ಮಂಗಳವಾರ, ಸೆಪ್ಟೆಂಬರ್ 28, 2021
25 °C

ಧೈರ್ಯ ಇದ್ದರೆ ಕೇಂದ್ರದ ಎದುರು ಧರಣಿ ಮಾಡಿ: ಸಂಸದರಿಗೆ ಡಿ.ಕೆ. ಶಿವಕುಮಾರ್ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ಮೇಕೆದಾಟು ವಿಚಾರದಲ್ಲಿ ಸಚಿವರು ಕೇವಲ ಪ್ರಚಾರಕ್ಕೆ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಸಂಸದರು, ಸಚಿವರಿಗೆ ಧೈರ್ಯ ಇದ್ದರೆ ಪ್ರಧಾನಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ತಮ್ಮ ಹಕ್ಕು ಮಂಡಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.

ಕನಕಪುರದಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಮಾತನಾಡಿದರೆ ಎಲ್ಲಿ ನಮ್ಮ ಸ್ಥಾನ, ಅಧಿಕಾರ ಹೋಗುತ್ತದೆ ಎಂದು ರಾಜ್ಯದ ಸಂಸದರು ಹಾಗೂ ಸಚಿವರು ಮೋದಿ ಎದುರು ಮಾತನಾಡಲು ಹೆದರುತ್ತಿದ್ದಾರೆ. ಬೊಮ್ಮಾಯಿ, ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಮೊದಲಾದವರ ಉಸಿರು ನಿಂತು ಹೋಗಿದೆ. ಹೀಗಾಗಿಯೇ ಮೇಕೆದಾಟು, ಮಹದಾಯಿ ಸೇರಿದಂತೆ ಎಲ್ಲ ವಿಚಾರಗಳಲ್ಲೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ’ ಎಂದು ಟೀಕಿಸಿದರು.

ಇದನ್ನೂ ಓದಿ: 

‘ಮೇಕೆದಾಟು ಅಣೆಕಟ್ಟೆಯಿಂದ ಸಾವಿರಾರು ಹೆಕ್ಟೇರ್‌ ಪ್ರದೇಶ ಮುಳುಗಡೆ ಆಗಲಿದೆ. ಕನಕಪುರ ತಾಲ್ಲೂಕಿಗೆ ಕೃಷಿಗೆ ಒಂದು ಹನಿ ನೀರು ಸಿಗುವುದಿಲ್ಲ. ಹೀಗಿದ್ದೂ ನಾವು ಜಮೀನು ಬಿಟ್ಟುಕೊಡಲು ಸಿದ್ಧರಿದ್ದೇವೆ. ಅಣೆಕಟ್ಟೆಯಿಂದ ಉತ್ಪಾದನೆ ಆಗುವ ವಿದ್ಯುತ್‌ ಅನ್ನು ತಮಿಳುನಾಡು ಸರ್ಕಾರವೇ ಖರೀದಿ ಮಾಡಲಿ. ರಾಜ್ಯದ 25 ಬಿಜೆಪಿ ಸಂಸದರು ಧರಣಿ ಮಾಡಿ ಯೋಜನೆಗೆ ಚಾಲನೆ ಕೊಡಿಸಬೇಕು’ ಎಂದರು.

ಹೇಳಿಕೆಗೆ ವಿರೋಧ: ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರ ನಮ್ಮ ಪರವಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. ಇದೊಂದು ಮಾತು ಸಾಕು, ತಮಿಳುನಾಡು ಸರ್ಕಾರದವರು ಇದನ್ನೇ ಮುಂದಿಟ್ಟುಕೊಂಡು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸುತ್ತಾರೆ. ಸಚಿವರು ಜವಾಬ್ದಾರಿಯಿಂದ ಹೇಳಿಕೆ ಕೊಡಬೇಕು ಎಂದು ಶಿವಕುಮಾರ್ ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ‘ಅವರು ಯಾವುದೇ ನಶೆಯಲ್ಲಿ ಇದ್ದಾರೆ. ಆ ಬಗ್ಗೆ ಮಾತು ಬೇಡ’ ಎಂದಷ್ಟೇ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು