ಭಾನುವಾರ, ಮೇ 22, 2022
25 °C
ಶಹಾಬಾದ್‌ನ ಇಎಸ್‌ಐ ಆಸ್ಪತ್ರೆ ಪುನರುಜ್ಜೀವನಗೊಳಿಸಲು ರಾಜ್ಯ ಸರ್ಕಾರದಿಂದ ₹ 12 ಕೋಟಿ ಅನುದಾನ

ಕಾರ್ಮಿಕರ ರಾಜ್ಯ ವಿಮಾ ನಿಗಮದ ಆಸ್ಪತ್ರೆ ನವೀಕರಣಗೊಂಡರೂ ಸೇವೆ ಅಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಜಿಲ್ಲೆಯ ಶಹಾಬಾದ್‌ ಹೊರವಲಯದಲ್ಲಿರುವ ಕಾರ್ಮಿಕರ ರಾಜ್ಯ ವಿಮಾ ನಿಗಮದ ಆಸ್ಪತ್ರೆ (ಇಎಸ್‌ಐ) 20 ವರ್ಷಗಳಿಂದ ಪಾಳು ಬಿದ್ದಿತ್ತು. ಅದನ್ನು ನವೀಕರಣಗೊಳಿಸಲಾಗಿದ್ದು, ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ 2021ರ ಜುಲೈ ಅಂತ್ಯದ ವೇಳೆಗೆ ಇದು ಸೇವೆಗೆ ಲಭ್ಯವಾಗಬೇಕಿತ್ತು.

ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕಿಸಲು ರಾಜ್ಯ ಸರ್ಕಾರ ಈ ಆಸ್ಪತ್ರೆಯನ್ನು ಪುನರುಜ್ಜೀವನಗೊಳಿಸಲು ₹ 12 ಕೋಟಿ ಅನುದಾನ ನೀಡಿದೆ. ₹4.68 ಕೋಟಿ ವೆಚ್ಚ ಮಾಡಿ ಕಟ್ಟಡ ನವೀಕರಣಗೊಳಿಸಲಾಗಿದೆ.

‌‘120 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳ ಖರೀದಿ ನಡೆದಿದೆ. ನವೀಕರಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆಮ್ಲಜನಕ ಪೂರೈಕೆ ಕೊಳವೆ ಮಾರ್ಗ ಅಳವಡಿಕೆ ಕಾರ್ಯ, ಉಪಕರಣಗಳ ಅಳವಡಿಕೆ ಮತ್ತು ವೈದ್ಯರ ನೇಮಕಾತಿ ಮಾತ್ರ ಬಾಕಿ ಇದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣ ಅಗ್ನಿಹೋತ್ರಿ ಹೇಳುತ್ತಾರೆ.

‘ಈ ಆಸ್ಪತ್ರೆಗೆ ಸುಣ್ಣ ಬಣ್ಣ ಬಳಿದಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಅಗತ್ಯ ವೈದ್ಯಕೀಯ ಸಲಕರಣೆ ಬಂದಿಲ್ಲ. ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ನಡೆಸಬೇಕೋ, ಇಎಸ್‌ಐನವರು ನಡೆಸಬೇಕೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇಎಸ್‌ಐನವರು ತಮಗೆ ಈಗಲೇ ಇರುವ ಆಸ್ಪತ್ರೆಗಳನ್ನು ನಡೆಸಲು ಆಗುತ್ತಿಲ್ಲ ಎಂದಿದ್ದಾರೆ. ಆರೋಗ್ಯ ಇಲಾಖೆಯವರನ್ನು ಕೇಳಿದರೆ ಹೊಸ ನೇಮಕಾತಿ ಆಗಬೇಕು. ಅದಕ್ಕಾಗಿ ಆರ್ಥಿಕ ಇಲಾಖೆಯ ಒಪ್ಪಿಗೆ ಬೇಕು ಎನ್ನುತ್ತಾರೆ. ಹಣ ಖರ್ಚಾದರೂ ಜನರಿಗೆ ಚಿಕಿತ್ಸೆ ಸಿಗದ ಸ್ಥಿತಿ ಇದೆ’ ಎನ್ನುತ್ತಾರೆ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ.

ಆಸ್ಪತ್ರೆ ಇದ್ದರೂ ತಪ್ಪದ ಅಲೆದಾಟ

ರಾಯಚೂರು: ಸಾಲಗುಂದಾ ಪ್ರಾಥಮಿಕ ಆರೋಗ್ಯ ಕೇಂದ್ರವು ಸುಸಜ್ಜಿತ ಕಟ್ಟಡ ಹೊಂದಿದ್ದರೂ ಕಾಯಂ ವೈದ್ಯರಿಲ್ಲ. ಒಂದು ವರ್ಷದಿಂದ ವೈದ್ಯರ ಹುದ್ದೆ ಖಾಲಿ ಇದೆ. ನಿಯೋಜನೆ ಮೇಲೆ ವೈದ್ಯರನ್ನು ನೇಮಿಸಿದರೂ, ಅವರು ಪದೇ ಪದೇ ಬದಲಾಗುತ್ತಾರೆ.

‘ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ಮತ್ತು ರಾಯಚೂರಿನಿಂದ 110 ಕಿ.ಮೀ.ದೂರದಲ್ಲಿರುವ ಸಾಲಗುಂದಾ ಗ್ರಾಮದ ಜನಸಂಖ್ಯೆ 10 ಸಾವಿರಕ್ಕೂ ಹೆಚ್ಚು. ಹಾವು ಕಡಿತ, ಹೆರಿಗೆ ನೋವು ಮುಂತಾದವುಗಳಿಗೆ ಸಿಂಧನೂರು ಇಲ್ಲವೇ ರಾಯಚೂರಿಗೆ ದೌಡಾಯಿಸಬೇಕು. ಇಲ್ಲಿ ಆಂಬುಲೆನ್ಸ್ ಕೂಡ ಇಲ್ಲ’ ಎಂದು ಸಾಲಗುಂದಾ ನಿವಾಸಿ ಎಸ್.ಎಂ.ಖಾದ್ರಿ ಹೇಳುತ್ತಾರೆ.

‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಸಿಗುವುದರ ಬಗ್ಗೆ ಖಾತ್ರಿ ಇರುವುದಿಲ್ಲ. ವಾಹನದ ವ್ಯವಸ್ಥೆ ಮಾಡಿಕೊಂಡು ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಹೋಗಬೇಕು’ ಎಂದು ಅವರು ವಿವರಿಸುತ್ತಾರೆ.

‘ರೋಗಿಗಳ ಚಿಕಿತ್ಸೆಗೆಂದೇ ಎರಡು ದಿನಗಳ ಹಿಂದೆಯಷ್ಟೇ ಆಯುಷ್ ವೈದ್ಯರನ್ನು ನೇಮಿಸಲಾಗಿದೆ. ಆಂಬುಲೆನ್ಸ್ ಸೌಲಭ್ಯಕ್ಕಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಅಯ್ಯನಗೌಡ ಹೇಳುತ್ತಾರೆ.

ಹತ್ತಾರು ಕಿ.ಮೀ. ಅಲೆದಾಡಬೇಕಾದ ಸ್ಥಿತಿ

ಹುಬ್ಬಳ್ಳಿ: ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಕಾಡು ಪ್ರದೇಶಗಳಲ್ಲಿರುವ ಗ್ರಾಮಗಳ ಜನರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಲು ಹತ್ತಾರು ಕಿ.ಮೀ. ನಡೆದುಕೊಂಡೇ ಹೋಗಬೇಕಾಗಿದೆ. ಮಳೆ ಬಂದರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುವುದರಿಂದ ಸಂಪರ್ಕವನ್ನೇ ಕಳೆದುಕೊಂಡು ಬಿಡುತ್ತವೆ. ಆಗ ಆರೋಗ್ಯ ಸೇವೆ ಪಡೆಯಲು ಇಲ್ಲಿನ ಜನರು ಪರದಾಡಬೇಕಾಗುತ್ತದೆ.

ಕಿತ್ತೂರು ಕರ್ನಾಟಕ ಭಾಗದಲ್ಲಿ ಈಗಲೂ ಜನಸಂಖ್ಯೆಗೆ ತಕ್ಕಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಇರುವ ಎಲ್ಲ ಪಿಎಚ್‌ಸಿಗಳಲ್ಲಿಯೂ ವೈದ್ಯರಿಲ್ಲ. ಎರಡೆರಡು ಪಿಎಚ್‌ಸಿಗಳ ಹೊಣೆ ಅವರ ಮೇಲಿದೆ. ಬೆಳಿಗ್ಗೆ ಬಂದರೆ, ಮಧ್ಯಾಹ್ನ ಇರುವುದಿಲ್ಲ. ರಾತ್ರಿ ವೇಳೆ ಆರೋಗ್ಯದಲ್ಲಿ ಏರುಪೇರಾದರೆ ತಾಲ್ಲೂಕು ಆಸ್ಪತ್ರೆಗಳಿಗೆ ದೌಡಾಯಿಸಬೇಕಾದ ಸ್ಥಿತಿ ಇದೆ. ಅಲ್ಲಿಯೂ ತಜ್ಞ ವೈದ್ಯರ ಕೊರತೆ ಇದ್ದು, ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ತುರ್ತು ಚಿಕಿತ್ಸೆ ಈಗಲೂ ಗ್ರಾಮೀಣ ಪ್ರದೇಶದ ಜನರಿಗೆ ಗಗನಕುಸುಮವಾಗಿದೆ.

ಸಾಕಷ್ಟು ಪಿಎಚ್‌ಸಿ ಕೇಂದ್ರಗಳಲ್ಲಿ ಎಂಬಿಬಿಎಸ್‌ ವೈದ್ಯರಿಲ್ಲ. ಆಯುಷ್ ವೈದ್ಯರ ಮೇಲೆ ನಡೆಸಲಾಗುತ್ತಿದೆ. ಎಕ್ಸ್‌ರೇ, ಸ್ಕ್ಯಾನಿಂಗ್‌, ರಕ್ತ ಪರೀಕ್ಷೆ ಪ್ರಯೋಗಾಲಯಗಳಲ್ಲಿ ಯಂತ್ರಗಳಿಲ್ಲದ್ದರಿಂದ ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳ ಮೊರೆ ಹೋಗಬೇಕಾದ ಸ್ಥಿತಿ ಇದೆ. ಸರ್ಕಾರಿ ಆಸ್ಪತ್ರೆಗೆ ದಾಖಲಾದರೂ, ಸ್ಕ್ಯಾನಿಂಗ್‌, ಕೆಲ ರಕ್ತ ಪರೀಕ್ಷೆಗಳನ್ನು ಹೊರಗಡೆಯೇ ಮಾಡಿಸಬೇಕಾಗಿದೆ. ಇದರಿಂದ ಬಡ ಜನರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ.

ಸಮಯಕ್ಕೆ ವೈದ್ಯರು ಬರಲ್ಲ; ಸಿಬ್ಬಂದಿ ಕೊರತೆ

ಮೈಸೂರು: ಮೈಸೂರು ಜಿಲ್ಲೆಯ ಗ್ರಾಮಾಂತರ ಭಾಗದ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಬಹುತೇಕ ವೈದ್ಯರು ನಗರದಲ್ಲಿ ನೆಲೆಸಿದ್ದು, ಗ್ರಾಮಾಂತರ ಆರೋಗ್ಯ ಕೇಂದ್ರ ತಲುಪುವಷ್ಟರಲ್ಲಿ ಮಧ್ಯಾಹ್ನ 12 ಗಂಟೆಯಾಗಿರುತ್ತದೆ. ಸಂಜೆಯೂ ಬೇಗನೇ ಹೊರಟು ಹೋಗುತ್ತಾರೆ. ಜೊತೆಗೆ ಸಿಬ್ಬಂದಿ ಕೊರತೆ. ನರ್ಸ್‌ಗಳೂ ಇಲ್ಲ, ಸೌಲಭ್ಯವೂ ಇಲ್ಲ.

ಮೈಸೂರು ತಾಲ್ಲೂಕಿನ ಕಡಕೊಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ಚಿಕಿತ್ಸೆಯೇ ಸಿಗುವುದಿಲ್ಲ. ಮೈಸೂರು– ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಗ್ರಾಮವಿದ್ದು, ಗರ್ಭಿಣಿಯರು, ಅಪಘಾತಕ್ಕೆ ಒಳಗಾದವರು ತುರ್ತು ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.

ಚಾಮರಾಜನಗರದ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು‌ ಸ್ಥಳೀಯವಾಗಿ ಉಳಿದುಕೊಳ್ಳುತ್ತಿಲ್ಲ. ತಡವಾಗಿ ಬರುವುದು, ಸಂಜೆ ಬೇಗ ಹೋಗುವ ದೂರುಗಳಿವೆ.

ಕೊಡಗು ಜಿಲ್ಲೆಯಲ್ಲಿ 104 ಗ್ರಾಮ ಪಂಚಾಯಿತಿಗಳಿದ್ದು, ಕೇವಲ 27 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಗುಡ್ಡಗಾಡು ಪ್ರದೇಶದ ಜನರು ಹಾಗೂ ತೋಟದ ಕಾರ್ಮಿಕರು ಕೊರೊನಾ ವೈರಾಣು ಸೋಂಕಿಗೆ ತುತ್ತಾದರೆ ದೂರದ ಆರೋಗ್ಯ ಕೇಂದ್ರಕ್ಕೆ ತೆರಳಿ, ತಪಾಸಣೆಗೆ ಒಳಗಾಗುವ ಪರಿಸ್ಥಿತಿ ಇದೆ.

ಪ್ರಥಮ ಮುಖ್ಯಮಂತ್ರಿ ಹುಟ್ಟೂರಲ್ಲಿ ವೈದ್ಯರಿಲ್ಲ

ಕೋಲಾರ: ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಹುಟ್ಟೂರಾದ ಕ್ಯಾಸಂಬಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವು ಕಾಯಂ ವೈದ್ಯರಿಲ್ಲದೆ ರೋಗಗ್ರಸ್ತವಾಗಿದೆ.

ಕೆಜಿಎಫ್‌ ತಾಲ್ಲೂಕಿನ ಕ್ಯಾಸಂಬಳ್ಳಿಯು ಹೋಬಳಿ ಕೇಂದ್ರವಾಗಿದ್ದು, ಸುಮಾರು 2 ಸಾವಿರ ಜನಸಂಖ್ಯೆ ಹೊಂದಿದೆ. ಅಕ್ಕಪಕ್ಕದ 100ಕ್ಕೂ ಹೆಚ್ಚು ಹಳ್ಳಿಗಳ ಜನರು ವೈದ್ಯಕೀಯ ಸೇವೆಗೆ ಈ ಹೋಬಳಿ ಕೇಂದ್ರದ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.

ಇಲ್ಲಿ ವೈದ್ಯರಾಗಿದ್ದ ಡಾ.ಸುನಿಲ್‌ ಅವರು ಕೆಜಿಎಫ್‌ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಮುಂಬಡ್ತಿ ಪಡೆದು ಹೋದ ನಂತರ ಕಳೆದೊಂದು ವರ್ಷದಿಂದ ಈ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೇಮಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು