ಭಾನುವಾರ, ಜೂನ್ 20, 2021
28 °C

ಖಾಸಗಿ ಶಾಲೆಗಳು ಶೇ 70ರಷ್ಟು ಬೋಧನಾ ಶುಲ್ಕ ಪಡೆಯಬೇಕು: ಎಸ್‌. ಸುರೇಶ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರಸಕ್ತ ಶೈಕ್ಷಣಿಕ (2020–21) ಸಾಲಿಗೆ ಮಾತ್ರ ಅನ್ವಯಿಸುವಂತೆ ರಾಜ್ಯದಲ್ಲಿ ಯಾವುದೇ ಮಾದರಿಯ ಪಠ್ಯಕ್ರಮ ಬೋಧಿಸುವ ಶಾಲೆಗಳು, ಕಳೆದ ಸಾಲಿನಲ್ಲಿ (2019–20) ಪಡೆದ ಬೋಧನಾ ಶುಲ್ಕದ ಶೇ 70ರಷ್ಟು ಪ್ರಮಾಣದ ಶುಲ್ಕ ಮಾತ್ರ ಪಡೆಯಬೇಕು‘ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಪ್ರಸಕ್ತ ಸಾಲಿನಲ್ಲಿ ಬೋಧನಾ ಶುಲ್ಕ ಹೊರತು
ಪಡಿಸಿ ಯಾವುದೇ ಅಭಿವೃದ್ಧಿ ಶುಲ್ಕ ಅಥವಾ ದೇಣಿಗೆ ಪಡೆಯುವಂತಿಲ್ಲ. ಈಗಾಗಲೇ ಶೇ 70ಕ್ಕಿಂತ ಹೆಚ್ಚು ಶುಲ್ಕ ಸಂಗ್ರಹಿಸಿದ್ದರೆ, ಹೆಚ್ಚುವರಿ ಮೊತ್ತವನ್ನು 2021-22ನೇ ಸಾಲಿನಲ್ಲಿ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಹುದು’ ಎಂದು ಅವರು ವಿವರಿಸಿದರು.

‘ಶುಲ್ಕ ನಿಗದಿಪಡಿಸುವ ಕುರಿತು ನಿರ್ಧಾರಕ್ಕೆ ಬರುವ ಮೊದಲು ಶಾಲಾ ಶಿಕ್ಷಣದ ಪಾಲುದಾರರ ಜತೆ ಹಲವು ಸುತ್ತಿನ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ, ಮುಖ್ಯಮಂತ್ರಿಯ ಅಭಿಪ್ರಾಯ ಪಡೆದು ತೀರ್ಮಾನಕ್ಕೆ ಬರಲಾಗಿದೆ’ ಎಂದರು.

‘ಬೋಧನಾ ಶುಲ್ಕವನ್ನು ಎರಡು ಅಥವಾ ಮೂರು ಕಂತುಗಳಲ್ಲಿ ಕಟ್ಟಲು ಅವಕಾಶ ಕಲ್ಪಿಸಬೇಕು. ಶುಲ್ಕ ವಿನಾಯಿತಿ ವಿಷಯದಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ಮಧ್ಯೆ ತಕರಾರು ಉಂಟಾದರೆ ಪರಿಹರಿಸಲು ಜಿಲ್ಲಾ ಮತ್ತು ರಾಜ್ಯಮಟ್ಟದ ಅಧಿಕಾರಯುತ ಸಮಿತಿ ರಚಿಸಿ ದೂರುಗಳನ್ನು ನಿರ್ವಹಿಸಲಾಗುವುದು’ ಎಂದು ಸಚಿವರು ತಿಳಿಸಿದರು.

‘ಶಿಕ್ಷಣ ಕಾಯ್ದೆ ಅನ್ವಯ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕಿರುವ ಅಧಿಕಾರ, ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕಾಯ್ದೆಯಲ್ಲಿರುವ ಅವಕಾಶಗಳನ್ನು ಉಲ್ಲೇಖಿಸಿ, ಸರ್ಕಾರದ ಪರಮಾಧಿಕಾರದಂತೆ ಶುಲ್ಕ ನಿಗದಿಪಡಿಸುವ ನಿರ್ಧಾರ ತೆಗೆದು
ಕೊಳ್ಳಲಾಗಿದೆ’ ಎಂದೂ ಸಚಿವರು ವಿವರಿಸಿದರು.

‘31ರ ಪ್ರತಿಭಟನೆ ವಾಪಸ್‌’

‘ಖಾಸಗಿ ಶಾಲಾ ಶುಲ್ಕಕ್ಕೆ ಸಂಬಂಧಿ ಸಿದಂತೆ ಬೋಧನಾ ಶುಲ್ಕವನ್ನು ಶೇ 70ರಷ್ಟು ಮಾತ್ರ ವಸೂಲು ಮಾಡಬೇಕು ಎಂಬ ರಾಜ್ಯ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿರುವ ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ, ಇದೇ 31ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ವಾಪಸ್‌ ಪಡೆದಿದೆ.

‘ಈ ಬಗ್ಗೆ ಸರ್ಕಾರ ತಕ್ಷಣ ಆದೇಶನ ಹೊರಡಿಸಬೇಕು. ಬೋಧನಾ ಶುಲ್ಕದಲ್ಲಿ ಕ್ರೀಡಾ ಚಟುವಟಿಕೆ, ಪ್ರಯೋಗಾಲಯ, ಗ್ರಂಥಾಲಯ ಶುಲ್ಕವೂ ಸೇರಿದೆ. ಈ ಮೂರನ್ನೂ ವಿದ್ಯಾರ್ಥಿಗಳು ಈ ಬಾರಿ ಬಳಸಿಲ್ಲ. ಹೀಗಾಗಿ, ಸರ್ಕಾರ ಆದೇಶ ಮಾಡುವ ವೇಳೆ ಈ ಶುಲ್ಕಗಳನ್ನು ವಸೂಲು ಮಾಡದಂತೆ ಸ್ಪಷ್ಟವಾಗಿ ತಿಳಿಸಬೇಕು’ ಎಂದೂ ಸಮಿತಿ ಮನವಿ ಮಾಡಿದೆ.

‘ಕಾಮ್ಸ್‌’ ಅಸಮಾಧಾನ

ಖಾಸಗಿ ಶಾಲೆಗಳು ಶೇ 30ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಬೇಕೆಂಬ ಎಂಬ ಸರ್ಕಾರ ನಿಲುವಿಗೆ ರಾಜ್ಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆ (ಕಾಮ್ಸ್‌) ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಕಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌, ‘ಶೇ 30ರಷ್ಟು ಬೋಧನಾ ಶುಲ್ಕ ಕಡಿತದ ಜೊತೆ ಶೇ 10ರಷ್ಟು ಅವಧಿ ಶುಲ್ಕ, ಹೋದ ವರ್ಷದಿಂದ ಈ ವರ್ಷಕ್ಕೆ ಸ್ವಾಭಾವಿಕವಾಗಿ ಶೇ 15ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ತಡೆ ನೀಡಿದೆ. ಅಲ್ಲದೆ, ಅಭಿವೃದ್ಧಿ ಶುಲ್ಕ ₹ 2,500 ಪಡೆಯದಂತೆ ಸೂಚಿಸಿದೆ. ವಿದ್ಯಾರ್ಥಿಗಳ ಶುಲ್ಕವನ್ನೇ ಅವಲಂಬಿಸಿರುವ ಶಿಕ್ಷಕರು ಮತ್ತು ಶಿಕ್ಷಕರೇತರ ಸಿಬ್ಬಂದಿ ವೇತನ ಬಗ್ಗೆ ಪ್ರಸ್ತಾಪಿಸಿಲ್ಲ’ ಎಂದು ಆಕ್ಷೇಪಿಸಿದರು

‘ಸರ್ಕಾರದ ಈ ತೀರ್ಮಾನದಿಂದ ಖಾಸಗಿ ಶಾಲೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸಿ ದ್ದೇವೆ. ಶನಿವಾರ (ಜ.30) ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ಸ್ವಾಗತ: ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ‘ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟ’ (ರುಪ್ಸಾ) ಸ್ವಾಗತಿಸಿದೆ.

‘ಈ ತೀರ್ಮಾನವನ್ನು ಸರ್ಕಾರ ಮೊದಲೇ ತೆಗೆದುಕೊಳ್ಳಬೇಕಿತ್ತು. ವಿಳಂಬ ವಾಗಿಯಾದರೂ ತೆಗೆದುಕೊಂಡಿರುವುದು ಸಮಾಧಾನದ ಸಂಗತಿ’ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಹೇಳಿದರು. ಸರ್ಕಾರ ಆದೇಶ ಮಾಡುವ ವೇಳೆ ಈ ಶುಲ್ಕಗಳನ್ನು ವಸೂಲು ಮಾಡದಂತೆ ಸ್ಪಷ್ಟವಾಗಿ ತಿಳಿಸಬೇಕು’ ಎಂದೂ ಸಮಿತಿ ಮನವಿ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು