ಬೆಳಗಾವಿ: ಸರ್ಕಾರದ ಆದೇಶ ಉಲ್ಲಂಘಿಸಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಐದು ಸಾವಿರ ಫಲಾನು ಭವಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ನೇರ ಸಾಲ ಯೋಜನೆಯಡಿ ತಲಾ ₹ 50 ಸಾವಿರ ಮಂಜೂರು ಮಾಡಿ ₹ 25 ಕೋಟಿ ಅಕ್ರಮ ಎಸಗಿರುವುದೂ ಸೇರಿದಂತೆ ಭಾರಿ ಭ್ರಷ್ಟಾಚಾರ ನಡೆಸಿರುವುದು ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಅಕ್ರಮ ದೂರುಗಳು ಬಂದ ಕಾರಣನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಸುರೇಶ್ ಕುಮಾರ್ ಅವರನ್ನು ಅ. 29ರಂದು ಎತ್ತಂಗಡಿ ಮಾಡಿ ಆ ಜಾಗಕ್ಕೆ ಸುರೇಶ ನಾಯಕ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು.
ಸರ್ಕಾರದ ನಿರ್ದೇಶನದಂತೆ ಸುರೇಶ್ ಕುಮಾರ್ ಮೇಲಿನ ದೂರುಗಳ ಮೇಲೆ ಸುರೇಶ ನಾಯಕ ಅವರು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಅದರ ಪ್ರತಿ ಇಲಾಖೆಯಿಂದ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಆದರೆ, ತನ್ನನ್ನು ವರ್ಗಾ ವಣೆ ಮಾಡಿ ಸುರೇಶ ನಾಯಕ ಅವ ರನ್ನು ನೇಮಿಸಿದ ಕ್ರಮದ ವಿರುದ್ಧ ಕೆಎಟಿ ಯಿಂದ ತಡೆಯಾಜ್ಞೆ ತಂದು ಸುರೇಶ ಕುಮಾರ್ ಇದೇ 13ರಿಂದ ಮತ್ತೆ ನಿಗಮದ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ.
ಗಂಗಾ ಕಲ್ಯಾಣ ಸೇರಿದಂತೆ ನಿಗಮ ದಡಿಅನುಷ್ಠಾನಗೊಳಿಸುವ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ,
ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲ್ವಿಚಾರಣೆ, ಬಲವರ್ಧನೆ ಸಮಿತಿಯು ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗೆ ದೂರುಗಳನ್ನು ನೀಡಿತ್ತು. ಒಂದೂವರೆ ತಿಂಗಳಷ್ಟೆ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ನಿಭಾಯಿಸಿದ್ದ ಸುರೇಶ ನಾಯಕ ಅವರು ತಮ್ಮ ವರದಿಯಲ್ಲಿ ದಾಖಲೆಗಳಸಹಿತ ಅಕ್ರಮವನ್ನು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಗೆ ನಿಗಮವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್ ಅವರಿಗೆ ಕರೆ, ಸಂದೇಶ ಕಳುಹಿಸಿದರೂ ಸಂಪರ್ಕಕ್ಕೆ
ಲಭ್ಯರಾಗಲಿಲ್ಲ.
ಶಾಸಕರ ಗಮನಕ್ಕೆ ತರದೇ ಫಲಾನುಭವಿ ಆಯ್ಕೆ
ಐರಾವತ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಅರ್ಜಿದಾರರ ಜ್ಯೇಷ್ಠತೆ, ಶಿಕ್ಷಣ, ಚಾಲನಾ ಪರವಾನಗಿ ಆಧರಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಆದರೆ, ಅರ್ಜಿಯನ್ನೇ ಸಲ್ಲಿಸದವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಗಳಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ವಿವಿಧ ಕಾರಣಗಳಿಗೆ ಆಯಾ ವರ್ಷಗಳಲ್ಲಿ ಅನುಷ್ಠಾನವಾಗದೆ ಬಾಕಿ ಇರುವಮೊತ್ತದ ವಿಷಯವನ್ನು ಆಯಾ ಶಾಸಕರ ಸಮಿತಿ ಮುಂದೆ ಮಂಡಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆದರೆ, ನಿಗಮದ ಕೇಂದ್ರ ಕಚೇರಿಯಿಂದಲೇ ಫಲಾನುಭವಿಗಳನ್ನು ನೇರವಾಗಿ ಆಯ್ಕೆ ಮಾಡಲಾಗಿದೆ. ಆ ಮೂಲಕ, ಸರ್ಕಾರದ ಆದೇಶ ಮತ್ತು ನಿಯಮಗಳನ್ನು ಉಲ್ಲಂಘಿಸಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಅಕ್ರಮದ ಒಳಸುಳಿ
*ಸ್ವಯಂ ಉದ್ಯೋಗಕ್ಕಾಗಿ ನೇರ ಸಾಲ ಯೋಜನೆಗೆ ಐದು ಸಾವಿರ ಫಲಾನುಭವಿಗಳ ಪೈಕಿ, ಶಾಸಕರ ಅಧ್ಯಕ್ಷತೆಯ
ಸಮಿತಿ ಶೇ 80ರಷ್ಟು, ಸರ್ಕಾರದ ಸಾಂಸ್ಥಿಕ ಕೋಟಾದಡಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ಕಲ್ಯಾಣ ಸಚಿವರು
ಶೇ 15ರಷ್ಟು ಮತ್ತು ನಿಗಮದ ನಿರ್ದೇಶಕ ಮಂಡಳಿಶೇ 5ರಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆದರೆ, ವ್ಯವಸ್ಥಾಪಕ ನಿರ್ದೇಶಕರೇ ಎಲ್ಲ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಾಲ ಮಂಜೂರು ಮಾಡಿದ್ದಾರೆ. ಬಹುತೇಕ ಫಲಾನುಭವಿಗಳನ್ನು ನಿಗಮದ ಅಧ್ಯಕ್ಷರ ಟಿಪ್ಪಣಿ ಆಧರಿಸಿ ಮಂಜೂರು ಮಾಡಲಾಗಿದೆ. ಯೋಜನೆಗೆ ₹ 25 ಕೋಟಿಯನ್ನು ಬಳಸಿಕೊಳ್ಳುವ ಬಗ್ಗೆ ಸರ್ಕಾರದ ಆದೇಶವೂ ಇಲ್ಲ. ಕ್ರಿಯಾಯೋಜನೆಗೆ ಅನುಮೋದನೆಯನ್ನೂ ಪಡೆದಿಲ್ಲ. ನಿಗಮದ ನಿರ್ದೇಶಕ ಮಂಡಳಿಯ ಸಭೆಯ ನಿರ್ಣಯ ಆಧರಿಸಿ ಹಣ ವೆಚ್ಚ ಮಾಡಿರುವುದು ಗೊತ್ತಾಗಿದೆ.
*ಐರಾವತ ಮತ್ತು ಸಮೃದ್ಧಿ ಯೋಜನೆಯಲ್ಲಿ ಯಾವುದೇ ಗುರಿ ಇಲ್ಲದಿದ್ದರೂ 72 ಫಲಾನುಭವಿಗಳನ್ನು ನೇರವಾಗಿ ಆಯ್ಕೆ ಮಾಡಿ ಮಂಜೂರಾತಿ ನೀಡಲಾಗಿದೆ. ಐರಾವತ ಯೋಜನೆಯಲ್ಲಿ ಸರ್ಕಾರದ ಆದೇಶದಂತೆ ಮೆರಿಟ್ ಆಧಾರದಲ್ಲಿ ಆಯ್ಕೆಯಾಗಿದ್ದ 92 ಫಲಾನುಭವಿಗಳ ಮಂಜೂರಾತಿ ರದ್ದುಪಡಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸದಿದ್ದರೂ ನೇರವಾಗಿ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಯ ಕಾರ್ಯನಿರ್ವಹಿಸಿರುವ ಅಧಿಕಾರಿ ಮತ್ತು ನೌಕರರು ಅಕ್ರಮ ತನಿಖೆಗೆ ಅಸಹಕಾರ ತೋರಿಸಿದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
*ಗಂಗಾ ಕಲ್ಯಾಣ ಯೋಜನೆಯಲ್ಲಿ ಪಂಪ್‌ಸೆಟ್ ಪೂರೈಕೆದಾರರಿಗೆ 2017ರ ವರ್ಷದ ವ್ಯಾಟ್ ಮತ್ತು ಜಿಎಸ್‌ಟಿ ವ್ಯತ್ಯಾಸದ ತೆರಿಗೆ ಹಣ ₹ 3 ಕೋಟಿಯನ್ನು ಪಾವತಿಗೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ನೀಡದಿದ್ದರೂ, ಆದೇಶ ನೀಡಿದೆ ಎಂದು ಪಾವತಿಸಲಾಗಿದೆ. ಈ ಹಣ ಪಾವತಿಗೆ ಸಂಬಂಧಿಸಿದಂತೆ ನಿಗಮದ ನಿರ್ದೇಶಕ ಮಂಡಳಿಯಲ್ಲಿ ಚರ್ಚೆ ನಡೆದಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರ ಅಭಿಪ್ರಾಯ ಪಡೆಯಲು ನಿರ್ಣಯಿಸಲಾಗಿತ್ತು. ಆದರೆ, ಆಯುಕ್ತರು ಅಭಿಪ್ರಾಯ ನೀಡಲು ಒಪ್ಪಿಲ್ಲ. ಆದರೂ ವಿಷಯವನ್ನು ಮಂಡಳಿಯ ಸಭೆಯಲ್ಲಿ ಮಂಡಿಸದೆ, ತೆರಿಗೆ ಕನ್ಸಲ್ಟೆಂಟ್ ಅಭಿಪ್ರಾಯ ಪಡೆದು, ಟೆಂಡರ್ ಷರತ್ತು ಮತ್ತು ನ್ಯಾಯಾಲಯದ ಆದೇಶವನ್ನು ಸರಿಯಾಗಿ ಅರ್ಥೈಸದೆ ಪೂರೈಕೆದಾರರಿಗೆ ಹಣ ಪಾವತಿಸಲಾಗಿದೆ.
ಈ ವಿವರಗಳು ತನಿಖಾ ವರದಿಯಲ್ಲಿದೆ.
****
ಅಕ್ರಮದ ದೂರು ಬಂದ ಕಾರಣಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಕೆಎಟಿ ತಡೆಯಾಜ್ಞೆ ನೀಡಿದೆ. ಆರೋಪಗಳ ಬಗ್ಗೆ ತನಿಖೆಗೆ ಆದೇಶ ಮಾಡಿದ್ದೇನೆ
-ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.