ಶುಕ್ರವಾರ, ನವೆಂಬರ್ 27, 2020
19 °C

PV Web Exclusive| ಸಿಗಂದೂರು; ಜಲರಾಶಿಯೂ, ಸಂಘರ್ಷದ ಪರಾಕಾಷ್ಠೆಯೂ...

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಶರಾವತಿ ಹಿನ್ನೀರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು. ಅಲ್ಲಿ ನೆಲೆಸಿರುವ ಚೌಡೇಶ್ವರಿ ದೇವಿ ದರ್ಶನಕ್ಕೆ ಪ್ರತಿ ವರ್ಷ 12 ಲಕ್ಷದಿಂದ 15 ಲಕ್ಷ ಜನರು ಬರುತ್ತಾರೆ. ಧರ್ಮಸ್ಥಳ ಬಿಟ್ಟರೆ ಅತಿ ಹೆಚ್ಚು ಜನರು ಆಣೆ, ಪ್ರಮಾಣ, ಹರಕೆ ತೀರಿಸುವುದು ಈ ದೇವಿಯ ಸನ್ನಿಧಾನದಲ್ಲೇ. ದೇವಿಯ ಮುಂದೆ ಸುಳ್ಳು ಹೇಳಿದರೆ, ಸುಳ್ಳಿನ ಪ್ರಮಾಣ ಮಾಡಿದರೆ ಘೋರ ಶಿಕ್ಷೆ ದೊರಕುತ್ತದೆ ಎಂಬ ಪ್ರತೀತಿ ಇದೆ.

ರಾಜಕಾರಣಿಗಳು, ಪಕ್ಷಾಂತರ ಮಾಡಿದವರು, ಕಳವು ಆರೋಪ ಹೊತ್ತವರು, ಕುಟುಂಬ ಕಲಹಕ್ಕೆ ಕಾರಣರಾದವರು, ವ್ಯವಹಾರದಲ್ಲಿ ಅಪನಂಬಿಕೆ... ಹೀಗೆ ಹಲವರು ನಮ್ಮದೇ ಸತ್ಯ ಎಂದು ಹೇಳಲು ದೇವಿಯ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತಾರೆ. ಅಲ್ಲಿ ಪ್ರಮಾಣ ಮಾಡಿದರೆ ಅವರ ಮೇಲಿನ ಅಪನಂಬಿಕೆ ದೂರವಾಗುತ್ತದೆ. ಮತ್ತೆ ಆರೋಪ ಮಾಡುವಂತಿಲ್ಲ. ಇಂತಹ ದೇವಿಯ ಸನ್ನಿಧಿಯಲ್ಲಿ ಆಡಳಿತ ಮಂಡಳಿ, ಅರ್ಚಕರ ಮಧ್ಯದ ಕಲಹ, ಹೊಡೆದಾಟ ಭಕ್ತ ಸಮೂಹವನ್ನು ಅಚ್ಚರಿಗೆ ನೂಕಿದೆ. 

1958–64ರ ಅವಧಿಯಲ್ಲಿ ನಿರ್ಮಾಣವಾದ ಶರಾವತಿ ಜಲಾಶಯಕ್ಕಾಗಿ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಇವರೆಲ್ಲ ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ, ಶಿವಮೊಗ್ಗ, ಶಿಕಾರಿಪುರ ತಾಲ್ಲೂಕಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪುನರ್‌ನೆಲೆ ಕಂಡುಕೊಂಡಿದ್ದರು. ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣದಿಂದ ಒಕ್ಕಲೆಬ್ಬಿಸಿದ ಕುಟುಂಬಗಳಲ್ಲಿ ಶೇಷಪ್ಪ ನಾಯ್ಕ ಅವರದ್ದೂ ಒಂದು ಕುಟುಂಬ. ಅವರ ಮನೆದೇವರೆ ಈಗಿನ ಸಿಗಂದೂರು ಚೌಡೇಶ್ವರಿ. ಶೇಷಪ್ಪ ಅವರ ಕುಟುಂಬ ಮುಳುಗಡೆ ನಂತರ ಸೊರಬ ತಾಲ್ಲೂಕಿನ ಹೊಳೆಕೊಪ್ಪದಲ್ಲಿ ನೆಲೆ ನಿಂತಿದೆ. ಚೌಡೇಶ್ವರಿ ಗುಡಿಯು ಮೂಲ ಸ್ಥಳ ಸೀಗೇಕಣಿವೆ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿತ್ತು. ಈಗಿನ ದೇವಸ್ಥಾನವಿರುವ ಸ್ಥಳದ ಕೆಳಬಾಗದಲ್ಲಿ ದೇವಿಯ ಮುಖವಾಡ ಇಟ್ಟು ಪೂಜೆ ನೆರವೇರಿಸಲಾಗುತ್ತಿತ್ತು.


ಲಾಂಚ್‌ ಮೂಲಕ ಸಿಂಗಂದೂರು ತಲುಪುತ್ತಿರುವ ದೃಶ್ಯ

1990ರ ಫೆಬ್ರುವರಿಯಲ್ಲಿ ಶೇಷಪ್ಪ ಅವರ ಪುತ್ರ ರಾಮಪ್ಪ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ರಚಿಸಿಕೊಂಡು ಈಗಿನ ಸಿಗಂದೂರಿಗೆ ಚೌಡೇಶ್ವರಿ ದೇವಿಯ ಮೂಲ ಶಿಲೆ ಸ್ಥಳಾಂತರಿಸಿದರು. ಅಲ್ಲೇ ಪ್ರತಿಷ್ಠಾಪನೆ ಮಾಡಿಸಿದರು. ನಂತರ ಶೇಷಗಿರಿ ಭಟ್ಟರು ಪ್ರಧಾನ ಅರ್ಚಕರಾಗಿ ಸೇವೆ ಆರಂಭಿಸಿದ್ದರು. ಇಬ್ಬರ ಸಹಯೋಗದಲ್ಲಿ ಸಿಗಂದೂರು ಕ್ಷೇತ್ರ ಮೂರು ದಶಕಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಸಾವಿರ ಸಂಖ್ಯೆಯಲ್ಲಿ ಬರುತ್ತಿದ್ದ ಭಕ್ತರ ಸಂಖ್ಯೆ ಇಂದು ಸರಾಸರಿ 15 ಲಕ್ಷ ದಾಟಿದೆ.

ಶರಾವತಿ ಹಿನ್ನೀರಿನ ರಮಣೀಯ ನೋಟ, ಲಾಂಚ್‌ ಅನುಭವ

ಸಿಗಂದೂರು ಕ್ಷೇತ್ರ ಸಾಕಷ್ಟು ಪ್ರಸಿದ್ಧಿ ಪಡೆಯಲು ಭಕ್ತರು ನಂಬಿದಂತೆ ಶಕ್ತಿ ದೇವತೆ ಕಾರಣರಾದರೂ, ದೇವಸ್ಥಾನಕ್ಕೆ ಹೋಗುವ ಮಾರ್ಗದ ಅನುಭವಕ್ಕಾಗಿಯೇ ಸಾಕಷ್ಟು ಪ್ರವಾಸಿಗರು ಈ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ದಟ್ಟ ಕಾನನದ ಮಧ್ಯೆ ಶರಾವತಿ ಹಿನ್ನೀರಿನ ಜಲರಾಶಿಯ ಮಧ್ಯೆ ಆ ಪ್ರಕೃತಿ ಸೌಂದರ್ಯ ಸವಿಯುತ್ತಾ ಅಂಬರಗೋಡ್ಲು–ಕಳಸವಳ್ಳಿ ನಡುವೆ ಲಾಂಚ್‌ನಲ್ಲಿ ಪ್ರಯಾಣಿಸುವ ಆನಂದ ವರ್ಣನಾತೀತ. ಇಂತಹ ಅನುಭವಕ್ಕಾಗಿಯೇ ಸಾಕಷ್ಟು ಜನರು ಸಿಗಂದೂರಿಗೆ ಬರುತ್ತಾರೆ.

ಟ್ರಸ್ಟ್ ಹುಂಡಿ, ಅರ್ಚಕರ ಆರತಿ ತಟ್ಟೆ

ಸಿಗಂದೂರು ಉನ್ನತಿಗೆ ಬರಲು ಧರ್ಮದರ್ಶಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ಭಟ್‌ ಅವರ ಜೋಡಿಯೇ ಕಾರಣ. ಪರಸ್ಪರ ಸಹಕಾರ, ಶ್ರಮದ ಫಲವಾಗಿ ಕ್ಷೇತ್ರ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಂತಹ ಜೋಡಿಯ ಸಾಧನೆಯ ಈ ಕ್ಷೇತ್ರದಲ್ಲಿ ಆಂತರಿಕ ಸಂಘರ್ಷ ನಡೆಯಲು ಪ್ರಮುಖ ಕಾರಣ ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣ. ದೇವಸ್ಥಾನ ಸೇರಿ ಮೂಲ ಸೌಕರ್ಯಗಳ ಕಟ್ಟಡಗಳನ್ನು ಹೊರತುಪಡಿಸಿದರೆ ಅಂತಹ ಬೆಲೆ ಬಾಳುವ ಆಸ್ತಿಯೇನು ಇಲ್ಲ. ಆದರೆ, ಪ್ರತಿ ವರ್ಷ ಭಕ್ತರು ಹಾಕುವ ಕಾಣಿಕೆ, ನೀಡುವ ದೇಣಿಗೆಯೇ ₹ 10 ಕೋಟಿ ದಾಟುತ್ತದೆ. ದೇವಸ್ಥಾನ ಟ್ರಸ್ಟ್ ಹುಂಡಿಗೆ ಬೀಳುವ ಹಣ, ಕೌಂಟರ್‌ನಲ್ಲಿ ಸಂಗ್ರಹಿಸುವ ರಸೀದಿ ಮೊತ್ತ ಸುಮಾರು ₹ 5 ಕೋಟಿಯಷ್ಟಾಗುತ್ತದೆ. ಇದನ್ನು ಲೆಕ್ಕಪತ್ರ ಸಮಿತಿಗೆ ನೀಡಲಾಗುತ್ತದೆ. ಆದರೆ, ಅರ್ಚಕರ ಬಳಿ ಭಕ್ತರು ನೀಡುವ ಚಿನ್ನ, ಹಣದ ಲೆಕ್ಕ ಕೊಡುತ್ತಿಲ್ಲ ಎನ್ನುವುದೇ ವಿವಾದಕ್ಕೆ ಮೂಲ ಕಾರಣ. ‘ಆರತಿ ತಟ್ಟೆಯ ಹಕ್ಕು’ ಟ್ರಸ್ಟ್ ಹಾಗೂ ಅರ್ಚಕರ ಮಧ್ಯೆ ಸಂಘರ್ಷ ಹುಟ್ಟು ಹಾಕಿದೆ. ಇದು ಅತಿರೇಕ ತಲುಪಿ ಹೊಡೆದಾಟಗಳೂ ನಡೆದಿವೆ.


ಸಿಗಂದೂರು  ಕ್ಷೇತ್ರಕ್ಕೆ ಆಗಮಿಸಿರುವ ಭಕ್ತರು

ರಾಜಕೀಯ ಪ್ರವೇಶ, ಮಠದ ಕಣ್ಣು

ಸಿಗಂದೂರು ಆರ್ಥಿಕವಾಗಿ ಪ್ರಬಲವಾಗುತ್ತಿದ್ದಂತೆ ಸ್ಥಳೀಯ ರಾಜಕಾರಣಿಗಳು, ಪ್ರಬಲ ಸಮುದಾಯಗಳು, ಪ್ರಬಲ ಮಠ ಮಾನ್ಯಗಳ ಕಣ್ಣು ಬಿದ್ದಿದೆ. ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳಿಗೆ ದೇವಸ್ಥಾನದಿಂದ ನೆರವು ದೊರಕುತ್ತದೆ. ಹಾಗಾಗಿ, ರಾಜಕಾರಣಿಗಳು ಟ್ರಸ್ಟ್‌ನ ಭಾಗವಾಗಲು ಪಿತೂರಿ ನಡೆಸುತ್ತಾರೆ. ಪ್ರಮುಖ ಮಠವೊಂದು ದೇವಸ್ಥಾನ ಸ್ವಾಧೀನಕ್ಕೆ ಪಡೆಯಲು ಹವಣಿಸುತ್ತಿದೆ ಎನ್ನುವುದು ಆರ್ಯಈಡಿಗ ಸಮಾಜದ ಕೆಲವು ಮುಖಂಡರ ಆರೋಪ. 

ಮಕರ ಸಂಕ್ರಮಣದಲ್ಲಿ ಜಾತ್ರೆ

ಪ್ರತಿ ವರ್ಷ ಮಕರ ಸಂಕ್ರಮಣದಲ್ಲಿ ಜನವರಿ 14 ಮತ್ತು 15ರಂದು ದಿನ ಸಿಗಂದೂರಿನಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಬರುವ ಭಕ್ತರಿಗೆ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಅಂಬಾರಗೋಡ್ಲು–ಕಳಸವಳ್ಳಿ ಲಾಂಚ್ ವ್ಯವಸ್ಥೆ ಇರುತ್ತದೆ. ರಸ್ತೆ ಮೂಲಕ ಬರುವವರು ಶಿವಮೊಗ್ಗದಿಂದ ಹೊಸನಗರ ಮೂಲಕ ಸಿಗಂದೂರು ತಲುಪಬಹುದು.

ವರ್ಷದೊಳಗೆ ಸೇತುವೆ ಸಿದ್ಧ

ಅಂಬರಗೋಡ್ಲು–ಕಳಸವಳ್ಳಿ ಮಧ್ಯೆ ₹ 425 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಆ ಭಾಗದ ಜನರು, ಭಕ್ತರು, ಪ್ರವಾಸಿಗರಿಗೆ ವರದಾನವಾಗಲಿದೆ. ಸುಮಾರು 2.44 ಕಿಲೋ ಮೀಟರ್ ಉದ್ದದ 14 ಮೀಟರ್ ಅಗಲದ ಸೇತುವೆ ನಿರ್ಮಾಣ ಭರದಿಂದ ಸಾಗಿದೆ.

ಹೊಸನಗರ–ನಿಟ್ಟೂರಿನಿಂದ ಸಿಗಂದೂರಿಗೆ ರಸ್ತೆ ಮಾರ್ಗವಿದೆ. ಸಾಗರದ ಹಾದಿಯಲ್ಲಿ ಶರಾವತಿ ಹಿನ್ನೀರಿನಲ್ಲಿ ಲಾಂಚ್ ಬಿಟ್ಟರೆ ಬೇರೆ ಯಾವ ಪರ್ಯಾಯ ಮಾರ್ಗವೂ ಇರಲಿಲ್ಲ. ಸೇತುವೆ ನಿರ್ಮಾಣದಿಂದ  ನಿತ್ಯ ಸಂಚಾರ ಮಾಡುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ.


ಶರಾವತಿ ಸೇತುವೆ ಕಾಮಗಾರಿ

ಅರಣ್ಯ ಒತ್ತುವರಿ ವಿವಾದ

ಸಿಗಂದೂರು ಕ್ಷೇತ್ರ 15ರಿಂದ 20 ಎಕರೆ ವಿಸ್ತಾರದಲ್ಲಿ ಹರಡಿದೆ. ಇದು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿರುವ ಕಾರಣ ಭೂಮಿಯ ಹಕ್ಕು ದೇವಸ್ಥಾನ ಟ್ರಸ್ಟ್ ಹೆಸರಿಗೆ ಆಗಿಲ್ಲ. ಚಿಕ್ಕದಾಗಿದ್ದ ಕ್ಷೇತ್ರವನ್ನು ಅರಣ್ಯ ಒತ್ತುವರಿ ಮಾಡಿ ವಿಸ್ತರಿಸಲಾಗಿದೆ. ಅರಣ್ಯ ಕಾನೂನು ಉಲ್ಲಂಘಿಸಲಾಗಿದೆ ಎನ್ನುವ ಆರೋಪವೂ ಇದೆ. ದೇವಸ್ಥಾನ, ಸಭಾಮಂಟಪ, ಪಾರ್ಕಿಂಗ್, ಭಕ್ತರ ವಸತಿ ನಿಲಯಗಳೂ ಸೇರಿ ಎಲ್ಲವೂ ಅನಧಿಕೃತವಾಗಿ ಕಟ್ಟಲಾಗಿದೆ. ಯಾವ ಆಸ್ತಿಯೂ ದೇವಸ್ಥಾನದ ಹೆಸರಿಗೆ ಇಲ್ಲ. ಒತ್ತುವರಿ ವಿರುದ್ಧ ಯಾವ ಪ್ರಕರಣಗಳೂ ದಾಖಲಾಗಿಲ್ಲ.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು