ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಜೆಟೆಡ್‌ ಪ್ರೊಬೇಷನರ್ ನೇಮಕಾತಿಯ ತೊಡಕುಗಳ ಶೀಘ್ರ ನಿವಾರಣೆ: ಮಾಧುಸ್ವಾಮಿ

ಗೆಜೆಟೆಡ್‌ ಪ್ರೊಬೇಷನರ್ ನೇಮಕಾತಿ: ಕಾನೂನು ಸಚಿವ ಮಾಧುಸ್ವಾಮಿ ಭರವಸೆ
Last Updated 14 ಸೆಪ್ಟೆಂಬರ್ 2021, 19:44 IST
ಅಕ್ಷರ ಗಾತ್ರ

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ಭರ್ತಿಗೆ (2011 ರ ಬ್ಯಾಚ್‌) ಸಂಬಂಧಿಸಿದಂತೆ ಇರುವ ತೊಡಕುಗಳ ನಿವಾರಣೆಗೆ ಇನ್ನು 15– 20 ದಿನಗಳಲ್ಲಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಮಂಗಳವಾರ ತಿಳಿಸಿದರು.

ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಮಾಧುಸ್ವಾಮಿ, ‘ಕಳೆದ ಅಧಿವೇಶನದಲ್ಲಿ ಪಕ್ಷ ಬೇಧ ಮರೆತು ಎಲ್ಲ ಸದಸ್ಯರೂ 362 ಅಭ್ಯರ್ಥಿಗಳ ನೇಮಕ ಮಾಡಲು ಒತ್ತಾಯ ಮಾಡಿದ್ದರು. ಅದಕ್ಕೆ ಇರುವ ಎಲ್ಲ ತೊಡಕುಗಳ ನಿವಾರಿಸುವ ಕೆಲಸ ಮಾಡುತ್ತಿದ್ದೇವೆ. ಅದು ಸುಲಭವೂ ಅಲ್ಲ’ ಎಂದು ಹೇಳಿದರು.

ಸದನ ತೆಗೆದುಕೊಂಡ ನಿರ್ಣಯವನ್ನು ಸುಪ್ರೀಂಕೋರ್ಟ್‌ ಮಾನ್ಯ ಮಾಡುವುದಿಲ್ಲ. ಹೀಗಾಗಿ ಸೆಷನ್ಸ್‌ ನ್ಯಾಯಾಲಯದ ಹಂತದಲ್ಲಿ ಪ್ರಕರಣ ಕೈಬಿಡಲು ಕೋರಿಕೆ ಸಲ್ಲಿಸಬೇಕೇ ಅಥವಾ ಪುನರ್‌ಪರಿಶೀಲನೆ ಅರ್ಜಿ ಸಲ್ಲಿಸಬೇಕೇ ಎಂಬ ಚರ್ಚೆ ನಡೆದಿದೆ. ಎಚ್ಚರದಿಂದ ಹೆಜ್ಜೆ ಇಡಲು ತೀರ್ಮಾನಿಸಿದ್ದೇವೆ. ಕಾನೂನು ಪರಿಣಿತರ ಜತೆ ಈಗಾಗಲೇ ಮೂರು ಬಾರಿ ಸಭೆ ನಡೆಸಿದ್ದು, ಮುಂದೆಯೂ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು’ ಎಂದು ಮಾಧುಸ್ವಾಮಿ ತಿಳಿಸಿದರು.

ಎಂ.ಪಿ.ಕುಮಾರಸ್ವಾಮಿ, ‘ಆಯ್ಕೆಯಾದ ಅಭ್ಯರ್ಥಿಗಳ ವಯಸ್ಸು ಮೀರುತ್ತಿದೆ. ಸರ್ಕಾರ 362 ಮಂದಿಯ ಭವಿಷ್ಯವನ್ನು ಬೇಗ ನಿರ್ಧರಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ ಮಾತನಾಡಿ, ‘ಸಚಿವರ ಮಾತಿನಲ್ಲಿ ಅಸಹಾಯಕತೆ ಕಂಡು ಬರುತ್ತಿದೆ. ಕಳೆದ ಅಧಿವೇಶನದಲ್ಲಿ ನೀವು ನೀಡಿದ ಭರವಸೆ ಕೇಳಿ ಆದೇಶ ಬೇಗನೆ ಹೊರ ಬೀಳಬಹುದು ಎಂದು ಕಾಯುತ್ತಿದ್ದೆವು. ಆ ರೀತಿ ಆಗಲಿಲ್ಲ. ಕೆಪಿಎಸ್‌ಸಿ ಸದಸ್ಯರನ್ನು ಆರೋಪ ಮುಕ್ತ ಮಾಡಿದ್ದಿರಿ, ಇನ್ನು ನಿಮಗಿರುವ ಅಡ್ಡಿಗಳೇನು’ ಎಂದು ಪ್ರಶ್ನಿಸಿದರು.

‘ರೇವಣ್ಣನ ಸ್ಟೈಲ್‌ ಗೊತ್ತಿದೆ’

‘ಯಾವುದೇ ಸರ್ಕಾರ ಇದ್ದರೂ ಗದ್ದಲ ಎಬ್ಬಿಸಿ ಕೆಲಸ ಮಾಡಿಸಿಕೊಳ್ಳುವ ಸ್ಟೈಲ್‌ ಎಚ್‌.ಡಿ.ರೇವಣ್ಣ ಅವರಿಗೆ ಗೊತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.

ಹೊಳೆನರಸೀಪುರ ಪುರಸಭೆ ಕೈಗೊಂಡಿರುವ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ತಮ್ಮ ಎಂದಿನ ಶೈಲಿಯಲ್ಲಿ ವಿಷಯ ಪ್ರಸ್ತಾಪಿಸಿದ ರೇವಣ್ಣ, ‘ಸರ್ಕಾರ ರಾಜಕೀಯ ದ್ವೇಷ ಮಾಡುತ್ತಿದೆ. ಅದನ್ನು ಎದುರಿಸಲು ತಯಾರಿದ್ದೇನೆ’ ಎಂದು ಏರಿದ ಧ್ವನಿಯಲ್ಲಿ ಮಾತನಾಡಿದರು.

ರೇವಣ್ಣ ಅವರ ಅಬ್ಬರಕ್ಕೆ ನಗುತ್ತಲೇ ತಿರುಗೇಟು ನೀಡಿದ ಬೊಮ್ಮಾಯಿ, ‘ಯಾವುದೇ ಸರ್ಕಾರ ಬಂದರೂ ರೇವಣ್ಣ ಅವರ ಕ್ಷೇತ್ರದಲ್ಲಿ ಕಾಮಗಾರಿಗಳು ನಿಂತಿಲ್ಲ. ನಿಲ್ಲುವುದೂ ಇಲ್ಲ. ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ. ಇವರು ಪ್ರಸ್ತಾಪಿಸಿದ ಎಲ್ಲ ಕಾಮಗಾರಿಗಳಿಗೂ ಹಣ ಮಂಜೂರಾಗಿದೆ. ಕೋವಿಡ್‌ ಬಂದಿದ್ದರಿಂದ ಹಣ ಬಿಡುಗಡೆ ತಡವಾಗಿದೆ ಅಷ್ಟೇ. ಗದ್ದಲ ಎಬ್ಬಿಸಿ ಹಣ ಪಡೆದುಕೊಳ್ಳುವುದರ ಜತೆಗೆ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಾರೆ. ಇವೆರಡೂ ಒಟ್ಟಿಗೆ ನಡೆಯುವುದಿಲ್ಲ. ರಾಜಕೀಯ ದ್ವೇಷ ಮಾಡುತ್ತೇವೆ ಎನ್ನುವುದು ಸರಿಯಲ್ಲ’ ಎಂದರು.

ವಾಲ್ಮೀಕಿ ಆಶ್ರಮ ಶಾಲೆ ಶಿಕ್ಷಕರಿಗೆ ವೇತನ ಇಲ್ಲ!

ವಾಲ್ಮೀಕಿ ಆಶ್ರಮ ಶಾಲೆಗಳ ಗೌರವ ಶಿಕ್ಷಕರಿಗೆ ಹಲವು ತಿಂಗಳಿಂದ ಸರ್ಕಾರ ವೇತನವನ್ನು ಪಾವತಿಸಿಲ್ಲ. ಅತ್ಯಂತ ದಯನೀಯ ಸ್ಥಿತಿಯಲ್ಲಿ ಅವರು ದಿನ ಕಳೆಯುತ್ತಿದ್ದಾರೆ ಎಂದು ಬಿಜೆಪಿಯ ಉಮಾನಾಥ ಕೋಟ್ಯಾನ್‌ ಸದನದ ಗಮನ ಸೆಳೆದರು.

2005–06 ರಲ್ಲಿ ಗೌರವ ಶಿಕ್ಷಕರಾಗಿ ನೇಮಿಸಿಕೊಂಡಾಗ ₹6 ಸಾವಿರ ಸಂಬಳ ಇತ್ತು. ಈಗ ಅವರ ಸಂಬಳ ₹7 ಸಾವಿರ ಮಾತ್ರ. ಇವರಿಗೆ ಯಾವುದೇ ಸೌಲಭ್ಯಗಳು ಇಲ್ಲ. ವೇತನವನ್ನೂ ಹೆಚ್ಚು ಮಾಡಿಲ್ಲ. 440 ಶಿಕ್ಷಕರ ನೇಮಕ ಮಾಡಿಕೊಳ್ಳುವಾಗ ಇವರಿಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಬಿ.ಶ್ರೀರಾಮುಲು, 440 ಶಿಕ್ಷಕರ ನೇಮಕದ ಸಂದರ್ಭದಲ್ಲಿ ಇವರಿಗೆ ಕೃಪಾಂಕ ನೀಡಲಾಗುವುದು. ಅಲ್ಲದೆ, ಇವರ ಗೌರವ ಧನ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
‘ಜಯನಗರ ಟೆಂಡರ್ ಶ್ಯೂರ್‌ ರಸ್ತೆ ಬೇಗ ಪೂರ್ಣ’

ಜಯನಗರದ ಟೆಂಡರ್ ಶ್ಯೂರ್‌ ರಸ್ತೆಯ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿ, ಹೆಚ್ಚುವರಿ ಡಕ್ಟ್‌ಗಳನ್ನು ನಿರ್ಮಿಸಬೇಕಾದ ಕಾರಣ ಹೆಚ್ಚುವರಿ ಕೆಲಸ ಬಂದಿದೆ. ಈ ಯೋಜನೆಗೆ ಹೆಚ್ಚುವರಿಯಾಗಿ ₹11.89 ಕೋಟಿ ಬೇಕಾಗಿದೆ. ಬಿಬಿಎಂಪಿ ವತಿಯಿಂದ ಆ ಹಣವನ್ನು ಭರಿಸಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT