ಮಂಗಳವಾರ, ಏಪ್ರಿಲ್ 20, 2021
31 °C
ದೂರು ಬಂದರಷ್ಟೇ ಪರಿಶೀಲಿಸುವ ಪೊಲೀಸರು

ಗಣಿ ಸ್ಫೋಟಕಗಳ ನಿರ್ವಹಣೆ: ನಿರ್ದಿಷ್ಟ ನಿಯಮಗಳೇ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಣಿಗಾರಿಕೆ ಉದ್ದೇಶಕ್ಕಾಗಿ ಬಳಸುವ ಸ್ಫೋಟಕಗಳ ಸಾಗಣೆ, ಸಂಗ್ರಹ ಮತ್ತು ಬಳಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಾವಳಿಗಳೇ ಇಲ್ಲ. ಹೀಗಾಗಿ, ಸ್ಫೋಟ, ಪ್ರಾಣಹಾನಿಯಂತಹ ಘಟನೆಗಳು ಮರುಕಳಿಸುತ್ತಿವೆಯೇ ಎಂಬ ಚರ್ಚೆ ಅಧಿಕಾರಿಗಳ ವಲಯದಲ್ಲಿ ಶುರುವಾಗಿದೆ.

ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜಿಲೆಟಿನ್‌ ತುಂಬಿದ ವಾಹನಗಳ ಸ್ಫೋಟದಿಂದ ತಲೆಬಿಸಿ
ಮಾಡಿಕೊಂಡಿರುವ ಸರ್ಕಾರ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಲು ಮುಂದಾಗಿದೆ.

ಈಗ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಗಣಿಗಾರಿಕೆ ಪರವಾನಗಿ ನೀಡುವ ಅಧಿಕಾರ ಹೊಂದಿದೆ. ಸ್ಫೋಟ
ಕಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕಾರ ಹೊಂದಿಲ್ಲ. ಸ್ಫೋಟಕಗಳ ಸಾಗಣೆ, ಸಂಗ್ರಹ ಮತ್ತು ಬಳಕೆ ವಿಚಾರ
ಗಳ ಅಧಿಕಾರವನ್ನು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್‌ ಇಲಾಖೆಗೆ ನೀಡಲಾಗಿದೆ. ಆದರೆ, ಜಿಲ್ಲಾಧಿಕಾರಿಗಳಾಗಲಿ, ಪೊಲೀಸ್‌ ಇಲಾಖೆಯಾಗಲಿ ಸ್ಫೋಟದಂತಹ ದುರಂತ ಸಂಭವಿಸಿದಾಗ ಮಾತ್ರ ಗಣಿ ಸ್ಫೋಟಕಗಳಿಗೆ ಸಂಬಂಧಿಸಿದಂತೆ ತಮ್ಮ ಜವಾಬ್ದಾರಿ ನೆನಪಿಸಿಕೊಳ್ಳುತ್ತವೆ. ಉಳಿದಂತೆ ಅತ್ತ ಗಮನ ಹರಿಸುವುದೇ ಇಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಗಳು ತಿಳಿಸಿವೆ.

ಸ್ಫೋಟಕಗಳ ತಯಾರಿಕೆ, ಸಾಗಣೆ, ಸಂಗ್ರಹ ಮತ್ತು ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ 2008 ರ ಸ್ಫೋಟಕ ನಿಯಮಾವಳಿಯಲ್ಲಿ (ಎಕ್ಸ್‌ಪ್ಲೋಸಿವ್‌ ರೂಲ್ಸ್‌,2008) ಬಹುತೇಕ ಪಟಾಕಿ ಮತ್ತು ಇತರ ಮದ್ದು ಗುಂಡುಗಳ ಸ್ಫೋಟಕಗಳಿಗೆ ಸಂಬಂಧಿಸಿದ ನಿಯಮಗಳೇ ಹೆಚ್ಚಿವೆ. ತಮಿಳುನಾಡು ಮತ್ತು ಇತರ ಕಡೆಗಳಲ್ಲಿ ಪಟಾಕಿ ಕಾರ್ಖಾನೆಗಳಿಗೆ ಬೆಂಕಿ ಬಿದ್ದು ದೊಡ್ಡ ಅನಾಹುತ ಸಂಭವಿಸಿದ್ದರಿಂದಾಗಿ ಅಲ್ಲಿನ ನಿಯಮಾವಳಿಯಲ್ಲಿ ಸ್ಫೋಟಕ ಬಳಕೆಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ.

ಕೇಂದ್ರದ ನಿಯಮಾವಳಿಯಲ್ಲಿ ಗಣಿಗಾರಿಕೆಗೆ ಬಳಸುವ ಸ್ಫೋಟಕಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಹೀಗಾಗಿ ಪಟಾಕಿ ಮತ್ತು ಇತರ ಸ್ಫೋಟಕಗಳ ತಯಾರಿಕೆ, ಸಾಗಣೆ ಮತ್ತು ಸಂಗ್ರಹಣೆಯ ನಿಯಮಗಳನ್ನೇ ಗಣಿ
ಗಾರಿಕೆ ಸ್ಫೋಟಕಗಳ ವಿಚಾರದಲ್ಲೂ ಅನುಸರಿಸಲಾಗುತ್ತಿದೆ ಎಂದು ಗಣಿ ಇಲಾಖೆಯ ಮೂಲಗಳು ತಿಳಿಸಿವೆ.

ಸಾಗಣೆಗೆ ಅನುಸರಿಸಬೇಕಾದ ನಿಯಮಗಳು

*ಸ್ಫೋಟಕಗಳ ಸಾಗಣೆಗೆಂದೇ ವಾಹನಗಳಿಗೆ ಪರವಾನಗಿ ಪಡೆಯಬೇಕು

*ಸ್ಫೋಟಕ ತುಂಬಿದ ವಾಹನಗಳನ್ನು ಜನವಸತಿ ಪ್ರದೇಶಗಳಲ್ಲಿ ಒಯ್ಯುವುದನ್ನು ನಿಷೇಧಿಸಲಾಗಿದೆ.

*ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಅವಧಿಯಲ್ಲಿ ಸ್ಫೋಟಕ ತುಂಬಿದ ವಾಹನಗಳನ್ನು ಒಯ್ಯುವಂತಿಲ್ಲ

*ಸಾಗಣೆ ಸಂದರ್ಭದಲ್ಲಿ ವಾಹನದಲ್ಲಿ ಅಂಗ ರಕ್ಷಕರಿರಬೇಕು ಮತ್ತು ವಾಹನದ ಎರಡು ತುದಿಗಳಲ್ಲಿ ಕೆಂಪು ಬಾವುಟಗಳನ್ನು ಹಾಕಿರಬೇಕು

*ಪರವಾನಗಿಯಲ್ಲಿ ಸೂಚಿಸಿರುವ ಮಿತಿಗಿಂತ ಹೆಚ್ಚು ಸ್ಫೋಟಕಗಳನ್ನು ಸಂಗ್ರಹಿಸಿಡಬಾರದು

* ರಾಜ್ಯದಲ್ಲಿ 2,493 ಕಟ್ಟಡ ಕಲ್ಲು ಗಣಿ ಗುತ್ತಿಗೆ ಮಂಜೂರು ಮಾಡಿದ್ದು, ಈ ಪೈಕಿ 1,861 ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಸ್ಫೋಟಕ ಬಳಸಿ ಗಣಿಗಾರಿಕೆ ನಡೆಸಲು ಮತ್ತು 477 ಸ್ಫೋಟಕ ರಹಿತವಾಗಿ ಗಣಿಗಾರಿಕೆ ನಡೆಸಲು ಗಣಿ ಇಲಾಖೆ ಅನುಮತಿ ನೀಡಿದೆ

*344 ಕಲ್ಲು ಗಣಿ ಗುತ್ತಿಗೆದಾರರು ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಸ್ಫೋಟಕ ಬಳಕೆ ಮಾಡಲು ಲೈಸೆನ್ಸ್‌ ಹೊಂದಿದ್ದಾರೆ. 1,059 ಜನರು ಸ್ಫೋಟಕ ಬಳಸಲು ಲೈಸೆನ್ಸ್‌ ಹೊಂದಿರುವ ವ್ಯಕ್ತಿಗಳ ಜತೆ ಒಡಂಬಡಿಕೆ ಮಾಡಿ, ಸ್ಫೋಟ ಕಾರ್ಯ ನಡೆಸುತ್ತಿದ್ದಾರೆ

ಇಬ್ಬರು ಅಧಿಕಾರಿಗಳ ಅಮಾನತು

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿಯಲ್ಲಿ ಸಂಭವಿಸಿದ ಜಿಲೆಟಿನ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಬುಧವಾರ ಅಮಾನತು ಮಾಡಲಾಗಿದೆ.

ಗುಡಿಬಂಡೆ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಹಾಗೂ ಗ್ರಾಮೀಣ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗೋಪಾಲ ರೆಡ್ಡಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್ ಅಮಾನತುಗೊಳಿಸಿದ್ದಾರೆ.

ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಸ್ಫೋಟಕಗಳ ದಾಸ್ತಾನು ಕುರಿತು ಫೆ.7 ರಂದು ಭ್ರಮರವಾಸಿನಿ ಕ್ರಷರ್‌ ಮೇಲೆ ದಾಳಿ ನಡೆಸಿ ಮಾಲೀಕರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಆದರೂ, ಆರೋಪಿಗಳನ್ನು ಬಂಧಿಸದ ಕಾರಣ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ ಎಂದು ಎಸ್.ಪಿ ತಿಳಿಸಿದ್ದಾರೆ.

ಐವರು ಆರೋಪಿಗಳ ಬಂಧನ:  ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗೋರಂಟ್ಲದಲ್ಲಿ ತಲೆಮೆರೆಸಿಕೊಂಡಿದ್ದ ಎರಡನೇ ಆರೋಪಿ, ಗಣಿಯ ಸಹ ಮಾಲೀಕ ರಾಘವೇಂದ್ರ ರೆಡ್ಡಿ, ನಾಲ್ಕನೇ ಆರೋಪಿ ವೆಂಕಟಶಿವಾ ರೆಡ್ಡಿ, ಐದನೇ ಆರೋಪಿ ಪ್ರವೀಣ್, ಏಳನೇ ಆರೋಪಿ ಚಾಲಕ ರಿಯಾಜ್ ಮತ್ತು ಹದಿನಾಲ್ಕನೇ ಆರೋಪಿ ಮಧುಸೂದನ್ ರೆಡ್ಡಿ ಬಂಧಿತರು. ಇದೇ ಕ್ರಷರ್‌ನ ಇನ್ನೊಬ್ಬ ಮಾಲೀಕ ದೇವನಹಳ್ಳಿಯ ಇಮ್ತಿಯಾಜ್‌ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದಾರೆ.

ಸ್ಫೋಟದಲ್ಲಿ ಮೃತಪಟ್ಟ ಆರು ಮಂದಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಒಟ್ಟು 15 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ, ಬಿಜೆಪಿ ಮುಖಂಡ ಹಾಗೂ ಕ್ರಷರ್‌ ಮಾಲೀಕ ಜಿ.ಎಸ್‌.ನಾಗರಾಜ ರೆಡ್ಡಿ ಸೇರಿದಂತೆ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

ಪ್ರಕರಣದ ತನಿಖೆ ಮತ್ತು ಆರೋಪಿಗಳ ಬಂಧನಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಬಹು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಸಿಐಡಿ ತಂಡ ಕೂಡ ತನಿಖೆ ಮುಂದುವರಿಸಲಿದೆ ಎಂದು ಎಸ್ಪಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು