ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ.ಗಳಲ್ಲಿ ಸುಗಮ ಪರೀಕ್ಷಾ ವ್ಯವಸ್ಥೆಗೆ ಹೊಸ ತಂತ್ರಾಂಶ: ಸಚಿವ ಅಶ್ವತ್ಥನಾರಾಯಣ

ಶೈಕ್ಷಣಿಕ ಪ್ರಮಾಣಪತ್ರಗಳ ಪೂರೈಕೆಗೆ ಇನ್ನು ‘ಇ-ಸಹಮತಿ’
Last Updated 24 ಜನವರಿ 2022, 10:51 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣ ವಲಯದಲ್ಲಿ ಪರೀಕ್ಷಾಂಗ ವ್ಯವಸ್ಥೆಯನ್ನು ಸದೃಢಗೊಳಿಸುವ ಉದ್ದೇಶದಿಂದ ಪರೀಕ್ಷಾ ತಂತ್ರಾಂಶ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರ ಇತ್ಯಾದಿಗಳನ್ನು ಸುಗಮವಾಗಿ ಒದಗಿಸಲು ‘ಇ-ಸಹಮತಿ’ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ವಿಧಾನಸೌಧದಲ್ಲಿ ಈ ತಂತ್ರಾಂಶಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಇದರಿಂದ ವಿಶ್ವವಿದ್ಯಾಲಯಗಳು ಪರೀಕ್ಷೆ ಮತ್ತು ಅಂಕಪಟ್ಟಿಗಳಿಗಾಗಿ ಖರ್ಚು ಮಾಡುತ್ತಿದ್ದ ಸುಮಾರು ₹ 60 ಕೋಟಿ ಹಣ ಉಳಿತಾಯ ಆಗಲಿದೆ. ಜೊತೆಗೆ, ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳ ದಂಧೆಗೆ ಕಡಿವಾಣ ಬೀಳಲಿದೆ. ಮಾನ್ಯತೆ ಹೊಂದಿರುವ 3,400ಕ್ಕೂ ಹೆಚ್ಚು ಕಾಲೇಜುಗಳ 16 ಲಕ್ಷ ವಿದ್ಯಾರ್ಥಿಗಳಿಗೆ ಇದರಿಂದ ಲಾಭ ಆಗಲಿದೆ ಎಂದರು.

ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ ಯೋಜನೆಯಡಿ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. 10 ಮಾಡ್ಯೂಲ್‌ಗಳನ್ನು ಒಳಗೊಂಡಿರುವ ಈ ಯೋಜನೆಯಡಿ 2021ರ ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ ಪ್ರವೇಶಾತಿ ಮತ್ತು ಶೈಕ್ಷಣಿಕ ಹಾಗೂ ತರಗತಿ ನಿರ್ವಹಣೆ ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಉಳಿದವುಗಳನ್ನು ಜೂನ್ ವೇಳೆಗೆ ಅಳವಡಿಸಲಾಗುವುದು. ಇಂಥ ವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದರು.

ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ 24 ವಿಶ್ವವಿದ್ಯಾಲಯಗಳ ಪೈಕಿ ಎರಡು ವಿಶ್ವವಿದ್ಯಾಲಯಗಳು ತಮ್ಮದೇ ಆದ ಪರೀಕ್ಷಾ ನಿರ್ವಹಣೆಯ ತಂತ್ರಾಂಶಗಳನ್ನು ಹೊಂದಿದ್ದರೆ, ಎಂಟು ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಪರೀಕ್ಷಾ ತಂತ್ರಾಂಶಗಳಿಲ್ಲ. ಮಿಕ್ಕ ವಿಶ್ವವಿದ್ಯಾಲಯಗಳು ಹೊರಗುತ್ತಿಗೆಯನ್ನು ನೆಚ್ಚಿಕೊಂಡಿದ್ದವು. ಈಗ ಅಭಿವೃದ್ಧಿಪಡಿಸಿರುವ ಪರೀಕ್ಷಾ ನಿರ್ವಹಣಾ ತಂತ್ರಾಂಶದ ಮೂಲಕ ಡಿಜಿಟಲ್ ಮೌಲ್ಯಮಾಪನ, ಆನ್‌ಲೈನ್‌ ಮೂಲಕ ಪ್ರಶ್ನೆಪತ್ರಿಕೆ, ಪ್ರವೇಶಪತ್ರ, ವೇಳಾಪಟ್ಟಿ, ಪರೀಕ್ಷಾ ಶುಲ್ಕ ಪಾವತಿ, ಪ್ರಯೋಗಾಲಯಗಳ ತಂಡಗಳ ನಿರ್ವಹಣೆ, ಅಂಕಪಟ್ಟಿ ಪೂರೈಕೆ ಮುಂತಾದವು ಸಾಧ್ಯವಾಗಲಿವೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದ ಹೊರೆ ಕಡಿಮೆ ಆಗಲಿದೆ ಎಂದು ಸಚಿವರು ತಿಳಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಬಹುಶಿಸ್ತೀಯ ಪಠ್ಯಕ್ರಮವನ್ನು ಇಲ್ಲಿ ಪರಿಗಣಿಸಲಾಗಿದೆ. ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ಮೊಟಕುಗೊಳಿಸಿದರೆ ಅಥವಾ ಮರುಪ್ರವೇಶ ಬಯಸಿದರೆ ಅದನ್ನೂ ಸಾಧ್ಯವಾಗಿಸುವ ವ್ಯವಸ್ಥೆಯನ್ನು ಈ ತಂತ್ರಾಂಶದಲ್ಲಿ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಅಗತ್ಯವೆನಿಸಿದಾಗ ಪ್ರಮಾಣಪತ್ರಗಳನ್ನು ಪಡೆಯಬಹುದು ಎಂದು ವಿವರಿಸಿದರು.

ಅಲ್ಲದೆ,`ಇ-ಸಹಮತಿ’ ತಂತ್ರಾಂಶದ ಮೂಲಕ ಪರೀಕ್ಷೆಗೆ ಸಂಬಂಧಿಸಿದ ದತ್ತಾಂಶಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಾಧನಾ ಭಂಡಾರಕ್ಕೆ (ನ್ಯಾಷನಲ್ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್- ಎನ್ಎಬಿಸಿ) ಸೇರಿಸಲು ಹಾಗೂ ಉದ್ಯೋಗದಾತರ ಜತೆಗೆ ಅಂಕಪಟ್ಟಿ ಹಂಚಿಕೊಳ್ಳಲು ಇದರಲ್ಲಿ ಅವಕಾಶ ನೀಡಲಾಗಿದೆ. ಇವೆಲ್ಲವೂ ಎನ್ಕ್ರಿಪ್ಟೆಡ್ ರೂಪದಲ್ಲಿ ಇರಲಿದ್ದು, ಪ್ರತೀ ಸೆಮಿಸ್ಟರಿನ ಅಂಕಪಟ್ಟಿಗಳನ್ನು ನೇರವಾಗಿ ಡಿಜಿಲಾಕರ್-ಎನ್ಎಡಿಗೆ ನೇರವಾಗಿ ವರ್ಗಾಯಿಸಬಹುದು. ಈ ಪ್ರಕ್ರಿಯೆಯಲ್ಲಿ ಭದ್ರತೆ ಮತ್ತು ಗೌಪ್ಯತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ವಿಶ್ವವಿದ್ಯಾಲಯಗಳು ತಮ್ಮ ಸ್ವಾಯತ್ತತೆಗೆ ಅನುಸಾರವಾಗಿ ಪರೀಕ್ಷೆಯ ನಿಯಮಗಳನ್ನು ಈ ತಂತ್ರಾಂಶದಲ್ಲಿ ರೂಪಿಸಿ, ಅಳವಡಿಸುವ ಸ್ವಾತಂತ್ರ್ಯವೂ ಇದೆ. ಇದರ ಅನುಷ್ಠಾನಕ್ಕೆ ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ವ್ಯವಸ್ಥೆಯೂ ಇರಲಿದೆ ಎಂದರು.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕುಮಾರ್ ನಾಯಕ್, ಇ-ಆಡಳಿತ ಕೇಂದ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ತಿಮ್ಮೇಗೌಡ ಮತ್ತು ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರು ಇದ್ದರು. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಅವರು ವರ್ಚುವಲ್ ಮೂಲಕ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT