ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್: ರೇಣುಕಾಚಾರ್ಯ ಟೀಕೆ

Last Updated 24 ನವೆಂಬರ್ 2021, 2:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಗೆ ಹೆದರಿ ಕಾಂಗ್ರೆಸ್‌ನವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಟೀಕಿಸಿದ್ದಾರೆ.

ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಸಂದರ್ಭ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ್ದು ಎನ್ನಲಾದ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಂಗಳವಾರ ವೈರಲ್ ಆಗಿತ್ತು. ಅದನ್ನು ಉಲ್ಲೇಖಿಸಿ ರೇಣುಕಾಚಾರ್ಯ ಟೀಕೆ ಮಾಡಿದ್ದಾರೆ.

ವಿಡಿಯೊದಲ್ಲೇನಿದೆ?: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಣ ಪಿಸು ಮಾತಿನ ದೃಶ್ಯ ವಿಡಿಯೊದಲ್ಲಿದೆ. ಇಬ್ಬರೂ ನಾಯಕರ ಹಿಂಬದಿಯಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರವಿದೆ. ಡಿಕೆಶಿ ಅವರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ‘ವಲ್ಲಭಭಾಯಿ ಪಟೇಲ್ ಅವರದ್ದೂ ಇವತ್ತು ಜನ್ಮದಿನವಂತೆ’ ಎಂದಿದ್ದಾರೆ. ಇದಕ್ಕುತ್ತರಿಸಿದ ಡಿಕೆಶಿ, ‘ಇದು ದಿನ (ಸ್ಮರಣೆ ಕಾರ್ಯಕ್ರಮ), ಅದು ಜನ್ಮದಿನ, ಫೋಟೊ ಇಡುವುದಿಲ್ಲ’ ಎಂದಿದ್ದಾರೆ. ಆದರೆ, ಬಿಜೆಪಿಯವರು ಇದರ ಲಾಭ ಪಡೆಯಬಹುದು ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಬಳಿಕ ಡಿಕೆಶಿ ಅವರು ಪಟೇಲ್‌ ಅವರ ಭಾವಚಿತ್ರ ಇರಿಸಲು ಸೂಚಿಸುತ್ತಾರೆ.

ಈ ಕುರಿತ ವೈರಲ್ ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ರೇಣುಕಾಚಾರ್ಯ, ‘ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್ ನವರ ಕರ್ಮಕಥೆ’ ಎಂದು ಬರೆದಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ಮುಖಂಡರಾದ ವಿ.ಎಸ್. ಉಗ್ರಪ್ಪ ಮತ್ತು ಎಂ.ಎ. ಸಲೀಂ (ಈಗ ಪಕ್ಷದಿಂದ ಉಚ್ಚಾಟಿತರಾಗಿದ್ದಾರೆ) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ನಡೆಸಿದ್ದ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣಗಳು, ಟಿವಿ ಮಾಧ್ಯಮಗಳಲ್ಲಿ ವೈರಲ್‌ ಆಗಿ ಪಕ್ಷವು ಮುಜುಗರಕ್ಕೀಡಾಗುವಂತಾಗಿತ್ತು. ಡಿಕೆಶಿ ಅವರು ‘ಕುಡುಕ, ಕಮಿಷನ್ ಗಿರಾಕಿ’ ಎಂದೆಲ್ಲಾ ಸಲೀಂ ಹೇಳುತ್ತಿರುವುದು ವಿಡಿಯೊದಲ್ಲಿತ್ತು. ಬಳಿಕ ಸಲೀಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT