ಬುಧವಾರ, ಸೆಪ್ಟೆಂಬರ್ 30, 2020
21 °C
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

‘ರಾಮಲಲ್ಲಾ ದರ್ಶನ ಭಾಗ್ಯ ಸಿಕ್ಕಿತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರು ಉತ್ತರ‍ಪ್ರದೇಶದ ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾ ಮೂರ್ತಿಯ ದರ್ಶನ ಪಡೆದರು

ಚಿತ್ರದುರ್ಗ: ‘ವಿವಾದದ ಕೇಂದ್ರ ಬಿಂದುವಾಗಿ ಪಂಜರದೊಳಗೆ ಸಿಲುಕಿದ್ದ ರಾಮದೇಗುಲದ ರಾಮಲಲ್ಲಾ ಮೂರ್ತಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಅಯೋಧ್ಯೆಯ ಮೊದಲ ಭೇಟಿಯಲ್ಲೇ ರಾಮಲಲ್ಲಾ ದರ್ಶನ ಭಾಗ್ಯ ಸಿಕ್ಕಿದ್ದು ಧನ್ಯತೆ ಮೂಡಿಸಿದೆ...’

ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಪಾಲ್ಗೊಂಡ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಂಭ್ರಮವನ್ನು ಹಂಚಿಕೊಂಡ ಬಗೆ ಇದು. ಆಯ್ದ 175 ಗಣ್ಯರಲ್ಲಿ ಕರ್ನಾಟಕದ ಮಠಾಧೀಶರ ಪೈಕಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಮಾತ್ರ ಪಾಲ್ಗೊಂಡಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾಗೆ ಭೇಟಿ ನೀಡಿ ದರ್ಶನ ಭಾಗ್ಯ ಕಲ್ಪಿಸಿದರು. ಸಾಧು–ಸಂತರೊಂದಿಗೆ ರಾಮನ ದರ್ಶನ ಪಡೆದು ಪುಳಕಿತನಾದೆ. ರಾಮಲಲ್ಲಾ ಸಣ್ಣದೊಂದು ಮೂರ್ತಿಯಂತೆ ಕಾಣಬಹುದು. ಆದರೆ, ಅದರ ಮಹತ್ವ ಇಲ್ಲಿಯ ಭಕ್ತರಿಗೆ ಮಾತ್ರ ಗೊತ್ತಾಗುವುದು’ ಎಂದು ಹೇಳಿದರು.

‘ರಾಮಮಂದಿರದ ಭೂಮಿಪೂಜೆಗೆ ಇಡೀ ಅಯೋಧ್ಯೆ ವೈಭವೋಪೇತವಾಗಿ ಸಿಂಗಾರಗೊಂಡಿತ್ತು. ಪ್ರತಿ ಬೀದಿಯಲ್ಲಿ ಸಂಭ್ರಮ ಮೇಳೈಸಿತ್ತು. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹಲವರು ಕಾತರದಿಂದ ಕಾಯುತ್ತಿದ್ದರು. ಅರೆ ಸೇನಾ ಪಡೆಯ ಯೋಧರು ಹಾಗೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು’ ಎಂದರು.

‘ಕೊರೊನಾ ಸಂಕಷ್ಟ ಎದುರಾಗದಿದ್ದರೆ ಈ ಸಂಭ್ರಮದಲ್ಲಿ ಇಡೀ ದೇಶ ಪಾಲ್ಗೊಳ್ಳುತ್ತಿತ್ತು. ಮೂರು ವರ್ಷಗಳ ಬಳಿಕ ನಡೆಯವ ಲೋಕಾರ್ಪಣೆ ಸಮಾರಂಭಕ್ಕೆ ಕೋಟ್ಯಂತರ ಭಕ್ತರು ಸಾಕ್ಷಿಯಾಗುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು