ಭಾನುವಾರ, ಜನವರಿ 16, 2022
28 °C
ಕೇರಳದ ಗಡಿಯಲ್ಲಿರುವ ಪೆಟ್ರೋಲ್‌ ಬಂಕ್‌ಗಳಿಗೆ ವ್ಯಾಪಾರವೂ ಇಲ್ಲ, ಸಿಬ್ಬಂದಿಗೆ ಸರಿಯಾದ ವೇತನವೂ ಇಲ್ಲ

ರಾಜ್ಯದಲ್ಲಿ ವ್ಯಾಟ್ ಇಳಿಕೆಯಿಂದ ಕೇರಳದ ಗಡಿಯಲ್ಲಿ ‘ಇಂಧನ ವಲಸೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೇಂದ್ರ ಸರ್ಕಾರ ಎಕ್ಸೈಸ್‌ ಸುಂಕವನ್ನು ಇಳಿಸಿರುವ ಜತೆಗೆ ರಾಜ್ಯ ಸರ್ಕಾರವೂ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ವ್ಯಾಟ್‌ಅನ್ನು ಈಚೆಗೆ ಕಡಿತ ಮಾಡಿದ್ದರಿಂದ ಗಡಿಭಾಗದಲ್ಲಿ ‘ಇಂಧನ ವಲಸೆ’ ಹೆಚ್ಚಾಗಿದೆ. ವಿಶೇಷವಾಗಿ, ಕೇರಳದ ಗಡಿಯಲ್ಲಿರುವ ಪೆಟ್ರೋಲ್‌ ಬಂಕ್‌ಗಳಿಗೆ ವ್ಯಾಪಾರವೇ ಇಲ್ಲದೆ, ಸಿಬ್ಬಂದಿಗೆ ವೇತನ ನೀಡಲೂ ಕಷ್ಟಪಡಬೇಕಾಗಿದೆ. ಆದರೆ, ಕರ್ನಾಟಕದಲ್ಲಿರುವ ಬಂಕ್‌ಗಳ ವ್ಯಾಪಾರ ಹೆಚ್ಚಿದೆ.

ಬೇರೆಬೇರೆ ರಾಜ್ಯಗಳಲ್ಲಿ ವ್ಯಾಟ್‌ ಪ್ರಮಾಣದಲ್ಲಿ ವ್ಯತ್ಯಾಸ ಇರುವುದರಿಂದ ತೈಲ ಬೆಲೆಯಲ್ಲೂ ಒಂದೆರಡು ರೂಪಾಯಿಗಳ ಅಂತರ ಹಿಂದಿ
ನಿಂದಲೂ ಇರುತ್ತಿತ್ತು. ಆದರೆ, ಈಗ ಬೆಲೆ ವ್ಯತ್ಯಾಸವು ಸುಮಾರು ₹5.50ರಷ್ಟು ಆಗಿರುವುದರಿಂದ, ಬೆಲೆ ಕಡಿಮೆ ಇರುವ ರಾಜ್ಯಗಳ ಬಂಕ್‌ಗಳತ್ತ ವಾಹನಗಳ ಮಾಲೀಕರು ಧಾವಿಸುತ್ತಿದ್ದಾರೆ.

ಕರ್ನಾಟಕ– ಕೇರಳ ಗಡಿಭಾಗವಾದ ತಲಪಾಡಿಯಲ್ಲಿ 500 ಮೀಟರ್‌ ಅಂತರದಲ್ಲಿ ಎರಡು ಪೆಟ್ರೋಲ್‌ ಬಂಕ್‌ಗಳಿವೆ. ಒಂದು ಬಂಕ್‌ ಕೇರಳ ಭಾಗದ ಕುಂಜತ್ತೂರಿನಲ್ಲಿದ್ದರೆ, ಇನ್ನೊಂದು ಕರ್ನಾಟಕದಲ್ಲಿದೆ. ರಾಜ್ಯದಲ್ಲಿ ವ್ಯಾಟ್‌ ಇಳಿಕೆಯ ನಂತರ ಕೇರಳ ಭಾಗದ ಪೆಟ್ರೋಲ್‌ ಬಂಕ್‌ ಬಿಕೊ ಎನ್ನುತ್ತಿದ್ದರೆ, ಕರ್ನಾಟಕ ಭಾಗದ ಬಂಕ್‌ನಲ್ಲಿ ವಾಹನಗಳ ಸಾಲು ಕಾಣಿಸುತ್ತಿದೆ.

‘ದಿನ 6,000 ಲೀಟರ್‌ ಪೆಟ್ರೋಲ್‌ ಮಾರುತ್ತಿದ್ದೆವು. ಈಗ 2,000 ಲೀಟರ್‌ಗೆ ಕುಸಿದಿದೆ. ಸಿಬ್ಬಂದಿಗೆ ವೇತನ ನೀಡಲೂ ಕಷ್ಟವಾಗಿದೆ. ಸಿಬ್ಬಂದಿ ಸಂಖ್ಯೆಯನ್ನು ಆರರಿಂದ ನಾಲ್ಕಕ್ಕೆ ಇಳಿಸಿದ್ದೇವೆ’ ಎಂದು ಕುಂಜತ್ತೂರಿನ ಪೆಟ್ರೋಲ್‌ ಬಂಕ್‌ನ ವ್ಯವಸ್ಥಾಪಕ ತಾಜುದ್ದೀನ್ ಆತಂಕ ವ್ಯಕ್ತಪಡಿಸಿದ್ದಾರೆ.

‘ಕೇರಳ ಸರ್ಕಾರ ಸುಂಕವನ್ನು ಇಳಿಕೆ ಮಾಡದಿದ್ದರೆ ವ್ಯವಹಾರ ಮುಂದುವರಿಸಲು ಸಾಧ್ಯವಾಗದು’ ಅನ್ನುತ್ತಾರೆ ಪಂಪ್ ಸಿಬ್ಬಂದಿ ಹರೀಶ್.

‘35 ವರ್ಷಗಳಲ್ಲಿ ಇದೇ ಮೊದಲ ಬಾರಿ ಕೇರಳ– ಕರ್ನಾಟಕ ಮಧ್ಯೆ ದರದಲ್ಲಿ ಇಷ್ಟೊಂದು ವ್ಯತ್ಯಾಸ ಕಾಣಿಸಿದೆ. ಈ ಹಿಂದೆ ದಿನಕ್ಕೆ 200 ವಾಹನಗಳು ಬರುತ್ತಿದ್ದವು. ಬೆಲೆ ಇಳಿದ ನಂತರ 600ಕ್ಕೂ ಅಧಿಕ ವಾಹನಗಳು ಬರುತ್ತಿದೆ. ಗ್ರಾಹಕರ ಸಂಖ್ಯೆ ಹೆಚ್ಚಿದ್ದರಿಂದ ಸಿಬ್ಬಂದಿ ಕೊರತೆ ಉಂಟಾಗಿದೆ’ ಎಂದು ಕರ್ನಾಟಕ ಭಾಗದ ಬಂಕ್‌ನ ವ್ಯವಸ್ಥಾಪಕ ಮಹೇಶ್ ಹೇಳಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ

ರಾಜ್ಯ; ಪೆಟ್ರೋಲ್‌; ಡೀಸೆಲ್‌

ಆಂಧ್ರಪ್ರದೇಶ; 110.67; 96.08

ಗೋವಾ; 96.38; 87.27

ಮಹಾರಾಷ್ಟ್ರ; 109.98; 94.14

ತೆಲಂಗಾಣ; 108.20; 94.62

ತಮಿಳುನಾಡು; 101.40; 91.43

ಕೇರಳ; 106.36; 93.47

ಕರ್ನಾಟಕ; 100.58; 85.01

ಸುಂಕ ಇಳಿಕೆಯ ನಂತರ ಮಹಾರಾಷ್ಟ್ರ– ಬೆಳಗಾವಿ- ಗೋವಾ ಮಧ್ಯೆ ತೈಲ ವಲಸೆ ಜೋರಾಗಿದೆ. ಬೆಳಗಾವಿಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹100.32 ಹಾಗೂ ಡೀಸೆಲ್‌ ಬೆಲೆ ₹84.80 ಇದೆ. ಗೋವಾ ಗಡಿ ಭಾಗದಲ್ಲಿ ಇದು ಕ್ರಮವಾಗಿ ₹95.48 ಹಾಗೂ ₹87.12 ಇದೆ.

ಮಹಾರಾಷ್ಟ್ರದಲ್ಲಿ ತೈಲ ದರ ಬೆಳಗಾವಿಗಿಂತಲೂ ಜಾಸ್ತಿ ಇದೆ. (ಕ್ರಮವಾಗಿ ₹110.33 ಹಾಗೂ ₹93.09) ಆದ್ದರಿಂದ ಮಹಾರಾಷ್ಟ್ರದ ಗಡಿಭಾಗದ ಕೆಲವು ಹಳ್ಳಿಗಳವರು ಬೆಳಗಾವಿ ಜಿಲ್ಲೆಯ ಬಂಕ್‌ಗಳಿಗೆ ಬರುತ್ತಿದ್ದಾರೆ. ಮಹಾರಾಷ್ಟ್ರದ ಕಡೆ ಹೋಗುವ ಲಾರಿಗಳ ಚಾಲಕರು ಇಲ್ಲಿ ಟ್ಯಾಂಕ್‌ ತುಂಬಿಸಿಕೊಂಡೇ ಪ್ರಯಾಣ ಮುಂದುವರಿಸುತ್ತಾರೆ.

ಕಾರವಾರ ನಗರದ ವಾಹನ ಸವಾರರು ಗೋವಾದಲ್ಲಿ ಇಂಧನ ಭರ್ತಿ ಮಾಡಿಕೊಳ್ಳುವುದು ಮುಂದುವರಿದಿದೆ. ದಕ್ಷಿಣ ಗೋವಾದಲ್ಲಿ ಬುಧವಾರ ಪೆಟ್ರೋಲ್ ದರ ₹95.91 ಹಾಗೂ ಡೀಸೆಲ್ ದರ ₹87.34 ಇತ್ತು. ಕಾರವಾರದಲ್ಲಿ ಇದು ಕ್ರಮವಾಗಿ ₹102.41 ಹಾಗೂ ₹86.56 ಇದೆ.

ಕೋಲಾರ ಜಿಲ್ಲೆ ಗಡಿ ಭಾಗದಲ್ಲಿರುವ ಕೆಜಿಎಫ್‌ ಮತ್ತು ಮುಳಬಾಗಿಲು ತಾಲ್ಲೂಕಿನ ಬಂಕ್‌ಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗದ ಬಂಕ್‌ಗಳಲ್ಲೂ ಆಂಧ್ರದ ವಾಹನಗಳು ಹೆಚ್ಚಾಗಿ ಕಾಣಿಸುತ್ತಿವೆ. ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಭಾಗದ ಮೂರು ಪೆಟ್ರೋಲ್ ಬಂಕ್‌ಗಳಲ್ಲೂ ಅದೇ ಸ್ಥಿತಿ ಇದೆ.

ಚಾಮರಾಜನಗರ, ಕೊಡಗು ಜಿಲ್ಲೆಗಳು ಕೇರಳದ ಜತೆ ಗಡಿ ಹಂಚಿಕೊಂಡಿದ್ದರೂ, ಬಂಕ್‌ಗೆ ಬರಬೇಕಾದರೆ ಅರಣ್ಯ ಪ್ರದೇಶ ಮತ್ತು ಚೆಕ್‌ಪೋಸ್ಟ್‌ಗಳನ್ನು ದಾಟಿ, ದೂರ ಪ್ರಯಾಣಿಸಬೇಕಾಗಿದ್ದರಿಂದ ಇಂಧನಕ್ಕಾಗಿಯೇ ಇಲ್ಲಿಗೆ ಯಾರೂ ಬರುತ್ತಿಲ್ಲ.

ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಗಡಿಭಾಗದಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲಿ ತೆಲಂಗಾಣದ ವಾಹನಗಳು ಹೆಚ್ಚಾಗಿ ಕಾಣಿಸುತ್ತಿವೆ.  ಮುಧೋಳ, ರಿಬ್ಬನಪಲ್ಲಿ, ಲಿಂಗಂಪಲ್ಲಿ, ಆಡಕಿ ಸೇರಿದಂತೆ ವಿವಿಧೆಡೆ ಇರುವ ಪೆಟ್ರೋಲ್ ಬಂಕ್‌ಗಳಲ್ಲಿ ತೆಲಂಗಾಣದ ವಾಹನಗಳ ಸಾಲು ಕಾಣಿಸುತ್ತಿದೆ. ರಾಯಚೂರು, ಯಾದಗಿರಿ ಜಿಲ್ಲೆಯ ಗಡಿಭಾಗದ ಬಂಕ್‌ಗಳಿಗೂ ತೆಲಂಗಾಣದ ವಾಹನಗಳು ಲಗ್ಗೆ ಇಡುತ್ತಿವೆ. ತೆಲಂಗಾಣದಲ್ಲಿ ಪೆಟ್ರೋಲ್  ದರ ₹109.32 ಮತ್ತು ಡಿಸೆಲ್ ₹95.55 ಇದ್ದರೆ, ರಾಜ್ಯದಲ್ಲಿ ₹100.85 ಮತ್ತು ಡೇಸೆಲ್‌ ₹ 85.25 ಇದೆ.  ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಅಫಜಲಪುರ ಮತ್ತು ಆಳಂದ ತಾಲ್ಲೂಕಿನ ಬಂಕ್‌ಗಳಲ್ಲಿ ಮಹಾರಾಷ್ಟ್ರದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು