ಬುಧವಾರ, ಸೆಪ್ಟೆಂಬರ್ 23, 2020
27 °C

ರಾಜ್ಯದಲ್ಲಿ ತಗ್ಗಿದ ಮಳೆ ಅಬ್ಬರ; ವರದಾ ನದಿ ಪ್ರವಾಹದಲ್ಲಿ ಕೊಚ್ಚಿಹೋದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಭಾನುವಾರ ತಗ್ಗಿದೆ. ಆದರೆ, ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಜೋರು ಮಳೆಯಾಗುತ್ತಿದೆ. ಜಲಾಶಯಗಳಿಂದ ನದಿಗೆ ನೀರು ಬಿಡುತ್ತಿರುವುದರಿಂದ ರಾಜ್ಯದ ಕೆಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಮುಂದುವರಿದಿದೆ.

ಆಲಮಟ್ಟಿ ಜಲಾಶಯಕ್ಕೆ ಕೃಷ್ಣಾ ನದಿಯ ಹರಿವು ಮತ್ತಷ್ಟು ಹೆಚ್ಚಿದ್ದು, ಸಂಜೆಯ ವೇಳೆಗೆ 1.80 ಲಕ್ಷ ಕ್ಯುಸೆಕ್‌ಗೆ ಏರಿದೆ.

ಜಲಾಶಯಕ್ಕೆ ಭಾನುವಾರ ಒಂದೇ ದಿನ 14.57 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಜಲಾಶಯದಿಂದ ಶನಿವಾರ ಎಲ್ಲಾ 26 ಗೇಟ್‌ಗಳ ಮೂಲಕ 2.20 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿತ್ತು. ಜಲಾಶಯಕ್ಕೆ ಆಗಸ್ಟ್‌ 6 ರಿಂದ 9ರವರೆಗೆ 44.5 ಟಿಎಂಸಿ ಅಡಿ ನೀರು ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಸಾಲೂರು ಗ್ರಾಮದಲ್ಲಿ ತೋಟದ ಕೆಲಸಕ್ಕೆ ಹೋಗಿ ವಾಪಸಾಗುವಾಗ ಮರದ ಕೊಂಬೆ ಬಿದ್ದು ಅಸ್ಸಾಂ ಮೂಲದ ಕಾರ್ಮಿಕರಾದ ಹಮಿದಾನ್‌ನ್ನಿಸಾ (55) ಭಾನುವಾರ ಮೃತಪಟ್ಟಿದ್ದಾರೆ. 

ಹಾವೇರಿ ಜಿಲ್ಲೆಯ ತಿಳವಳ್ಳಿ ಸಮೀಪ ವರದಾ ನದಿ ಪ್ರವಾಹದಲ್ಲಿ ಚಂದ್ರು ದಳವಾಯಿ (25) ಎಂಬುವರು ಕೊಚ್ಚಿಕೊಂಡು ಹೋಗಿದ್ದಾರೆ. ಗೋಕಾಕ ತಾಲ್ಲೂಕಿನ ಡುಮ್ಮ ಉರಬಿನಹಟ್ಟಿ ಗ್ರಾಮದ ಬಳಿ ಬಳ್ಳಾರಿ ನಾಲಾ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ನಾಗರಾಜ ಹುಬ್ಬಳ್ಳಿ (18) ಅವರ ಶವ ಭಾನುವಾರ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪ ಸೋಮಾವತಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ತರುವೆ ಗ್ರಾಮದ ರತ್ನಮ್ಮ (70) ಅವರ ಶವ ಶನಿವಾರ ರಾತ್ರಿ ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಸಾಗರದಲ್ಲಿ ಜೋರು ಮಳೆಯಾಗಿದ್ದು, ಗುಡ್ಡ ಕುಸಿದಿರುವ ಕಾರಣ ಅಪಾಯಕಾರಿ ಸ್ಥಳದಲ್ಲಿರುವ ನಂದೋಡಿ ಗ್ರಾಮದ 16 ಕುಟುಂಬಗಳನ್ನು ಸ್ಥಳಾಂತರಿಸುವಂತೆ ತಾಲ್ಲೂಕು ಆಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸೂಚನೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ಸಮೀಪ ನದಿ ಪ್ರವಾಹದಲ್ಲಿ ಸಿಲುಕಿದ್ದ 50 ಮುಸಿಯಗಳನ್ನು ಹಗ್ಗದ ಏಣಿ ‌ ಮೂಲಕ ಅಗ್ನಿಶಾಮಕ, ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಸತತ ಮೂರು ದಿನಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಹರಿವು ಹೆಚ್ಚಳ: ಬೆಳಗಾವಿ, ಉತ್ತರ ಕನ್ನಡ, ವಿಜಯಪುರದಲ್ಲಿ ಮಳೆ ಕಡಿಮೆಯಾಗಿದ್ದರೂ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದುಬರುತ್ತಿದೆ. ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ವೇದಗಂಗಾ ಹಾಗೂ ದೂಧ್‌ಗಂಗಾ ನದಿಗಳಲ್ಲಿ ನೀರಿನ ಹರಿವು ಯಥಾಸ್ಥಿತಿಯಲ್ಲಿದೆ. ರಾಜಾಪುರ ಬ್ಯಾರೇಜ್‌ನಿಂದ 1.28 ಲಕ್ಷ ಕ್ಯುಸೆಕ್‌, ದೂಧ್‌ಗಂಗಾ ನದಿಯಿಂದ 33,616 ಕ್ಯುಸೆಕ್‌ ಸೇರಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.62 ಲಕ್ಷ ಕ್ಯುಸೆಕ್‌ ನೀರು ಸೇರಿಕೊಳ್ಳುತ್ತಿದೆ.

ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ ನಾಲ್ಕೂವರೆ ಅಡಿ ನೀರು ಬಂದಿದೆ. ಎರಡು ದಿನಗಳಲ್ಲೇ ಎಂಟು ಅಡಿ ನೀರು ಅಣೆಕಟ್ಟೆಗೆ ಹರಿದು ಬಂದಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ಸುಬ್ರಹ್ಮಣ್ಯದಲ್ಲಿ ನದಿಗಳು ತುಂಬಿವೆ. ಜಿಲ್ಲೆಯ ವಿವಿಧೆಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ಆಶ್ರಯ ನೀಡಲಾಗಿದೆ.

ಉಳ್ಳಾಲ, ಸೋಮೇಶ್ವರ-ಉಚ್ಚಿಲ, ಪಣಂಬೂರು, ಬೈಕಂಪಾಡಿ ಸೇರಿದಂತೆ ಕಡಲತೀರದ ಹಲವು ಕಡೆ ಸಮುದ್ರದ ಅಲೆಗಳು  ಮನೆಗಳ ಗೋಡೆಗೆ ಅಪ್ಪಳಿಸುತ್ತಿವೆ. ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ನಾವುಂದ, ಮರವಂತೆ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿ ಜಿ.ಜಗದೀಶ್,‌ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. 

ಕೊಡಗು– ತಗ್ಗಿದ ಪ್ರವಾಹ: ಕೊಡಗಿನಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಪ್ರಮುಖ ನದಿಗಳಲ್ಲಿ ಪ್ರವಾಹ ಇಳಿದಿದೆ. ಭಾಗಮಂಡಲ - ಅಯ್ಯಂಗೇರಿ, ಭಾಗಮಂಡಲ– ತಲಕಾವೇರಿ, ಮಡಿಕೇರಿ– ವಿರಾಜಪೇಟೆ, ಮಡಿಕೇರಿ– ಕುಶಾಲನಗರ, ಬಲಮುರಿ– ನಾಪೋಕ್ಲು ನಡುವೆ ವಾಹನಗಳು ಸಂಚರಿಸಿದವು.

ಪ್ರವಾಹ ಇಳಿಮುಖ: ಕಪಿಲಾ ನದಿಯ ಅಬ್ಬರ ಕಡಿಮೆಯಾಗಿದೆ. ಶನಿವಾರ ಇಡೀ ದಿನ ಜಲಾವೃತಗೊಂಡಿದ್ದ ಮೈಸೂರು–ನಂಜನಗೂಡು ಹೆದ್ದಾರಿಯು ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲೂ ಮಳೆ ಆರ್ಭಟ ಕಡಿಮೆ ಆಗಿದೆ. ಹೇಮಾವತಿ ಜಲಾಶಯದ ಒಳ ಹರಿವು ಕಡಿಮೆ ಆಗಿದೆ. 


ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ನದಿ ಪ್ರವಾಹದಲ್ಲಿ ಸಿಲುಕಿದ್ದ ಮುಸಿಯಗಳನ್ನು ರೋಪ್ ಲ್ಯಾಡರ್‌ ಬಳಸಿ ರಕ್ಷಿಸಲಾಯಿತು

ನಡುಗಡ್ಡೆಯಲ್ಲಿ ಸಿಲುಕಿದ ಕುಟುಂಬಗಳು
ಲಿಂಗಸುಗೂರು (ರಾಯಚೂರು ಜಿಲ್ಲೆ): ನಾರಾಯಣಪುರ ಅಣೆಕಟ್ಟೆ ಭರ್ತಿಯಾಗಿ ಕೃಷ್ಣಾ ನದಿಗೆ ಹೆಚ್ಚುವರಿಯಾಗಿ ನೀರು ಹರಿಬಿಡುತ್ತಿರುವುದರಿಂದ ನಡುಗಡ್ಡೆ ಪ್ರದೇಶಗಳಾದ ಕರಕಲಗಡ್ಡಿ, ಮ್ಯಾದರಗಡ್ಡಿ (ಹರಲಗಡ್ಡಿ) ಮತ್ತು ವಂಕಮ್ಮನಗಡ್ಡಿಯಲ್ಲಿ ಕೆಲ ಪರಿಶಿಷ್ಟ ಜಾತಿಯ ಕುಟುಂಬದವರು ಸಿಲುಕಿದ್ದಾರೆ.

ತಾಲ್ಲೂಕಿನ ಯರಗೋಡಿ ಸಮೀಪದ ಕರಕಲಗಡ್ಡಿಯಲ್ಲಿ ಒಂದೇ ಕುಟುಂಬದ 4 ಜನ ಮತ್ತು ಮ್ಯಾದರಗಡ್ಡಿಯಲ್ಲಿ 3 ಕುಟುಂಬದ 14 ಜನರು ಉಳಿದಿದ್ದಾರೆ. ಕುರಿ ಸೇರಿದಂತೆ ಇತರ ಜಾನುವಾರುಗಳ ರಕ್ಷಣೆಗೆಂದು ಹೋದವರು ಮರಳಿ ಬರಲಾಗದೆ ಅಲ್ಲಿಯೇ ಉಳಿದಿದ್ದಾರೆ. 

‘ಕುಟುಂಬಸ್ಥರ ಮನವೊಲಿಸಿ ಗಡ್ಡಿಯಿಂದ ಹೊರತರಲು ನಾವು ಪ್ರಯತ್ನಿಸಿದ್ದೆವು. ಆದರೆ, ಪುನಃ ಅವರು ಅಲ್ಲಿ ಯಾಕೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಅವರಿಗೆ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಉಪವಿಭಾಗಾಧಿಕಾರಿ ರಾಜಶೇಖರ ಡಂಬಳ ತಿಳಿಸಿದ್ದಾರೆ.

ಕುರಿಗಾಹಿ ರಕ್ಷಣೆ
ಹುಣಸಗಿ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ನಾರಾಯಣಪುರದ ಛಾಯಾಭಗವತಿ ದೇವಸ್ಥಾನ ಬಳಿ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ ಟೋಪಣ್ಣ ರಾಠೋಡ ಅವರನ್ನು ಎನ್‌ಡಿಆರ್‌ಎಫ್ ಮತ್ತು ಅಧಿಕಾರಿಗಳು ತಂಡ ಸುರಕ್ಷಿತವಾಗಿ ಕರೆತಂದಿತು.

ಹೈದರಾಬಾದ್‌ನಿಂದ ಬಂದ 16 ಜನರ ಎನ್‌ಡಿಆರ್‌ಎಫ್‌ ತಂಡ ಎರಡು ಯಾಂತ್ರಿಕ ಬೋಟ್ ಬಳಸಿ ಸತತ 4 ಗಂಟೆ ಕಾರ್ಯಾಚರಣೆ ನಡೆಸಿ ಟೋಪಣ್ಣ ಮತ್ತು ಅವರ ನಾಯಿಯನ್ನು ರಕ್ಷಿಸಿತು. ಆದರೆ, ಕುರಿಗಳನ್ನು ಅಲ್ಲಿಯೇ ಬಿಡಲಾಗಿದೆ. ನೀರಿನ ಹರಿಯುವ ಪ್ರಮಾಣ ಕಡಿಮೆಯಾದ ಬಳಿಕ ಅವುಗಳನ್ನು ತರಲು ನಿರ್ಧರಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು