ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ದಶಕಗಳ ರಾಜಕೀಯ ಅನುಭವ: ಸಾಮರ್ಥ್ಯ, ಪಕ್ಷ ನಿಷ್ಠೆಗೆ ಹುಡುಕಿ ಬಂತು ಹುದ್ದೆ

ಉತ್ತಮ ಸಂಸದೀಯ ಪಟು ಮಲ್ಲಿಕಾರ್ಜುನ ಖರ್ಗೆ
Last Updated 13 ಫೆಬ್ರುವರಿ 2021, 1:50 IST
ಅಕ್ಷರ ಗಾತ್ರ

ಕಲಬುರ್ಗಿ: ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿನ ಅವಧಿಯಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕರಾಗಿದ್ದರು. ಆದರೆ, ಅಗತ್ಯ ಸಂಖ್ಯಾಬಲ ಇಲ್ಲ ಎಂಬ ಕಾರಣಕ್ಕೆ ‘ವಿರೋಧ ಪಕ್ಷದ ನಾಯಕ’ನ ಅಧಿಕೃತ ಸ್ಥಾನಮಾನ ಸಿಕ್ಕಿರಲಿಲ್ಲ. ಈಗ ರಾಜ್ಯಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ತಾನಾಗಿಯೇ ಒಲಿದು ಬರುತ್ತಿದೆ.

ಪಕ್ಷ ನಿಷ್ಠೆ ಹಾಗೂ ಕಳಂಕರಹಿತ ರಾಜಕೀಯ ಅನುಭವ ಅವರನ್ನು ಈ ಸ್ಥಾನದವರೆಗೆ ತಲುಪಿಸುತ್ತಿದೆ.

ಹಠ ಹಿಡಿದು, ಲಾಬಿ ಮಾಡಿ ಸ್ಥಾನಮಾನ ಗಿಟ್ಟಿಸಿಕೊಳ್ಳುವ ಜಾಯಮಾನ ಖರ್ಗೆ ಅವರದ್ದಲ್ಲ. ಆದರೆ, ತಮಗೆ ವಹಿಸುವ ಜವಾಬ್ದಾರಿಯನ್ನು ನಿಷ್ಠೆ ಮತ್ತು ನಿಷ್ಠುರತೆಯಿಂದ ಸಮರ್ಥವಾಗಿ ನಿಭಾಯಿಸುವ ಅವರ ಕಾರ್ಯಶೈಲಿಗೆ ವಿರೋಧ ಪಕ್ಷದವರೂ ತಲೆದೂಗದೇ ಇರುವುದಿಲ್ಲ.

ಖರ್ಗೆ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮಹಾರಾಷ್ಟ್ರದ ಉಸ್ತುವಾರಿಯನ್ನೂ ಹೊತ್ತಿದ್ದರು. ಅಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆಲ ತಿಂಗಳ ಹಿಂದೆ ನಡೆದ ಎಐಸಿಸಿ ಪುನರ್‌ರಚನೆ ವೇಳೆ ಇವರನ್ನು ಈ ಎಲ್ಲ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿತ್ತು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲಿಕ್ಕಾಗಿಯೇ ಕಾಂಗ್ರೆಸ್‌ ಹೈಕಮಾಂಡ್‌ ಈ ನಿರ್ಧಾರ ಕೈಗೊಂಡಿತ್ತು.

ಐದು ದಶಕಗಳ ರಾಜಕೀಯ ಅನುಭವ ಹೊಂದಿರುವ ಉತ್ತಮ ಸಂಸದೀಯ ಪಟು ಇವರು. ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ ಭಾಷೆಗಳನ್ನು ಲೀಲಾಜಾಲವಾಗಿ ಮಾತನಾಡುತ್ತಾರೆ.ಕಳೆದ ಲೋಕಸಭೆಯಲ್ಲಿ 44 ಜನ ಪಕ್ಷದ ಸಂಸದರನ್ನು ಕಟ್ಟಿಕೊಂಡು ಆಡಳಿತ ಪಕ್ಷದ ವಿರುದ್ಧ ನಡೆಸಿದ ಹೋರಾಟವನ್ನು ಎಲ್ಲರೂ ಸ್ಮರಿಸುತ್ತಾರೆ. ಪ್ರಧಾನಿ ಮೋದಿ ಅವರಿಗೆ ಎದುರೇಟು ನೀಡುತ್ತ, ಪಕ್ಷ ಮತ್ತು ಪಕ್ಷದ ನಾಯಕರನ್ನು ಸದಾಕಾಲ ಸಮರ್ಥಿಸುವ ಇವರ ಗಟ್ಟಿತನ ಕಂಡು ಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬೆರಗಾಗಿದ್ದು ಉಂಟು.

‘ನರೇಂದ್ರ ಮೋದಿ ಅವರನ್ನು ಎದುರಿಸಬಲ್ಲ ಏಕೈಕ ನಾಯಕ’ ಎಂದೇ ಖರ್ಗೆ ಅವರನ್ನು ವಿರೋಧ ಪಕ್ಷದವರೂ ಕರೆಯುತ್ತಿದ್ದರು. ‘ನೀವು ಮುಂದಿನ ಬಾರಿ ಲೋಕಸಭೆ ಪ್ರವೇಶಿಸುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿಯೇ ಖರ್ಗೆ ಅವರಿಗೆ ಹೇಳಿದ್ದರು.ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮಿತ್ರಪಕ್ಷಗಳು ಅಧಿಕಾರಕ್ಕೆ ಬಂದರೆ ಖರ್ಗೆ ಅವರೇ ಪ್ರಧಾನಿಯಾಗಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ಅಧಿಕಾರಕ್ಕೆ ಬರುವುದು ಹೋಗಲಿ, ಸ್ವತಃ ಖರ್ಗೆ ಅವರು ಸ್ವಕ್ಷೇತ್ರದಲ್ಲಿ ಸೋಲು ಅನುಭವಿಸಬೇಕಾಯಿತು. ಪ್ರಧಾನಿ ಮೋದಿ ಮಾತು ನಿಜವಾಯಿತು.

ಸತತ 11 ಚುನಾವಣೆಗಳಲ್ಲಿ ಗೆದ್ದು, ಸೋಲಿಲ್ಲದ ಸರದಾರ ಎಂದೇ ಕರೆಯಿಸಿಕೊಳ್ಳುತ್ತಿದ್ದ ಖರ್ಗೆ ಅವರು, ಈ ಸೋಲಿನಿಂದ ತೀವ್ರ ನೊಂದುಕೊಂಡಿದ್ದರು. ಕಲಬುರ್ಗಿಯಿಂದ ದೂರವೇ ಉಳಿದಿದ್ದಾರೆ. ರಾಜ್ಯಸಭಾ ಸದಸ್ಯರಾದರೂ ಕಲಬುರ್ಗಿಗೆ ಬಂದಿಲ್ಲ. ಅದಕ್ಕೆ ಕೊರೊನಾ ಕಾರಣ ಹಾವಳಿಯ ನೀಡಲಾಗುತ್ತಿದೆಯಾದರೂ,‘ಸಂಪುಟ ದರ್ಜೆ ಸ್ಥಾನಮಾನ ಪಡೆದೇ ಕಲಬುರ್ಗಿಗೆ ಬರುತ್ತಾರೆ’ ಎಂದೇ ಅವರ ಆತ್ಮೀಯರು ಖಾಸಗಿಯಾಗಿ ಹೇಳುತ್ತಿದ್ದಾರೆ.ಅದು ಈಗ ನಿಜವಾಗುತ್ತಿದೆ.

ಮೂರು ಮನೆ: 1972ರಿಂದ 2009ರ ವರೆಗೆ ಸತತ ಒಂಬತ್ತು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆರಂಭದಲ್ಲಿ ಗುರುಮಠಕಲ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಇವರು, ಕ್ಷೇತ್ರ ಪುನರ್‌ ವಿಂಗಡಣೆಯ ನಂತರ ಚಿತ್ತಾಪುರ ಮೀಸಲು ಕ್ಷೇತ್ರಕ್ಕೆ ವಲಸೆ ಬಂದರು. ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿದ ನಂತರ, ಅವರಿಗಾಗಿ ತಮ್ಮ ‘ಸ್ಥಾನ ತ್ಯಾಗ ಮಾಡಿ’ ಹೈಕಮಾಂಡ್‌ ಆಣತಿಯಂತೆ 2009ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. ಕೇಂದ್ರದಲ್ಲಿ ಕಾರ್ಮಿಕ, ನಂತರ ರೈಲ್ವೆ ಖಾತೆ ಸಚಿವರಾದರು. ಲೋಕಸಭೆಗೆ ಮರು ಆಯ್ಕೆಯಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದರು. ವಿಧಾನಸಭೆ, ಲೋಕಸಭೆಯಲ್ಲಿ ಕೆಲಸ ಮಾಡಿರುವ ಖರ್ಗೆ, ಈಗ ರಾಜ್ಯಸಭೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT