ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ: ಎತ್ತಿನ ಬಂಡಿಯಲ್ಲಿ ವಿಧಾನಸೌಧಕ್ಕೆ ಹೊರಟ ಸಿದ್ದರಾಮಯ್ಯ, ಡಿಕೆಶಿ

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಹೋರಾಟ
Last Updated 13 ಸೆಪ್ಟೆಂಬರ್ 2021, 5:39 IST
ಅಕ್ಷರ ಗಾತ್ರ

ಬೆಂಗಳೂರು:ಅಗತ್ಯ ವಸ್ತುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಪ್ರತಿಭಟನೆ ಆರಂಭಿಸಿರುವ ಕಾಂಗ್ರೆಸ್‌, ವಿಧಾನಸೌಧಕ್ಕೆ ಎತ್ತಿನ ಬಂಡಿ ಪ್ರಯಾಣ ಆರಂಭಿಸಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತಿತರರು ಎತ್ತಿನ ಬಂಡಿಯಲ್ಲಿ ವಿಧಾನಸೌಧದತ್ತ ಹೊರಟಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಿವಾಸದಿಂದ ಎತ್ತಿನ ಬಂಡಿಗಳು ವಿಧಾನಸೌಧದ ಕಡೆಗೆ ಹೊರಟಿವೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಿಂದ ಆಗಿರುವ ತೊಂದರೆ ಕುರಿತು ಸಾಂಕೇತಿಕವಾಗಿ ಪ್ರತಿಭಟನೆ ವ್ಯಕ್ತಪಡಿಸಲು ಕಾಂಗ್ರೆಸ್‌ ನಾಯಕರು ಎತ್ತಿನ ಬಂಡಿ ಏರಿದ್ದಾರೆ. ಪಕ್ಷದ ನೂರಾರು ಕಾರ್ಯಕರ್ತರು ಅವರೊಂದಿಗೆ ಇದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ ಸೇರಿದಂತೆ ಕಾಂಗ್ರೆಸ್‌ನ ಹಲವು ಶಾಸಕರು ಎತ್ತಿನ ಬಂಡಿಯಲ್ಲೇ ವಿಧಾನಸೌಧದತ್ತ ಹೊರಟಿದ್ದಾರೆ.

ಸಿದ್ದರಾಮಯ್ಯ ಸ್ವತಃ ಎತ್ತಿನ ಬಂಡಿಯನ್ನು ಚಲಾಯಿಸುತ್ತಿದ್ದಾರೆ. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್ಾರ್‌. ಪಾಟೀಲ, ಶಾಸಕ ಎಂ.ಬಿ. ಪಾಟೀಲ ಅವರು ಜತೆಗಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಿರುವ ಪಕ್ಷದ ಕಾರ್ಯಕರ್ತರು ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ನಗರದ ವಿವಿಧ ಕಡೆಗಳಿಂದ ಕಾಂಗ್ರೆಸ್‌ ಶಾಸಕರು ಏಕಕಾಲಕ್ಕೆ ಎತ್ತಿನ ಬಂಡಿಗಳಲ್ಲಿ ವಿಧಾನಸೌಧದತ್ತ ಹೊರಟಿದ್ದು, ಕೆಲವೇ ಹೊತ್ತಿನಲ್ಲಿ ಹತ್ತಾರು ಎತ್ತಿನ ಬಂಡಿಗಳು ರಾಜ್ಯದ ಆಡಳಿತ ಕೇಂದ್ರ ತಲುಪಲಿವೆ.

ಸದಾಶಿವನಗರದ ತಮ್ಮ ನಿವಾಸದಿಂದ ಎತ್ತಿನ ಬಂಡಿಯಲ್ಲಿ ಹೊರಡುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್‌, ʼಬಿಜೆಪಿ ಸರ್ಕಾರ ದೇಶದ ಜನರ ಜೇಬಿಗೆ ಕೈಹಾಕಿ ದೋಚುತ್ತಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪ್ರತಿ ಲೀಟರ್‌ಗೆ ₹ 25 ಕಡಿಮೆ ಮಾಡಬೇಕು. ಎಲ್‌ಪಿಜಿ ಸಿಲಿಂಡರ್‌ ದರವನ್ನೂ ಕಡಿತ ಮಾಡಬೇಕುʼ ಎಂದು ಆಗ್ರಹಿಸಿದರು.

ʼವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಾಮಾನ್ಯ ಜನರ ಸಂಕಷ್ಟವನ್ನು ಸರ್ಕಾರ ಅರಿಯಬೇಕು. ಇದಕ್ಕಾಗಿ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದೇವೆʼ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT