಿಕ್ಕಮಗಳೂರಿನಲ್ಲೂ ಸಹ ಬಿಜೆಪಿ 18 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಳ ಬಹುಮತ ಪಡೆದಿದೆ. 35 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ 12, ಜೆಡಿಎಸ್‌ 2, ಪಕ್ಷೇತರರು 2 ಹಾಗೂ ಎಸ್‌ಡಿಪಿಐ 1 ಸ್ಥಾನದಲ್ಲಿ ಗೆದ್ದಿದೆ.

ಶಿರಾ ನಗರಸಭೆಯಲ್ಲಿ ಯಾವ ಪಕ್ಷಕ್ಕೂ ಬಹುತ ಸಿಕ್ಕಿಲ್ಲ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರ ಹಿಡಿಯಲು ಕಸರತ್ತು ಆರಂಭವಾಗಿದೆ. ಪಕ್ಷೇತರರು ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆ. ಒಟ್ಟು 30 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಅತಿ ಹೆಚ್ಚು 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 7, ಬಿಜೆಪಿ 4 ಹಾಗೂ ಪಕ್ಷೇತರರು 8 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್‌ಗೆ ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚಿದ್ದು, ಪಕ್ಷೇತರರ ಬೆಂಬಲ ಅನಿವಾರ್ಯವಾಗಿದೆ. ಪಕ್ಷೇತರರು ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬುದರ ಮೇಲೆ ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.

ಬೆಂಗಳೂರಿನ ಹೆಬ್ಬಗೋಡಿ ನಗರಸಭೆಯ ವಾರ್ಡ್‌ಗಳ ಪೈಕಿ ಬಿಜೆಪಿ 16 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಖಚಿತ ಪಡಿಸಿಕೊಂಡಿದೆ. ಕಾಂಗ್ರೆಸ್‌ 12 ಹಾಗೂ ಜೆಡಿಎಸ್‌ 3 ಸ್ಥಾನಗಳನ್ನು ಪಡೆದಿವೆ.

ವಿವಿಧ ಜಿಲ್ಲೆಗಳ 19 ಪುರಸಭೆಗಳು ಮತ್ತು 34 ಪಟ್ಟಣ ಪಂಚಾಯಿತಿಗಳ ಫಲಿತಾಂಶ ಪ್ರಕಟವಾಗಿದೆ. 1,185 ವಾರ್ಡ್‌ಗಳಲ್ಲಿ 4,961 ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದಾರೆ. ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ 9 ವಾರ್ಡ್‌ಗಳಿಗೆ ಮತ್ತು ವಿವಿಧ ಗ್ರಾಮ ಪಂಚಾಯಿತಿಗಳ 401 ಸ್ಥಾನಗಳ ಉಪಚುನಾವಣೆ ಫಲಿತಾಂಶವೂ ಹೊರಬಂದಿದೆ.

ಇದನ್ನೂ ಓದಿ:

ಐದು ನಗರಸಭೆಗಳ ಫಲಿತಾಂಶ

* ಗದಗ ಬೆಟಗೇರಿ– ಬಿಜೆಪಿ
* ಚಿಕ್ಕಮಗಳೂರು– ಬಿಜೆಪಿ
* ಹೆಬ್ಬಗೋಡಿ–ಬಿಜೆಪಿ
* ಶಿರಾ– ಅತಂತ್ರ
* ಹೊಸಪೇಟೆ–ಅತಂತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು