ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಲೆ ಮಹದೇಶ್ವರ ಹುಲಿ ರಕ್ಷಿತಾರಣ್ಯಕ್ಕೆ ಹೆಚ್ಚಿದ ಕೂಗು

ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮೀಸಲು ಅರಣ್ಯವನ್ನು ರಕ್ಷಿತಾರಣ್ಯವೆಂದು ಘೋಷಿಸಿದ ತಮಿಳುನಾಡು
Last Updated 10 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಗಡಿ ಭಾಗದಲ್ಲಿರುವ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಿಗೆ ಹೊಂದಿಕೊಂಡಿರುವ ತಮಿಳುನಾಡಿನ ಮೀಸಲು ಅರಣ್ಯ ಪ್ರದೇಶವನ್ನು ಅಲ್ಲಿನ ಸರ್ಕಾರ ‘ಕಾವೇರಿ ದಕ್ಷಿಣ ವನ್ಯಧಾಮ’ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ, ಮಲೆ ಮಹದೇಶ್ವರ ವನ್ಯ‌ಧಾಮವನ್ನು ‘ಹುಲಿ ಸಂರಕ್ಷಿತ ಪ್ರದೇಶ’ ಎಂದು ಘೋಷಿಸಬೇಕೆಂಬ ಕೂಗು ಹೆಚ್ಚಿದೆ.

ಹುಲಿಗಳ ವಾಸಕ್ಕೆ ಪೂರಕ ವಾತಾವರಣ ಹೊಂದಿರುವ ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) 2020–21ರಲ್ಲೇ ಒಪ್ಪಿಗೆ ಸೂಚಿಸಿದೆ. ಘೋಷಣೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಹಿ ಹಾಕುವುದಷ್ಟೇ ಬಾಕಿ ಇದೆ. ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿರೋಧಿಸುತ್ತಿದ್ದಾರೆ. ವನ್ಯಧಾಮ ವ್ಯಾಪ್ತಿಯಲ್ಲಿರುವ ಬುಡಕಟ್ಟು ಸಮುದಾಯವೂ ಈ ಯೋಜನೆಯನ್ನು ವಿರೋಧಿಸುತ್ತಿದೆ. ಹೀಗಾಗಿ, ಘೋಷಣೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಘೋಷಣೆ ವಿಳಂಬವಾಗುತ್ತಿರುವುದರ ಬಗ್ಗೆ, ಕಳೆದ ವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಮಂಡಳಿ ಸದಸ್ಯ, ಜಿಲ್ಲೆಯವರೇ ಆದ ಜಿ.ಮಲ್ಲೇಶಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರು ಪ್ರಸ್ತಾಪಿಸಿದ್ದಾರೆ.

‘ಕಡತ ಮುಖ್ಯಮಂತ್ರಿ ಬಳಿ ಇದೆ. ಶೀಘ್ರವಾಗಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವಂತೆ ಅವರನ್ನು ಒತ್ತಾಯಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯೋಜನೆಯಿಂದ ಅರಣ್ಯ ವಾಸಿಗಳಿಗೆ, ಆ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗಬಹುದು ಎಂಬ ಅಭಿಪ್ರಾಯ ಸಚಿವ ವಿ.ಸೋಮಣ್ಣ ಅವರದ್ದು. ಅವರೊಂದಿಗೆ ಚರ್ಚಿಸಿ ಮನವರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ’ ಎಂದು ಮಲ್ಲೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳ 906 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ಮಲೆ ಮಹದೇಶ್ವರ ವನ್ಯಧಾಮವನ್ನುಹುಲಿ ಸಂರಕ್ಷಿತಪ್ರದೇಶವನ್ನಾಗಿ ಘೋಷಿಸಬೇಕು ಎಂಬ ಪ್ರಸ್ತಾವವನ್ನು 2017–18ರಲ್ಲಿ ಅರಣ್ಯ ಇಲಾಖೆ ಎನ್‌ಟಿಸಿಎಗೆ ಕಳುಹಿಸಿತ್ತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವನ್ಯಜೀವಿ ಮಂಡಳಿ ಸಭೆಯೂ ಇದನ್ನು ಅನುಮೋದಿಸಿತ್ತು.

ಸಚಿವರ ವಿರೋಧ:ಆಗಸ್ಟ್‌ನಲ್ಲಿ ಹನೂರು ತಾಲ್ಲೂಕಿನ ಪೊನ್ನಾಚಿಯಲ್ಲಿ ನಡೆದ ಸಮಾರಂಭದಲ್ಲಿ ಸಚಿವ ವಿ.ಸೋಮಣ್ಣ ಮಾತನಾಡುತ್ತಾ, ‘ಹುಲಿಸಂರಕ್ಷಿತಪ್ರದೇಶವಾಗಿ ಘೋಷಿಸಿದರೆ ಈ ಭಾಗದ ಜನರಿಗೆ ತೀವ್ರ ತೊಂದರೆ ಆಗುತ್ತದೆ. ಹಾಗಾಗಿ, ತಡೆ ಹಿಡಿಯಲಾಗಿದೆ’ ಎಂದಿದ್ದರು.

20ಕ್ಕೂ ಹೆಚ್ಚು ಹುಲಿಗಳು
ವನ್ಯಧಾಮವು ತಮಿಳುನಾಡಿನ ಸತ್ಯಮಂಗಲ, ಜಿಲ್ಲೆಯ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ತಮಿಳುನಾಡಿನ ಬರಗೂರು ಮೀಸಲು ಅರಣ್ಯದೊಂದಿಗೆ ಚಾಚಿಕೊಂಡಿದೆ.

‘ಮೀಸಲು ಅರಣ್ಯವನ್ನು ವನ್ಯಧಾಮವೆಂದು ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಈ ಕಾಡಿನಲ್ಲಿ ಐದರಿಂದ ಆರು ಹುಲಿಗಳಿರಬಹುದು ಎಂದು ಅಂದಾಜಿಸಲಾಗಿತ್ತು. 2018ರಲ್ಲಿ ನಡೆದ ಹುಲಿ ಗಣತಿ ಸಂದರ್ಭದಲ್ಲಿ 12 ಹುಲಿಗಳಿರುವುದು ಖಚಿತವಾಗಿತ್ತು. ಈ ಬಾರಿಯೂ ಗಣತಿ ನಡೆಸಲಾಗಿದ್ದು, ವರದಿ ಪ್ರಕಟವಾಗಿಲ್ಲ. 20ಕ್ಕೂ ಹೆಚ್ಚು ಹುಲಿಗಳಿರಬಹುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

*

ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದರೆ ಅರಣ್ಯ ಸಂರಕ್ಷಣೆಗೆ ಅನುಕೂಲವಾಗಲಿದೆ. ಸರ್ಕಾರ ಆದಷ್ಟು ಬೇಗ ಘೋಷಿಸಬೇಕು
–ಜಿ.ಮಲ್ಲೇಶಪ್ಪ, ವನ್ಯಜೀವಿ ಮಂಡಳಿ ಸದಸ್ಯ

*
ಜೀವನಕ್ಕೆ ಕಾಡನ್ನೇ ನಂಬಿರುವ ಜನರಿಗೆ ತೊಂದರೆಯಾಗುವುದಿಲ್ಲ ಎಂದು ಖಾತರಿ ನೀಡಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದರೆ ನಮ್ಮ ಆಕ್ಷೇಪ ಇಲ್ಲ.
–ಶಾಂತ ಮಲ್ಲಿಕಾರ್ಜುನ ಸ್ವಾಮಿ, ಸಾಲೂರು ಮಠ, ಮಹದೇಶ್ವರ ಬೆಟ್ಟ

*
ಮಲೆ ಮಹದೇಶ್ವರ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶ ಆಗುವುದರಿಂದ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ
–ಸಂತೋಷ್ ಕುಮಾರ್, ಡಿಸಿಎಫ್, ಮಲೆ ಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT