ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಹುದ್ದೆಗೆ ವಿಧಾನಸೌಧದಲ್ಲೇ ₹15 ಲಕ್ಷ ನೀಡಿದ್ದೆ: ಪರಸಪ್ಪನ ವಿಡಿಯೊ ವೈರಲ್

ಪಿಎಸ್‌ಐ ನೇಮಕಾತಿಗೆ ಬಿಜೆಪಿ ಶಾಸಕ ದಢೇಸೂಗೂರು ಹಣ ಪಡೆದ ಆರೋಪ
Last Updated 12 ಸೆಪ್ಟೆಂಬರ್ 2022, 12:31 IST
ಅಕ್ಷರ ಗಾತ್ರ

ಕೊಪ್ಪಳ: ‘ನನ್ನ ಮಗನ ಪಿಎಸ್‌ಐ ನೇಮಕಾತಿ ಸಲುವಾಗಿ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂಗೂರು ಜೊತೆ ಒಪ್ಪಂದ ಮಾಡಿಕೊಂಡಿದ್ದ ಒಟ್ಟು ₹30 ಲಕ್ಷದ ಪೈಕಿ ₹15 ಲಕ್ಷ ಮುಂಗಡವನ್ನು ವಿಧಾನಸೌಧದ ಶಾಸಕರ ಭವನದಲ್ಲಿಯೇ ಕೊಟ್ಟಿದ್ದೆ’ ಎಂದು ಕುಷ್ಟಗಿ ತಾಲ್ಲೂಕಿನ ಪರಸಪ್ಪ ಎಂಬುವರು ಹೇಳಿದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಸೋಮವಾರ ವೈರಲ್‌ ಆಗಿದೆ.

ಇದೇ ಹೆಸರಿನಲ್ಲಿ ಕಳೆದ ವಾರ ಎರಡು ಆಡಿಯೊಗಳು ಬಿಡುಗಡೆಯಾದಾಗ ಪರಸಪ್ಪ ’ನಾನು ಅವನಲ್ಲ’ ಎಂದಿದ್ದರು. ಈ ಕುರಿತು ಪತ್ರಿಕಾಗೋಷ್ಠಿ ಕೂಡ ಮಾಡಿ ಸ್ಪಷ್ಟನೆ ನೀಡಿದ್ದರು. ಈಗ ಅದೇ ಪರಸಪ್ಪ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಕೇಳಿರುವ ಪ್ರಶ್ನೆಗಳಿಗೆ ಪರಸಪ್ಪ ಉತ್ತರ ನೀಡಿದ್ದಾರೆ.

ವಿಡಿಯೊ ಸಂಭಾಷಣೆ ಹೀಗಿದೆ.

* ಸರ್‌ ಏನು ನಿಮ್ಮ ಹೆಸರು?

ಪರಸಪ್ಪ: ಪರಸಪ್ಪ ಮೇಗೂರು, ಕುಷ್ಟಗಿ ತಾಲ್ಲೂಕು.

* ಸರ್‌ ಏನಿದು. ದಢೇಸೂಗೂರು ಜೊತೆ ಯಾವ ವಿಷಯಕ್ಕೆ ಗಲಾಟೆಯಾಗಿದೆ?

ಪರಸಪ್ಪ: 2019–2020ರಲ್ಲಿ 300 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಕರೆಯಲಾಗಿತ್ತು. ಶಾಸಕ ದಢೇಸೂಗೂರು ಅವರ ಸಂಬಂಧಿ ಯಮನೂರಪ‍್ಪ ಚೌಡಕಿ, ಪಟ್ಟಣ ಪಂಚಾಯಿತಿ ಸದಸ್ಯ ಆನಂದಪ್ಪ ಇವರಿಬ್ಬರೂ ‘ಸಾಹೇಬ್ರು ಸರ್ಕಾರದ ಒಳಗೆ ಬಹಳ ಆತ್ಮೀಯ ಇದ್ದಾರೆ. ನಿಮ್ಮ ಮಗನ ನೇಮಕಾತಿ ಮಾಡಿಸಿಕೊಡುವ ಸಂಬಂಧ ಕಮಿಟ್‌ಮೆಂಟ್‌ಗೆ ಮಾತನಾಡೋಣ ಬಾ’ ಎಂದು ದಢೇಸೂಗೂರು ಬಳಿ ಕರೆದುಕೊಂಡು ಹೋದರು.

ತೋಟದಲ್ಲಿ ನಡೆದ ಮಾತುಕತೆಯಲ್ಲಿ ನಿಮ್ಮ ಕೈಲಿ ಕೆಲಸ ಮಾಡಿಸಿಕೊಡುವುದು ಆಗುವುದಿದ್ದರೆ ಮಾತ್ರ ಹಣ ಪಡೆಯಿರಿ. ಇಲ್ಲವಾದರೆ ಬೇಡ ಎಂದು ಹೇಳಿದ್ದೆ. ₹30 ಲಕ್ಷಕ್ಕೆ ಒಪ್ಪಂದವಾಯಿತು. ₹15 ಲಕ್ಷ ಹಣವನ್ನು 2020ರ ಆಗಸ್ಟ್‌ನಲ್ಲಿ ಕೊಟ್ಟಿದ್ದೇವೆ.

* ಹಣ ಎಲ್ಲಿ ಕೊಟ್ಟಿದ್ದೀರಿ ಸರ್‌?

ಬೆಂಗಳೂರಿನ ಶಾಸಕರ ಭವನದಲ್ಲಿ ಹಣ ಕೊಟ್ಟಿದ್ದೇನೆ. ಅವರು ತಮ್ಮ ಹುಡುಗರಿಗೆ ಫಾರ್ಚ್ಯೂನರ್‌ ಕಾರು ಕಳುಹಿಸಿ ಹೋಟೆಲ್‌ನಿಂದ ಹಣ ತುಂಬಿದ ಚೀಲ ಹಾಗೂ ನನ್ನನ್ನು ಕರೆದುಕೊಂಡು ಶಾಸಕರ ಭವನಕ್ಕೆ ಹೋದರು. ಪಂಪಾಪತಿ ಎನ್ನುವ ವಾಹನ ಚಾಲಕ ಇದ್ದ. ನನಗೂ ಹಾಗೂ ಅವರಿಗೆ ಇಬ್ಬರಿಗೂ ಬೇಕಾದ ಯಮನೂರಪ್ಪ ಚೌಡಕಿ, ಯಲ್ಲಪ್ಪ ಸೇರಿದಂತೆ ಮೂರ್ನಾಲ್ಕು ಜನ ಇದ್ದರು. ಆಗ ಎಲ್ಲರೂ ಸೇರಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಊಟ ಮಾಡುತ್ತಿದ್ದೆವು. ಆಗ ಅವರು ‘ಪರಸಪ್ಪ ಕೆಲಸವಾದರೆ ಹಣ ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ನಿನ್ನ ಹಣ ವಾಪಸ್‌ ಕೊಡುತ್ತೇನೆ’ ಎಂದು ಕೈಯಲ್ಲಿ ಅನ್ನ ಹಿಡಿದು ಪ್ರಮಾಣ ಮಾಡಿದ್ದರು.

* ಮುಂದೇನಾಯಿತು?

ನಮ್ಮ ಕೆಲಸವಾಗಲಿಲ್ಲ. ಕೆಲಸವಾಗುವುದಿಲ್ಲ ಎನ್ನುವುದು ಹಣ ಕೊಟ್ಟ ಎರಡು ತಿಂಗಳಲ್ಲಿ ಖಚಿತವಾಗುತ್ತಿದ್ದಂತೆ ಹಣ ವಾಪಸ್‌ ಕೊಡುವಂತೆ ಕೇಳಿದ್ದೆ. ಈಗ ಎರಡು ವರ್ಷವಾಯಿತು. ಹಣ ಕೇಳಿದರೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಏನು ಮಾಡಿಕೊಳ್ಳುತ್ತೀಯಾ ಮಾಡಿಕೊ ಎನ್ನುತ್ತಾರೆ. ಹಣ ಸರ್ಕಾರಕ್ಕೆ ಕೊಟ್ಟಿದ್ದೇನೆ ಎನ್ನುತ್ತಾರೆ. ಸರ್ಕಾರಕ್ಕೆ ಹಣ ಕೊಟ್ಟಿದ್ದರೆ ರಸೀದಿ ಕೊಡಲಿ; ನಾನು ಕ್ಲೈಮ್‌ ಮಾಡಿಕೊಳ್ಳುತ್ತೇನೆ. ಕೋಟಿ ರೂಪಾಯಿ ಕೊಟ್ಟಿದ್ದೆಯೇನೊ ಎನ್ನುತ್ತಾರೆ. ಕೇಳಲು ಸಾಧ್ಯವಾಗದ ಅವಾಚ್ಯ ಪದಗಳನ್ನು ಬಳಸಿ ನನ್ನನ್ನು ನಿಂದಿಸಿದ್ದಾರೆ. ನನ್ನನ್ನು ಕರೆಯಿಸಿ ಗೂಂಡಾಗಿರಿ ಮಾಡಿದ್ದಾರೆ.

2021ರ ಸೆಪ್ಟೆಂಬರ್‌ 26ರಂದು ಕಾರಟಗಿಯಿಂದ ಎರಡು ಕಿ.ಮೀ. ದೂರದಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ನನ್ನನ್ನು ಬೆಳಗಿನ ಜಾವ ಕರೆಯಿಸಿ ಅಲ್ಲಿನ ಬಿಜೆಪಿ ಕಚೇರಿಯಲ್ಲಿ ಹಿಡಿದು ಕೂಡಿಸಿದ್ದರು.

ಪ್ರತಿಕ್ರಿಯೆಗೆ ಲಭ್ಯವಾಗದ ಪರಸಪ್ಪ

ವಿಡಿಯೊ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರತಿನಿಧಿ ಪರಸಪ್ಪ ಅವರಿಗೆ ಕರೆ ಮಾಡಿದರೆ ಮೊದಲು ಕರೆ ಸ್ವೀಕರಿಸಲಿಲ್ಲ. ಬಳಿಕ ಅವರ ಮೊಬೈಲ್‌ ಫೋನ್‌ ನಾಟ್‌ ರೀಚಬಲ್‌ ಎಂದು, ಮತ್ತೊಮ್ಮೆ ಪ್ರಯತ್ನಿಸಿದಾಗ ’ನೀವು ಕರೆ ಮಾಡಿರುವ ಸಂಖ್ಯೆ ಚಾಲನೆಯಲ್ಲಿ ಇಲ್ಲ’ ಎನ್ನುವ ಪ್ರತಿಕ್ರಿಯೆ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT