ಮಂಗಳವಾರ, ಜೂನ್ 28, 2022
24 °C
ನಿರ್ಣಯಗಳು ಕೋರ್ಟ್ ಅಂತಿಮ ಆದೇಶಕ್ಕೆ ಬದ್ಧ

ಕಸಾಪ ವಿಶೇಷ ಸಭೆಗೆ ಕೋರ್ಟ್‌ ಅಂಕುಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಮೇ 1ರಂದು ಕರೆಯಲಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ವಿಶೇಷ ಸಭೆ ಮತ್ತು ಮಹಾಸಭೆಯಲ್ಲಿ ಕೈಗೊಳ್ಳಲಾಗುವ ಯಾವುದೇ ನಿರ್ಣಯಗಳು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ದಾಖಲಾಗಿರುವ ಅಸಲು ದಾವೆಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಸಿಟಿ ಸಿವಿಲ್‌ ಕೋರ್ಟ್‌ನ 2ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

‘ಕಾಗಿನೆಲೆಯ ಶ್ರೀ ಕನಕ ಕಲಾಭವನದಲ್ಲಿ ಸರ್ವ ಸದಸ್ಯರ ವಿಶೇಷ ಸಭೆ ನಡೆಸಲು 2022ರ ಮಾರ್ಚ್‌ 25ರಂದು ಹೊರಡಿಸಲಾದ ತಿಳಿವಳಿಕೆ ಪತ್ರವನ್ನು ತಡೆಹಿಡಿಯಬೇಕು‘ ಎಂದು ಕೋರಿ ಕಾಮಾಕ್ಷಿಪಾಳ್ಯದ ಎನ್.ಹನುಮೇಗೌಡ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ರಜಾಕಾಲದ ಸೆಷನ್ಸ್‌ ನ್ಯಾಯಾಧೀಶೆ ಶೈಲಾ ಅವರು ಶನಿವಾರ ತುರ್ತು ವಿಚಾರಣೆ ನಡೆಸಿದರು.

ಅರ್ಜಿದಾರರ ಪರ ಹೈಕೋರ್ಟ್ ವಕೀಲ ರಮೇಶ್‌ ಬಾಬು, ‘ಕಸಾಪ ಅಧ್ಯಕ್ಷರು ಪರಿಷತ್ತಿನ ನಿಬಂಧನೆಗಳಿಗೆ ವಿರುದ್ಧವಾಗಿ ತಮ್ಮ ಸ್ವಹಿತಾಸಕ್ತಿಗಾಗಿ ಈ ವಿಶೇಷ ಸಭೆಯನ್ನು ಕರೆದಿದ್ದಾರೆ. ಇದಕ್ಕೆ ಕಾರ್ಯಕಾರಿ ಸಮಿತಿಯ ಅನುಮೋದನೆ ಇಲ್ಲ. ವಿಶೇಷ ಸಭೆಯ ಕಾರ್ಯಸೂಚಿಯನ್ನು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಲು ಅವಕಾಶವಿದ್ದಾಗಲೂ ವಿನಾಕಾರಣ ವಿಶೇಷ ಸಭೆ ನಡೆಸುವುದು ಆರ್ಥಿಕ ನಷ್ಟದ ಜೊತೆಗೆ ನಿಯಮ
ಬಾಹಿರ. ಹೀಗಾಗಿ, ಉದ್ದೇಶಿತ ಸರ್ವ ಸದಸ್ಯರ ಸಭೆ ನಡೆಸಲು 2022ರ ಮಾರ್ಚ್‌ 25ರಂದು ಹೊರಡಿಸಲಾದ ತಿಳಿವಳಿಕೆ ಪತ್ರವನ್ನು ಅಸಿಂಧು ಎಂದು ಘೋಷಿಸಬೇಕು’ ಎಂದು ಮನವಿ ಮಾಡಿದರು. 

ಪ್ರತಿವಾದಿ ಕಸಾಪ ಅಧ್ಯಕ್ಷರ ಬದಲಿಗೆ ಕಾರ್ಯದರ್ಶಿ ಪರ ವಕೀಲರು ವಕಾಲತ್ತು ಸಲ್ಲಿಸಿದ್ದನ್ನೂ ರಮೇಶ್‌ ಬಾಬು ಇದೇ ವೇಳೆ ಆಕ್ಷೇಪಿಸಿದರು. ಈ ಆಕ್ಷೇಪಣೆಯನ್ನು ಪರಿಗಣಿಸಿದ ನ್ಯಾಯಾಧೀಶರು ಸೂಕ್ತ ರೀತಿಯಲ್ಲಿ ಪ್ರತಿವಾದಿಯನ್ನು ಪ್ರತಿನಿಧಿಸುವಂತೆ ಆದೇಶಿಸಿದರಲ್ಲದೆ, ‘ಮೇ 1ರಂದು ಕಾಗಿನೆಲೆಯಲ್ಲಿ ನಡೆಯಲಿರುವ ಸರ್ವಸದಸ್ಯರ ವಿಶೇಷ ಸಭೆಯ ನಿರ್ಣಯಗಳು ಮೂಲ ದಾವೆಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಆದೇಶಿಸಿ ಮಧ್ಯಂತರ ಅರ್ಜಿಯನ್ನು ವಿಲೇವಾರಿ ಮಾಡಿದರು.

ಕಸಾಪ ಅಧ್ಯಕ್ಷರಿಗೆ ಹೊಸ ಇನೋವಾ ಕಾರು!:

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಹೊಸ ಇನೋವಾ ಕಾರು ಖರೀದಿಸಲು ಹಣಕಾಸು ಸಲಹಾ ಸಮಿತಿ ಸಭೆ ಒಪ್ಪಿಗೆ ನೀಡಿದೆ.

ಏಪ್ರಿಲ್‌ 18ರಂದು ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

'ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿಸ್ತಾರಗೊಳಿಸಲು ವಿವಿಧ ಜಿಲ್ಲೆಗಳಿಗೆ ಪ್ರವಾಸ ತೆರಳಬೇಕಾಗುತ್ತದೆ. ಅಧ್ಯಕ್ಷರು ಈಗ ಉಪಯೋಗಿಸುವ ಇನೋವಾ ಕಾರು ಆರು ವರ್ಷಗಳ ಹಳೆಯದಾಗಿದ್ದು, ಪದೇ ಪದೇ ದುರಸ್ತಿಗೆ ಬರುತ್ತಿದೆ. ಹೀಗಾಗಿ, ಹೊಸ ಇನೋವಾ ಕಾರು ಖರೀದಿಸುವುದು ಅನಿವಾರ್ಯ’ ಎಂದು ಸಭೆಯ ನಡಾವಳಿಯಲ್ಲಿ ಉಲ್ಲೇಖಿಸಲಾಗಿದೆ. ಪರಿಷತ್ತಿನ ಅಧ್ಯಕ್ಷರ ಪ್ರವಾಸದ ಅವಧಿಯ ದಿನ ಭತ್ಯೆಯನ್ನು ₹2ಸಾವಿರದಿಂದ ₹3ಸಾವಿರಕ್ಕೆ ಹೆಚ್ಚಿಸಲು ಈ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಕಾರ್ಯಕಾರಿ ಸಮಿತಿ ಸದಸ್ಯರ ಸಭಾಭತ್ಯೆಯನ್ನು ಸಹ ₹2 ಸಾವಿರದಿಂದ ₹3ಸಾವಿರಕ್ಕೆ ಹೆಚ್ಚಿಸಲು ಜನವರಿಯಲ್ಲಿ ಒಪ್ಪಿಗೆ ನೀಡಲಾಗಿತ್ತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು