ಬುಧವಾರ, ಮಾರ್ಚ್ 29, 2023
25 °C
ಅಲ್ಪಸಂಖ್ಯಾತರ ಕಡೆಗಣನೆ ಆರೋಪ ಪೂರ್ವನಿಯೋಜಿತ ಕುತಂತ್ರ: ಜೋಶಿ

ಸಾಹಿತ್ಯ ಸಮ್ಮೇಳನ: 13 ಮುಸ್ಲಿಮರಿಗೆ ಅವಕಾಶ- ಮಹೇಶ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದ 13 ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಹಿಂದಿನ 7 ಸಮ್ಮೇಳನಗಳಿಗಿಂತ ಈ ಬಾರಿಗೆ ಅತಿ ಹೆಚ್ಚು ಪ್ರಾಧಾನ್ಯ ನೀಡಿದ್ದೇವೆ. ಮುಸ್ಲಿಂ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಪೂರ್ವನಿಯೋಜಿತ ಕುತಂತ್ರ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಪ್ರತಿಕ್ರಿಯಿಸಿದರು. 

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಭಗಳಲ್ಲಿ ಒಬ್ಬರಾದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಭಾವಚಿತ್ರ ಪ್ರಕಟಿಸಿದ್ದೇವೆ. ಪ್ರಧಾನ ವೇದಿಕೆಗೆ ಶಿಶುನಾಳ ಷರೀಫರ ಹೆಸರಿಟ್ಟಿದ್ದೇವೆ. ‘ಕನ್ನಡ ರಥ’ ತಯಾರಿಸಿದವರು ಷಹಜಹಾನ್‌ ಮುದಕವಿ ಮತ್ತು ರಾಜ್ಯದಾದ್ಯಂತ ರಥವನ್ನು ಮುನ್ನಡೆಸುತ್ತಿರುವವರು ನಬಿಸಾಬ್‌ ಕುಷ್ಟಗಿ. ಇವರೆಲ್ಲ ಮುಸ್ಲಿಮರಲ್ಲವೇ?’ ಎಂದು ಪ್ರಶ್ನಿಸಿದರು. 

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಲೀಂ ಅಹಮದ್‌, ಕವಿಗೋಷ್ಠಿ ನಿರ್ವಹಣೆಗೆ ಮೆಹಬೂಬ್‌ ಹುಸೇನ್‌, ಸ್ಪರ್ಧಾತ್ಮಕ ಪರೀಕ್ಷೆಯ ಗೋಷ್ಠಿಯಲ್ಲಿ ಮಹಮ್ಮದ್‌ ರಫಿ ಪಾಶಾ ಇದ್ದಾರೆ. ನಿರ್ವಹಣೆ, ನಿರೂಪಣೆ, ಸ್ವಾಗತ, ವಂದನಾರ್ಪಣೆಗಳಲ್ಲಿ ಮಹೆಬೂಬ್‌ ಹುಸೇನ್‌, ಹಾಸಿಂಪೀರ್‌ ವಾಲೀಕಾರ್‌, ರಂಜಾನ್‌ ಕಿಲ್ಲೇದಾರ, ನಬೀಸಾಬ್‌ ಕುಷ್ಟಗಿ, ಎಂ.ಖಾಸಿಂ ಮುಂತಾದವರು ಇದ್ದಾರೆ ಎಂದರು.

ಪೂರ್ವಗ್ರಹ ಪೀಡಿತರು: ‘ಪುರುಷೋತ್ತಮ ಬಿಳಿಮಲೆ, ಬಿ.ಎಂ.ಹನೀಫ್‌, ಆರ್‌.ಜಿ.ಹಳ್ಳಿ ನಾಗರಾಜ್‌ ‘ಜನಸಾಹಿತ್ಯ ಸಮ್ಮೇಳನ’ದ ಮುಂದಾಳತ್ವ ವಹಿಸಿದ್ದಾರೆ. ಪೂರ್ವಗ್ರಹ ಪೀಡಿತರಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಮನೋರೋಗದಿಂದ ನರಳುತ್ತಿರುವ ಪ್ರಗತಿಪರ ಚಿಂತಕರು ಅದರಿಂದ ಹೊರಬರಬೇಕು’ ಎಂದರು.

‘ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂಬ ಕಪೋಲಕಲ್ಪಿತ ಸಂಗತಿ ಹರಡಿ, ಸಮಾಜದಲ್ಲಿ ದ್ವೇಷ ಹುಟ್ಟಿಸುವ ಕೃತ್ಯ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನ ಜಾತಿ ಮತ್ತು ಧರ್ಮಗಳನ್ನು ಮೀರಿದೆ, ಕನ್ನಡವೇ ಇಲ್ಲಿ ಮಾನದಂಡ’ ಎಂದರು. 

‘ನಾನು ಗುರುಗೋವಿಂದ ಭಟ್ಟರ ಮರಿಮೊಮ್ಮಗ. ನನಗಿಂತ ಜಾತ್ಯತೀತ ವ್ಯಕ್ತಿ ಬೇಕಾ? ಕನ್ನಡದ ಅಸ್ಮಿತೆಯನ್ನು ಧ್ವಂಸ ಮಾಡುವವರನ್ನು ಕನ್ನಡಿಗರು ದೂರವಿಡಬೇಕು’ ಎಂದು ಜೋಶಿ ಮನವಿ ಮಾಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು