ಗುರುವಾರ , ಜನವರಿ 20, 2022
15 °C
ರೈಲು ಹಳಿ ನಿರ್ಮಾಣಗೊಂಡರೆ 60 ಕಿ.ಮೀ. ಕಡಿಮೆಯಾಗಲಿರುವ ಬೆಂಗಳೂರು ಪಯಣ

ಎನ್‌ಎಚ್‌ಗೆ ಸಮಾನಾಂತರ ರೈಲ್ವೆ: ಭೂಸ್ವಾಧೀನ ಪೂರ್ಣ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಮಾನಾಂತರದಲ್ಲಿ ರೈಲು ದ್ವಿಪಥ ಹಳಿ ನಿರ್ಮಾಣಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ವಿಶೇಷ ಭೂಸ್ವಾಧೀನ ಇಲಾಖೆಯು ಮೊದಲ ಹಂತದಲ್ಲಿ ಗುರುತಿಸಲಾಗಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಹಸ್ತಾಂತರವಷ್ಟೇ ಬಾಕಿ ಇದೆ. ಈ ಹಳಿ ನಿರ್ಮಾಣಗೊಂಡರೆ ದಾವಣಗೆರೆಯಿಂದ ಬೆಂಗಳೂರಿಗೆ ಹೋಗುವವರಿಗೆ 60 ಕಿಲೋಮೀಟರ್‌ ಪಯಣ ಕಡಿಮೆಯಾಗಲಿದೆ.

ತುಮಕೂರು– ಚಿತ್ರದುರ್ಗ–ದಾವಣಗೆರೆ ಜಿಲ್ಲೆಗಳಲ್ಲಿ ಹಾದು ಹೋಗುವಂತೆ ಈ ಹಳಿ ನಿರ್ಮಾಣ ಮಾಡಲು 2013ರಲ್ಲಿ
ನಿರ್ಧಾರವಾಗಿತ್ತು. 2018ರಲ್ಲಿ ಅಧಿಕೃತವಾಗಿ ಚಾಲನೆ ದೊರೆತಿತ್ತು. ದಾವಣಗೆರೆ ಮತ್ತು ತುಮಕೂರಿನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಭೂಸ್ವಾಧೀನ ಮಾಡುವ ಅಧಿಕಾರ ನೀಡಲಾಗಿದ್ದರೆ ಚಿತ್ರದುರ್ಗದಲ್ಲಿ ಉಪ ವಿಭಾಗಾಧಿಕಾರಿಗೆ ಈ ಹೊಣೆ ನೀಡಲಾಗಿತ್ತು. ತುಮಕೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದು ಹಳಿ ಕೆಲಸ ಆರಂಭಗೊಂಡಿದೆ. ದಾವಣಗೆರೆಯಲ್ಲಿ ಸ್ವಾಧಿನ ಪ್ರಕ್ರಿಯೆ ಮುಗಿದಿದ್ದು, ರೈಲ್ವೆಗೆ ಹಸ್ತಾಂತರ ಆಗಬೇಕಿದೆ. ಚಿತ್ರದುರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ
ನಡೆಯುತ್ತಿದೆ.

ಜಿಲ್ಲೆಯ ಬುಳ್ಳಾಪುರ, ಆನಗೋಡು, ನೀರ್ಥಡಿ, ಹೆಬ್ಬಾಳು, ಹುಣಸೆಕಟ್ಟೆ, ರಂಗವ್ವನಹಳ್ಳಿ, ಪಂಜೇನಹಳ್ಳಿ, ಚಿಕ್ಕನಹಳ್ಳಿ, ತೋಳಹುಣಸೆ, ಕರೆಲಕ್ಕನಹಳ್ಳಿ, ಚಟ್ಟೋಬನಹಳ್ಳಿ, ಕೊಗ್ಗನೂರು, ಹಾಲವರ್ತಿ, ಪಾಮೇನಹಳ್ಳಿ ಈ 14 ಗ್ರಾಮಗಳಲ್ಲಿ ಹೊಸ ಹಳಿ ಹಾದು ಹೋಗಲಿದೆ.

‘ಮೊದಲ ಹಂತದಲ್ಲಿ 209 ಎಕರೆ 18.5 ಗುಂಟೆ ಸ್ವಾಧೀನ ಮಾಡಿಕೊಳ್ಳಬೇಕಿತ್ತು. ಈ ಭೂಮಿಯ ಸ್ವಾಧೀನ ಆಗಿದೆ. ಈಚೆಗೆ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಈ ವಿಚಾರವನ್ನು ರೈಲ್ವೆಯವರಿಗೆ ತಿಳಿಸಿದ್ದೇವೆ. ಕೆಲವೇ ದಿನಗಳಲ್ಲಿ ರೈಲ್ವೆಯವರಿಗೆ ಹಸ್ತಾಂತರ ನಡೆಯಲಿದೆ’ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ಹಂತದ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ₹ 92 ಕೋಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ₹ 82 ಕೋಟಿ ಪರಿಹಾರವಾಗಿ ಭೂಮಿ ನೀಡಿದವರಿಗೆ ಕೊಡಲಾಗಿದೆ. ಉಳಿದ ₹ 10 ಕೋಟಿ ಇತರ ಭೂಸ್ವಾಧೀನ ಪ್ರಕ್ರಿಯೆಯ ಇತರ ಕಾರ್ಯಗಳಿಗೆ ಬಳಕೆಯಾಗಿದೆ ಎಂದು ಮಾಹಿತಿ ನೀಡಿದರು.

ಅಭಿಪ್ರಾಯಗಳು

ಈ ರೈಲು ಮಾರ್ಗವಾದರೆ ಬೆಂಗಳೂರಿಗೆ ಪ್ರಯಾಣದ ಸಮಯ, ವೆಚ್ಚ ಕಡಿಮೆಯಾಗುತ್ತದೆ. ಅದಕ್ಕಾಗಿ ಬೇಗ ಭೂಹಸ್ತಾಂತರ ಮಾಡಲು ಡಿಎಸ್‌ಎಲ್‌ಒಗೆ ಸೂಚನೆ ನೀಡಿದ್ದೇನೆ.
– ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ಮೊದಲ ಹಂತದ 209 ಎಕರೆ ಸ್ವಾಧೀನ ಆಗಿದೆ. ಹಸ್ತಾಂತರ ಮಾತ್ರ ಬಾಕಿ ಇದೆ. ಎರಡನೇ ಹಂತದಲ್ಲಿ 27 ಎಕರೆ ವಶಪಡಿಸಿಕೊಳ್ಳಬೇಕು. ಅದಕ್ಕೆ ಫೈನಾನ್ಶಿಯಲ್‌ ನೋಟಿಫಿಕೇಶನ್‌ ಆಗಿದೆ.
– ರೇಷ್ಮಾ ಹಾನಗಲ್‌, ಜಿಲ್ಲಾ ವಿಶೇಷ ಭೂಸ್ವಾಧೀನ ಅಧಿಕಾರಿ

ಶೇ 90ರಷ್ಟು ಭೂಮಿ ಹಸ್ತಾಂತರವಾಗದೇ ಕೆಲಸ ಆರಂಭಿಸಲು ಸಾಧ್ಯವಿಲ್ಲ. ಒಮ್ಮೆ ಭೂಮಿ ಹಸ್ತಾಂತರವಾದರೆ ಕೂಡಲೇ ಟೆಂಡರ್‌ ಕರೆದು ಹಳಿ ನಿರ್ಮಾಣ ಕೆಲಸ ಆರಂಭಿಸಲಾಗುವುದು.
– ಮಂಜುನಾಥ, ರೈಲ್ವೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು